RR vs DC: ಇಂದು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆರ್‌ಸಿಬಿ ಅಭಿಮಾನಿಗಳ ಬೆಂಬಲ! ಕಾರಣವೇನು?
ರಾಜಸ್ಥಾನ ರಾಯಲ್ಸ್ ತಂಡ ಇಂದು ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ರಾಜಸ್ಥಾನ ರಾಯಲ್ಸ್ ತಂಡದ ಪ್ಲೇಆಫ್ ಅವಕಾಶ ಈಗಾಗಲೇ ಬಹುತೇಕ ಖಚಿತವಾಗಿದ್ದು, ಮೊದಲ ಸ್ಥಾನಕ್ಕೇರುವ ಲೆಕ್ಕಾಚಾರದಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇಂದು ಮಾಡು ಇಲ್ಲವೆ ಮಡಿ ಪಂದ್ಯವಾಗಿದ್ದು, ಪ್ಲೇ ಆಫ್ ಕನಸು ಜೀವಂತವಾಗಿರಲು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ರಾಜಸ್ಥಾನ ರಾಯಲ್ಸ್ ತಂಡಕ್ಕೆ ಇಂದು ಆರ್‌ಸಿಬಿ ಅಭಿಮಾನಿಗಳು ಕೂಡ ಬೆಂಬಲ ನೀಡಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಸೋಲಬೇಕೆಂದು ಬಯಸುತ್ತಾರೆ.

ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆರ್‌ಸಿಬಿ ಅಭಿಮಾನಿಗಳ ಬೆಂಬಲ ಯಾಕೆ ಅಂತಿರಾ, ಇದೆಲ್ಲಾ ಅಭಿಮಾನಿಗಳ ಕ್ಯಾಲ್ಕುಲೇಟರ್ ಮಹಿಮೆ!, ಹೌದು, ಆರ್‌ಸಿಬಿ ಪ್ಲೇ ಆಫ್ ತಲುಪುವ ಅವಕಾಶ ಜೀವಂತವಾಗಿರಬೇಕಾದರೆ ಇಂದು ಡೆಲ್ಲಿ ಕ್ಯಾಪಿಟಲ್ಸ್ ಸೋಲಬೇಕು.
ಹೇಗಿದೆ ಆರ್‌ಸಿಬಿ ಪ್ಲೇಆಫ್ ಲೆಕ್ಕಾಚಾರ
ಆರ್‌ಸಿಬಿ ಪ್ಲೇ ಆಫ್ ತಲುಪಬೇಕಾದರೆ ರಾಜಸ್ಥಾನ ರಾಯಲ್ಸ್ ಮತ್ತು ಕೆಕೆಆರ್ ತಂಡಗಳು ಉಳಿದಿರುವ ಪಂದ್ಯಗಳನ್ನು ಗೆಲ್ಲಬೇಕಿದೆ. ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ಉಳಿದ ಪಂದ್ಯಗಳನ್ನು ಸೋತರೆ ಆರ್‌ಸಿಬಿ ಪ್ಲೇ ಆಫ್ ತಲುಪುವ ಸಾಧ್ಯತೆ ಇದೆ. ಮುಖ್ಯವಾಗಿ ಆರ್‌ಸಿಬಿ ಉಳಿದ ಎಲ್ಲಾ ಪಂದ್ಯಗಳಲ್ಲಿ ಗೆಲ್ಲಬೇಕಿದೆ.
ಬಲಿಷ್ಠವಾಗಿದೆ ರಾಜಸ್ಥಾನ ರಾಯಲ್ಸ್
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲಸ್ಥಾನಕ್ಕೇರುವ ಲೆಕ್ಕಾಚಾರ ರಾಜಸ್ಥಾನ ರಾಯಲ್ಸ್‌ದ್ದಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲೂ ಬಲಿಷ್ಠವಾಗಿದ್ದು, ಡೆಲ್ಲಿಯನ್ನು ಸುಲಭವಾಗಿ ಮಣಿಸುವ ಉತ್ಸಾಹದಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೊನೆ ಎಸೆತದಲ್ಲಿ ಒಂದ್ ರನ್‌ನಿಂದ ಸೋತಿದ್ದ ರಾಜಸ್ಥಾನ ಮತ್ತೆ ಗೆಲುವಿನ ಹಳಿಗೆ ಮರಳಲು ಸಜ್ಜಾಗಿದೆ.
ಮತ್ತೊಂದೆಡೆ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕೂಡ ರಾಜಸ್ಥಾನವನ್ನು ಮಣಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಹೈ ಸ್ಕೋರಿಂಗ್ ಪಂದ್ಯವನ್ನು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications