Rohit Sharma: ಕೊಹ್ಲಿ, ರೋಹಿತ್ ಟಿ20 ತಂಡದಲ್ಲಿ ಯಾಕಿಲ್ಲ ಗೊತ್ತಾ? ಮತ್ತೆ ಟಿ20 ತಂಡಕ್ಕೆ ಬರೋದು ಫಿಕ್ಸ್!
2022ರ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಆಡುತ್ತಿಲ್ಲ. ಹಾರ್ದಿಕ್ ಪಾಂಡ್ಯ ಟಿ20 ತಂಡದ ನಾಯಕತ್ವ ವಹಿಸಿಕೊಂಡಿದ್ದು, ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ಮಾತ್ರ ಭಾರತ ತಂಡಕ್ಕಾಗಿ ಆಡುತ್ತಿದ್ದಾರೆ. ಏಕದಿನ ವಿಶ್ವಕಪ್‌ಗಾಗಿ ಅವರು ಟಿ20 ಮಾದರಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಮುಂತಾದ ಇತರ ಅನುಭವಿಗಳ ಪರಿಸ್ಥಿತಿಯೂ ಇದೇ ಆಗಿದೆ.

ಈಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈ ಬಗ್ಗೆ ಮಾತನಾಡಿದ್ದು ತಾನು ಮತ್ತು ವಿರಾಟ್ ಕೊಹ್ಲಿ ಟಿ20 ತಂಡದಲ್ಲಿ ಯಾಕೆ ಆಡುತ್ತಿಲ್ಲ ಎಂದು ಕಾರಣ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ರೋಹಿತ್ ಅವರ ಮತ್ತು ವಿರಾಟ್ ಟ್ವೆಂಟಿ 20 ಐಗಳ ಅನುಪಸ್ಥಿತಿಯ ಬಗ್ಗೆ ಕೇಳಿದಾಗ, ಉತ್ತರ ನೀಡಿದ್ದಾರೆ.
ಟಿ20 ತಂಡದಲ್ಲಿ ಆಡದಿರಲು ಕಾರಣ ಏನು?
ಕಳೆದ ವರ್ಷ ಟಿ20 ವಿಶ್ವಕಪ್ ಇದ್ದ ಕಾರಣ ಏಕದಿನ ಮಾದರಿಯಲ್ಲಿ ಇವರಿಬ್ಬರೂ ಆಡಿರಲಿಲ್ಲ. ಟಿ20 ವಿಶ್ವಕಪ್‌ಗೆ ಆದ್ಯತೆ ನೀಡಿದ್ದ ಕಾರಣ ಏಕದಿನ ಕ್ರಿಕೆಟ್‌ನಿಂದ ಈ ಇಬ್ಬರು ಆಟಗಾರರು ದೂರ ಉಳಿದಿದ್ದರು. "ಕಳೆದ ವರ್ಷವೂ ನಾವು ಅದೇ ಕೆಲಸವನ್ನು ಮಾಡಿದ್ದೇವೆ, ಟಿ 20 ವಿಶ್ವಕಪ್ ಇತ್ತು, ಆದ್ದರಿಂದ ನಾವು ಏಕದಿನ ಕ್ರಿಕೆಟ್ ಆಡಲಿಲ್ಲ. ಈಗ ನಾವು ಅದೇ ರೀತಿ ಮಾಡುತ್ತಿದ್ದೇವೆ, ಏಕದಿನ ವಿಶ್ವಕಪ್ ಇದೆ, ಆದ್ದರಿಂದ ನಾವು ಟಿ 20 ಆಡುತ್ತಿಲ್ಲ. ನೀವು ಎಲ್ಲವನ್ನೂ ಆಡಿ ವಿಶ್ವಕಪ್‌ಗೆ ಸಿದ್ಧರಾಗಲು ಸಾಧ್ಯವಿಲ್ಲ, ನಾವು ಇದನ್ನು ಎರಡು ವರ್ಷಗಳ ಹಿಂದೆ ನಿರ್ಧರಿಸಿದ್ದೇವೆ. ರವೀಂದ್ರ ಜಡೇಜಾ ಕೂಡ ಟಿ20 ಆಡುತ್ತಿಲ್ಲ, ನೀವು ಅವರ ಬಗ್ಗೆ ಕೇಳಲಿಲ್ಲವೇ? ನನ್ನ ಮತ್ತು ವಿರಾಟ್ ಕೊಹ್ಲಿ ಮೇಲೆ ಮಾತ್ರ ಗಮನ ಇದೆ ಎಂದು ನನಗೆ ಅರ್ಥವಾಗಿದೆ. ಜಡೇಜಾ ಕೂಡ ಟಿ20 ಆಡುತ್ತಿಲ್ಲ" ಎಂದು ಹೇಳಿದರು.
