Rohit Sharma: ಟೀಂ ಇಂಡಿಯಾ ಆಟಗಾರನ ವಿರುದ್ಧವೇ ಸಿಟ್ಟಾದ ರೋಹಿತ್ ಶರ್ಮಾ
ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಸೋತ ಬಳಿಕ ಭಾರತ ತಂಡ ಒತ್ತಡಕ್ಕೆ ಸಿಲುಕಿದೆ. ಡಿಸೆಂಬರ್ 14ರಿಂದ ಬ್ರಿಸ್ಬೇನ್ ಗಬ್ಬಾದಲ್ಲಿ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು ಭಾರತ ತಂಡ ಗೆಲ್ಲಲೇಬೇಕಾದ ಪರಿಸ್ಥಿತಿ ಇದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಭಾರತ ಇನ್ನುಳಿದ ಮೂರು ಟೆಸ್ಟ್‌ಗಳನ್ನು ಗೆಲ್ಲಬೇಕಿದ್ದು, ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾ ಆಟಗಾರನ ವಿರುದ್ಧವೇ ಸಿಟ್ಟಾಗಿರುವ ಘಟನೆ ನಡೆದಿದೆ.
ಭಾರತ ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ವಿರುದ್ಧ ನಾಯಕ ರೋಹಿತ್ ಶರ್ಮಾ ಸಿಟ್ಟಾಗಿದ್ದಾರೆ. ಬುಧವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ, ರೋಹಿತ್ ಶರ್ಮಾ ಸಿಟ್ಟಿನಿಂದಲೇ ಯಶಸ್ವಿ ಜೈಸ್ವಾಲ್‌ರನ್ನು ಹೋಟೆಲ್‌ನಲ್ಲಿ ಬಿಟ್ಟು ತಂಡದ ಜೊತೆ ಬಸ್‌ನಲ್ಲಿ ತೆರಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ಯಶಸ್ವಿ ಜೈಸ್ವಾಲ್ ಮಾಡಿದ್ದೇನು?
ಯಶಸ್ವಿ ಜೈಸ್ವಾಲ್ ತಂಡದ ಜೊತೆ ಬರಲು ತಡ ಮಾಡಿದ್ದೇ ನಾಯಕ ರೋಹಿತ್ ಶರ್ಮಾ ಅವರ ಸಿಟ್ಟಿಗೆ ಕಾರಣವಾಗಿದೆ. ಅಡಿಲೇಡ್‌ನಿಂದ ಬ್ರಿಸ್ಬೇನ್‌ಗೆ ವಿಮಾನದಲ್ಲಿ ತೆರಳಲು ಭಾರತ ತಂಡ ಆಟಗಾರರು ವಿಮಾನ ನಿಲ್ದಾಣಕ್ಕೆ ಹೋಗಬೇಕಿತ್ತು. ಈ ಸಂದರ್ಭದಲ್ಲಿ ಯಶಸ್ವಿ ಜೈಸ್ವಾಲ್ ತಂಡದ ಜೊತೆ ಹೊರಡಲು ತಡ ಮಾಡಿದ್ದಾರೆ, ಇದರಿಂದ ಸಿಟ್ಟಾದ ರೋಹಿತ್ ಶರ್ಮಾ ಜೈಸ್ವಾಲ್‌ರನ್ನು ಬಿಟ್ಟು ತಂಡದ ಉಳಿದ ಆಟಗಾರರ ಜೊತೆ ಹೋಗಿದ್ದಾರೆ.
ಜಸ್ಪ್ರೀತ್ ಬುಮ್ರಾ ಮತ್ತು ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಉಳಿದ ಆಟಗಾರರು ತಮ್ಮ ಕುಟುಂಬದ ಜೊತೆ ಚಾರ್ಟೆಡ್ ಫ್ಲೈಟ್‌ನಲ್ಲಿ ಬ್ರಿಸ್ಬೇನ್‌ಗೆ ಹೋಗಬೇಕಿತ್ತು. ಸಹಾಯಕ ಸಿಬ್ಬಂದಿ ಸದಸ್ಯರು ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಹೋಟೆಲ್‌ನಿಂದ ಹೊರಡಲು ಬೆಳಗ್ಗೆ 8 ಗಂಟೆ ವೇಳೆಗೆ ಹೋಟೆಲ್‌ನ ಲಾಬಿ ಪ್ರದೇಶದಲ್ಲಿ ಹಾಜರಾದರು. ಆದರೆ ಜೈಸ್ವಾಲ್ ಲಾಬಿಗೆ ಬರಲು ತುಂಬಾ ತಡ ಮಾಡಿದರು.
ಒಂದಷ್ಟು ಸಮಯ ಕಾದರೂ ಜೈಸ್ವಾಲ್ ಬರದೇ ಇದ್ದಾಗ ತಾಳ್ಮೆ ಕಳೆದುಕೊಂಡ ರೋಹಿತ್ ಶರ್ಮಾ ತಂಡದ ಬಸ್‌ನಿಂದ ಹೊರಬಂದು ಜೈಸ್ವಾಲ್‌ರನ್ನು ಹುಡುಕುವಂತೆ ತಂಡದ ಲಾಜಿಸ್ಟಿಕ್ ಮ್ಯಾನೇಜರ್ ಗೆ ಸೂಚನೆ ಕೊಟ್ಟರು. ಬಸ್‌ನಿಂದ ಇಳಿದ ಮ್ಯಾನೇಜರ್ ಕೆಲ ಸಮಯದ ಬಳಿಕ ವಾಪಸ್ ಬಂದು ಬಸ್ ಏರಿದರು, ಜೈಸ್ವಾಲ್ ಎಲ್ಲೂ ಕಾಣಿಸಿಕೊಳ್ಳಲಿಲ್ಲ, ಅವರನ್ನು ಬಿಟ್ಟು ಉಳಿದ ಆಟಗಾರರು ಬಸ್‌ನಲ್ಲಿ ಪ್ರಯಾಣಿಸಿದರು.
ಬಸ್ ಹೋದ 20 ನಿಮಿಷಗಳ ಬಳಿಕ ಯಶಸ್ವಿ ಜೈಸ್ವಾಲ್ ಹೋಟೆಲ್‌ನ ಲಾಬಿಗೆ ಬಂದರು. ತಂಡದ ಮ್ಯಾನೇಜ್‌ಮೆಂಟ್ ಅವರಿಗೆ ಕಾರಿನ ವ್ಯವಸ್ಥೆ ಮಾಡಿದ್ದರಿಂದ, ತಂಡದ ಹಿರಿಯ ಭದ್ರತಾ ಅಧಿಕಾರಿ ಜೊತೆ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದರು.












Click it and Unblock the Notifications