Rohit Sharma: ಅಷ್ಟು ದೂರ ಸಿಕ್ಸ್ ಹೇಗೆ ಹೊಡಿತಿಯಾ? ಅಂಪೈರ್ ಪ್ರಶ್ನೆಗೆ ರೋಹಿತ್ ಶರ್ಮಾ ಹೇಳಿದ್ದೇನು
ಏಕದಿನ ವಿಶ್ವಕಪ್ 2023ರ ಪಂದ್ಯಾವಳಿಯ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅಬ್ಬರಿಸಿದರು. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡಿರುವ ಹಿಟ್‌ಮ್ಯಾನ್, ಪಾಕಿಸ್ತಾನದ ವಿರುದ್ಧದ ಪಂದ್ಯದ ಬಳಿಕ ಸಿಕ್ಸರ್ ಬಾರಿಸುವ ಬಗೆಗಿನ ಗುಟ್ಟು ಬಿಚ್ಚಿಟ್ಟಿದ್ದಾರೆ.
ರೋಹಿತ್ ಶರ್ಮಾ ಅವರು ಸುಲಭವಾಗಿ ಸಿಕ್ಸರ್ ಹೊಡೆಯುವುದನ್ನು ಕಂಡು ಸ್ವತಃ ಅಂಪೈರ್ ಕೂಡ ಅಚ್ಚರಿ ಪಟ್ಟಿದ್ದಾರೆ. ಮೈದಾನದಲ್ಲಿ ರೋಹಿತ್ ಬಳಿ ಅಷ್ಟು ದೂರ ಸಿಕ್ಸರ್ ಬಾರಿಸಿದ್ದೀಯಲ್ಲ ಬ್ಯಾಟ್‌ನಲ್ಲಿ ಏನಾದರೂ ಇದೆಯಾ ಎಂದು ಕೇಳಿದರು ಎಂದು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.

ಪಾಕಿಸ್ತಾನದ ವಿರುದ್ಧದ ಪಂದ್ಯ ಮುಕ್ತಾಯವಾದ ಬಳಿಕ ಹಾರ್ದಿಕ್ ಪಾಂಡ್ಯ ರೋಹಿತ್ ಶರ್ಮಾ ಬಳಿ ಬಂದು ಸಂದರ್ಶಕರಂತೆ ಪ್ರಶ್ನೆಗಳನ್ನು ಕೇಳಿದರು. ಸಿಕ್ಸರ್ ಸಿಡಿಸಿದ ನಂತರ ತಮ್ಮ ಸಂಭ್ರಮಾಚರಣೆ ಕುರಿತು ಮಾತನಾಡಿದ ರೋಹಿತ್, "ಅವರು (ಅಂಪೈರ್ ಮರೈಸ್ ಎರಾಸ್ಮಸ್) ನನ್ನನ್ನು ಕೇಳುತ್ತಿದ್ದರು, 'ನೀವು ಅಂತಹ ಸಿಕ್ಸರ್‌ಗಳನ್ನು ಹೇಗೆ ಹೊಡೆಯಲು ಸಾಧ್ಯವಾಯಿತು? ನಿಮ್ಮ ಬ್ಯಾಟ್‌ನಲ್ಲಿ ಏನಾದರೂ ಇದೆಯೇ?' ನಾನು ಅವನಿಗೆ ಹೇಳಿದೆ, ಇಲ್ಲ ಬ್ಯಾಟ್‌ನಲ್ಲಿ ಅಲ್ಲ, ನನ್ನ ತೋಳಿನಲ್ಲಿದೆ" ಎಂದು ಹೇಳಿದ್ದಾಗಿ ತಿಳಿಸಿದರು.
— Rohit Sharma Trends™ (@TrendsRohit) October 15, 2023
ಅತ್ಯುತ್ತಮ ಫಾರ್ಮ್‌ನಲ್ಲಿರುವ ರೋಹಿತ್ ಶರ್ಮಾ
ರೋಹಿತ್ ಶರ್ಮಾ ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ, ಪ್ರಸ್ತುತ 2023 ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಮೊಹಮ್ಮದ್ ರಿಜ್ವಾನ್ (248 ರನ್) ಮತ್ತು ಡೆವೊನ್ ಕಾನ್ವೇ (229 ರನ್) ಗಳಿಸಿದ್ದರೆ ರೋಹಿತ್ ಶರ್ಮಾ 217 ರನ್ ಗಳಿಸಿದ್ದಾರೆ.
ಸಿಕ್ಸರ್ ಸಿಡಿಸುವಲ್ಲಿ ವಿಶ್ವದಾಖಲೆ
ಇನ್ನು ಸಿಕ್ಸರ್ ಬಾರಿಸುವಲ್ಲಿ ರೋಹಿತ್ ಶರ್ಮಾ ಮತ್ತೊಂದು ದಾಖಲೆ ಬರೆದಿದ್ದಾರೆ. ಅಫ್ಘಾನಿಸ್ತಾನದ ವಿರುದ್ದದ ಪಂದ್ಯದಲ್ಲಿ ಕ್ರಿಸ್ ಗೇಲ್ ದಾಖಲೆ ಮುರಿದು ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎನಿಸಿಕೊಂಡರೆ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಏಕದಿನ ಮಾದರಿಯಲ್ಲಿ 300 ಸಿಕ್ಸರ್ ಪೂರೈಸಿದರು.
ಏಕದಿನ ಮಾದರಿಯಲ್ಲಿ ಶಾಹಿನ್ ಅಫ್ರಿದಿ 351 ಸಿಕ್ಸರ್ ಸಿಡಿಸಿ ಅಗ್ರಸ್ಥಾನದಲ್ಲಿದ್ದರೆ, ಕ್ರಿಸ್ ಗೇಲ್ 331 ಸಿಕ್ಸರ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ, ರೋಹಿತ್ ಶರ್ಮಾ 303 ಸಿಕ್ಸರ್ ಸಿಡಿಸಿದ್ದು ಮೂರನೇ ಸ್ಥಾನದಲ್ಲಿದ್ದಾರೆ. ಏಕದಿನ ಮಾದರಿಯಲ್ಲಿ 300 ಸಿಕ್ಸರ್ ಬಾರಿಸಿದ ಏಕೈಕ ಭಾರತೀಯ ಆಟಗಾರ ಎನ್ನುವ ಹೆಗ್ಗಳಿಕೆ ರೋಹಿತ್ ಶರ್ಮಾ ಅವರದ್ದಾಗಿದೆ.
ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ 6 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ 86 ರನ್ ಗಳಿಸಿದ ರೋಹಿತ್ ಶರ್ಮಾ ಭಾರತ ಸುಲಭ ಜಯ ಸಾಧಿಸಲು ನೆರವಾದರು. ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ ಈಗ ಅಗ್ರಸ್ಥಾನದಲ್ಲಿದೆ.












Click it and Unblock the Notifications