ಆಗಸ್ಟ್ 30ಕ್ಕೆ ಆರಂಭವಾಗಲಿರುವ ಏಷ್ಯಾಕಪ್‌ನಲ್ಲಿ ರೋಹಿತ್ ಮತ್ತು ವಿರಾಟ್ ಇಬ್ಬರೂ ಕಾಣಿಸಿಕೊಳ್ಳಲಿದ್ದಾರೆ. ಏಷ್ಯಾಕಪ್ ಬಳಿಕ ಏಕದಿನ ವಿಶ್ವಕಪ್ ನಡೆಯಲಿದೆ, ಅದಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು ಆಡಲಿದೆ. ವಿಶ್ವಕಪ್‌ಗೆ ಭಾರತ ತಂಡವನ್ನು ಅಣಿಗೊಳಿಸಲು ರೋಹಿತ್ ಶರ್ಮಾಗೆ ಸಾಕಷ್ಟು ಸಮಯ ಸಿಕ್ಕಿದೆ.
ಮತ್ತೆ ಟಿ20 ತಂಡಕ್ಕೆ ಆಡ್ತಾರ?
ಕಳೆದ 10 ವರ್ಷಗಳಿಂದ ಭಾರತ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ, ಕಳೆದ ಬಾರಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆದ ಸಂದರ್ಭದಲ್ಲಿ ಭಾರತ ವಿಶ್ವಕಪ್ ಜಯಿಸಿತ್ತು, ಈ ಬಾರಿ ಕೂಡ ತವರಿನಲ್ಲಿ ಪಂದ್ಯಾವಳಿ ನಡೆಯುತ್ತಿದ್ದು ಗೆಲ್ಲುವ ಅವಕಾಶ ಇದೆ. ತವರಿನ ಸನ್ನಿವೇಶದ ಲಾಭ ಪಡೆದು ಕಪ್ ಗೆಲ್ಲುವ ಲೆಕ್ಕಾಚಾರದಲ್ಲಿದೆ ರೋಹಿತ್ ಪಡೆ.
ಏಕದಿನ ವಿಶ್ವಕಪ್‌ನ ಮುಕ್ತಾಯದ ನಂತರ, ರೋಹಿತ್ ಮತ್ತು ಕೊಹ್ಲಿ ಭಾರತ ಟಿ20 ತಂಡಕ್ಕೆ ಮರಳುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ. ಮುಂದಿನ ಟಿ20 ವಿಶ್ವಕಪ್ 2024 ರಲ್ಲಿ ನಡೆಯಲಿದೆ ಆ ಪಂದ್ಯಾವಳಿಗೆ ಎದುರು ನೋಡುತ್ತಿದ್ದೇನೆ ಎಂದು ಹೇಳುವ ಮೂಲಕ ರೋಹಿತ್ ಶರ್ಮಾ ತಾವಿಬ್ಬರೂ ಮತ್ತೆ ಟಿ20 ಮರಳುತ್ತೇವೆ ಎಂದು ಸೂಚನೆ ನೀಡಿದ್ದಾರೆ.












Click it and Unblock the Notifications