RR Vs LSG: ಸಂಜು ಸ್ಯಾಮ್ಸನ್ ಅಬ್ಬರ; ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದ ರಾಜಸ್ಥಾನ ರಾಯಲ್ಸ್
ಐಪಿಎಲ್ 2024ರ ಆವೃತ್ತಿಯಲ್ಲಿ ತಾನು ಆಡಿದ ಮೊದಲ ಪಂದ್ಯದಲ್ಲೇ ರಾಜಸ್ಥಾನ ರಾಯಲ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 20 ರನ್‌ಗಳ ಗೆಲುವು ಸಾಧಿಸಿದೆ. ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಸುಲಭ ಗೆಲುವು ಸಾಧಿಸಿತು.
ರಾಜಸ್ಥಾನ ರಾಯಲ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದರೂ ರಾಜಸ್ಥಾನದ ಆರಂಭ ಉತ್ತಮವಾಗಿರಲಿಲ್ಲ. ಜೋಸ್ ಬಟ್ಲರ್ 11 ರನ್ ಗಳಿಸಿ ಔಟಾದರು. ಯಶಸ್ವಿ ಜೈಸ್ವಾಲ್ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಆದರೆ ನಾಯಕ ಸಂಜು ಸ್ಯಾಮ್ಸನ್ 52 ಎಸೆತಗಳಲ್ಲಿ 3 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ ಅಜೇಯ 82 ರನ್ ಗಳಿಸುವ ಮೂಲಕ ರಾಜಸ್ಥಾನ ರಾಯಲ್ಸ್ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ರಿಯಾನ್ ಪರಾಗ್ 29 ಎಸೆತಗಳಲ್ಲಿ 1 ಬೌಂಡರಿ 3 ಸಿಕ್ಸರ್ ಸಹಿತ 43 ರನ್ ಗಳಿಸಿದರು. ಕೊನೆಯಲ್ಲಿ ಧ್ರುವ್ ಜುರೆಲ್ 12 ಎಸೆತಗಳಲ್ಲಿ 20 ರನ್ ಗಳಿಸಿ ಸಂಜು ಸ್ಯಾಮ್ಸನ್‌ಗೆ ಜೊತೆಯಾದರು. ಅಂತಿಮವಾಗಿ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 193 ರನ್ ಗಳಿಸಿತು.
ಕೆಎಲ್ ರಾಹುಲ್, ಪೂರನ್ ಹೋರಾಟ ವ್ಯರ್ಥ
ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ರಾಜಸ್ಥಾನ ರಾಯಲ್ಸ್ ಬೌಲರ್ ಗಳು ಆರಂಭದಲ್ಲೇ ಆಘಾತ ನೀಡಿದರು. ಕ್ವಿಂಟನ್ ಡಿ ಕಾಕ್ 4 ರನ್ ಗಳಿಸಿ ಔಟಾದರೆ, ದೇವದತ್ ಪಡಿಕ್ಕಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆಯುಶ್ ಬದೋನಿ 1 ರನ್ ಗಳಿಸಿ ಔಟಾದರು.
ನಾಯಕ ಕೆಎಲ್ ರಾಹುಲ್ 44 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್ ಸಹಿತ 58 ರನ್ ಗಳಿಸಿದರೆ, ದೀಪಕ್ ಹೂಡಾ 13 ಎಸೆತಗಳಲ್ಲಿ 26 ರನ್ ಗಳಿಸಿ ಔಟಾದರು. ನಿಕೋಲಸ್ ಪೂರನ್ ಕೊನೆಯಲ್ಲಿ 41 ಎಸೆತಗಳಲ್ಲಿ 4 ಸಿಕ್ಸರ್, 4 ಬೌಂಡರಿ ಸಹಿತ ಅಜೇಯ 64 ರನ್ ಗಳಿಸಿದರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ.
ಕೊನೆಯ ಓವರ್ ಗಳಲ್ಲಿ ಸಂದೀಶ್ ಶರ್ಮಾ, ಆವೇಶ್ ಖಾನ್ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್‌ಎಸ್‌ಜಿ ಬ್ಯಾಟರ್ ಗಳನ್ನು ಕಟ್ಟಿಹಾಕಿದರು. ಅಂತಿಮವಾಗಿ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿದ ಲಕ್ನೋ ಸೂಪರ್ ಜೈಂಟ್ಸ್ 20 ರನ್‌ಗಳಿಂದ ಸೋಲೊಪ್ಪಿಕೊಂಡಿತು.












Click it and Unblock the Notifications