Universe Baby Boss: ಐಪಿಎಲ್ 2026 ಟೂರ್ನಿಯಿಂದ ಎಸ್‌ಆರ್‌ಎಚ್ ಹೊರತಳ್ಳಿದ ಆರ್‌ಆರ್ ವಂಡರ್ ಕಿಡ್ ವೈಭವ್
RR Vs SRH IPL 2026: ಮುಲ್ಲನ್‌ಪುರ್‌ನಲ್ಲಿ ಬುಧವಾರ (ಮೇ 27) ನಡೆದ ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ 15 ವರ್ಷದ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಎಸ್‌ಆರ್‌ಎಚ್ ವಿರುದ್ಧ 47 ರನ್‌ಗಳ ಭರ್ಜರಿ ಜಯ ದಾಖಲಿಸಿ ಕ್ವಾಲಿಫೈಯರ್ 2ಕ್ಕೆ ಎಂಟ್ರಿ ಕೊಟ್ಟಿದೆ. ಇನ್ನೂ ಈ ಸೋಲಿನೊಂದಿಗೆ ಸನ್‌ರೈಸರ್ಸ್ ಹೈದದರಾಬಾದ್ ಈ ಬಾರಿಯ ಟೂರ್ನಿಯಿಂದಲೇ ಹೊರಬಿದ್ದೊದೆ.
ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ಆಯ್ಕೆ ಮಾಡಲು ನಿರ್ಧರಿಸಿದರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ರಾಜಸ್ಥಾನ್ ರಾಯಲ್ಸ್ ತಂಡವು 15 ವರ್ಷದ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಅವರ ಆಕ್ರಮಣಕಾರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 243 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಆದರೆ ಎಸ್‌ಆರ್‌ಎಚ್ 19.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿ ಸೋಲನುಭವಿಸಿತು.

SRH ಬೌಲರ್‌ಗಳ ಬೆವರಿಳಿಸಿದ ವಂಡರ್ ಕಿಡ್
ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ ಭರ್ಜರಿ ಅರ್ಧಶತಕಗಳ ನೆರವಿನಿಂದ ಬೃಹತ್ ಮೊತ್ತ ಪೇರಿಸಿತು.ಇತರ ಬ್ಯಾಟರ್‌ಗಳಿಂದ ಅಷ್ಟಾಗಿ ಬೆಂಬಲ ಸಿಗದಿದ್ದರೂ ಈ ಇಬ್ಬರ ಆಟ ತಂಡದ ಮೊತ್ತವನ್ನು ಏರಿಸಿತು. ವಂಡರ್ ಕಿಡ್ ವೈಭವ್ ಕೇವಲ 29 ಎಸೆತಗಳಲ್ಲಿ 5 ಬೌಂಡರಿ, 12 ಸಿಕ್ಸರ್‌ಗಳ ಸಹಿತ 97 ರನ್ ಚಚ್ಚಿ ಎದುರಾಳಿ ಬೌಲರ್‌ಗಳಿಗೆ ನಡುಕ ಹುಟ್ಟಿಸಿದರು. ಧ್ರುವ್ ಜುರೆಲ್ 50(21), ಯಶಸ್ವಿ ಜೈಸ್ವಾಲ್ 29(29), ನಾಯಕ ರಿಯಾನ್ ಪರಾಗ್ 26(12), ಡೋನೊವನ್ ಫೆರೇರ 12(9), ರವೀಂದ್ರ ಜಡೇಜಾ ಅಜೇಯ 12 ರನ್‌ಗಳ ಕೊಡುಗೆ ನೀಡಿದರು.
ಬೌಲಿಂಗ್‌ನಲ್ಲಿ ಮಿಂಚಿದ ಜೋಫ್ರಾ ಆರ್ಚರ್
ಬಳಿಕ 244 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಆರ್‌ಆರ್ ಸ್ಟಾರ್ ಬೌಲರ್ ಜೋಫ್ರಾ ಆರ್ಚರ್ ಆರಂಭದಲ್ಲೇ ಆಘಾತ ನೀಡಿದರು. ಹೈದರಾಬಾದ್‌ನ ಪ್ರಮುಖ ಬ್ಯಾಟರ್‌ಗಳಾದ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ಇಶಾನ್ ಕಿಶನ್ ಅವರ ವಿಕೆಟ್ ಕಿತ್ತು ಪೆವಿಲಿಯನ್‌ಗೆ ಅಟ್ಟಿದರು.
ರಾಜಸ್ಥಾನ್ ರಾಯಲ್ಸ್ ಪರ ಬೌಲಿಂಗ್ ದಾಳಿ ನಡೆಸಿದ ಜೋಫ್ರಾ ಆರ್ಚರ್ ಅವರು ಎಸ್‌ಆರ್‌ಎಚ್‌ನ ಪ್ರಮುಖ ವಿಕೆಟ್‌ಗಳನ್ನ ಕಿತ್ತು ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ನಾಂದ್ರೆ ಬರ್ಗರ್, ಸುಶಾಂತ್ ಮಿಶ್ರಾ ಹಾಗೂ ರವೀಂದ್ರ ಜಡೇಜಾ 2 ವಿಕೆಡ್ ಕೆಡವಿದರೆ, ಕನ್ನಡಿಗ ಯಶ್ ರಾಜ್ ಪೂಂಜಾ 1 ವಿಕೆಟ್ ಕಬಳಿಸಿದರು.
ಎಸ್‌ಆರ್‌ಎಚ್, ಬೌಲಿಂಗ್ ಬ್ಯಾಟಿಂಗ್‌ನಲ್ಲಿ ವೈಫಲ್ಯ
ಎಸ್‌ಆರ್‌ಎಚ್ ಪರ ಬ್ಯಾಟ್ ಬೀಸಿದ ನಿತೀಶ್ ಕುಮಾರ್ ರೆಡ್ಡಿ 38(20), ಸಲಿಲ್ ಅರೋರಾ 35(21), ಇಶಾನ್ ಕಿಶನ್ 33(11), ಶಿವಾಂಗ್ ಕುಮಾರ್ 27(24), ಟ್ರಾವಿಸ್ ಹೆಡ್ 17 ರನ್ ಕಲೆಹಾಕಿದರು. ತಂಡದ ಸೋಲಿಗೆ ಪ್ರಮುಖ ಕಾರಣ ಅಂದ್ರೆ ಬೌಲರ್‌ಗಳು ದುಬಾರಿಯಾದರು. ಅದರಲ್ಲೂ ನಾಯಕ ಪ್ಯಾಟ್ ಕಮ್ಮಿನ್ಸ್ ಅತೀ ಹೆಚ್ಚು 65 ರನ್‌ಗಳನ್ನು ಬಿಟ್ಟುಕೊಟ್ಟರು. ಮತ್ತೊಂದೆಡೆ ಆರಂಭಿಕ ಬ್ಯಾಟರ್‌ಗಳು ಹೆಚ್ಚು ಸಮಯ ಕ್ರೀಸ್‌ನಲ್ಲಿ ನಿಲ್ಲದೆ ಬೇಗನೇ ವಿಕೆಟ್ ಒಪ್ಪಿಸಿದ್ದು ಸಹ ಸೋಲಿಗೆ ಕಾರಣವಾಗಿದೆ.
ಕ್ವಾಲಿಫೈಯರ್ 2ಕ್ಕೆ ಎಂಟ್ರಿ ಕೊಟ್ಟ ಆರ್‌ಆರ್
ಈ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳದ ಸನ್‌ರೈಸರ್ಸ್ ಹೈದರಾಬಾದ್ 19.2 ಓವರ್‌ಗಳಲ್ಲಿ 196 ರನ್‌ಗಳಿಗೆ ಆಲ್‌ಔಟ್ ಆಯಿತು. ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ಈಗ ಕ್ವಾಲಿಫೈಯರ್ 2 ಪಂದ್ಯಕ್ಕೆ ಅರ್ಹತೆ ಪಡೆದಿದೆ. ಅಲ್ಲಿ ಅವರು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದ್ದಾರೆ. ಕ್ವಾಲಿಫೈಯರ್ 1ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ 92 ರನ್‌ಗಳ ಭರ್ಜರಿ ಜಯ ಸಾಧಿಸಿ ನೇರವಾಗಿ ಫೈನಲ್ ತಲುಪಿದೆ. ಕ್ವಾಲಿಫೈಯರ್ 2ನಲ್ಲಿ ಗೆದ್ದ ತಂಡವು ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ಧ ಆಡಲಿದೆ.












Click it and Unblock the Notifications