ಭಾರತ ಏಕದಿನ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಇರ್ತಾರ? ರೋಹಿತ್ ಶರ್ಮಾ ಹೇಳಿದ್ದೇನು?
ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋತ ಬಳಿಕ ಭಾರತ ತಂಡ ಮೂರನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಸರಣಿಯನ್ನು ಜೀವಂತವಾಗಿ ಇರಿಸಿದೆ. ಶನಿವಾರ ಸರಣಿಯ ನಾಲ್ಕನೇ ಪಂದ್ಯ ನಡೆಯಲಿದ್ದು ಭಾರತ ಗೆದ್ದರೆ ಸರಣಿ ಸಮಬಲವಾಗಲಿದೆ.
ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಭಾರತ ತಂಡ ಮೂರನೇ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. 17.5 ಓವರ್‌ಗಳಲ್ಲಿ 160 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಸೂರ್ಯಕುಮಾರ್ ಯಾದವ್ ಫಾರ್ಮ್‌ಗೆ ಮರಳಿದರು, ಕೇವಲ 44 ಎಸೆತಗಳಲ್ಲಿ 83 ರನ್ ಗಳಿಸಿದರು.

ಏಕದಿನ ಸರಣಿಯಲ್ಲಿ ರನ್ ಗಳಿಸಲು ವಿಫಲವಾದ ನಂತರ ಅವರು ಟೀಕೆಗೆ ಗುರಿಯಾಗಿದ್ದರು. ಇದರಿಂದ ಮುಂಬರುವ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ತಂಡಕ್ಕೆ ಆಯ್ಕೆಯಾಗುವ ಬಗ್ಗೆ ಅನುಮಾನ ಸಹ ಮೂಡಿತ್ತು, ಆದರೆ ಟಿ20 ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ಆಯ್ಕೆದಾರರಲ್ಲಿ ಭರವಸೆ ಮೂಡಿಸಿದ್ದಾರೆ.
ರೋಹಿತ್ ಶರ್ಮಾ ಹೇಳಿದ್ದೇನು?
ಏಕದಿನ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ಸ್ಥಾನ ನೀಡುವ ಬಗ್ಗೆ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಏಕದಿನ ಮಾದರಿಯಲ್ಲಿ ತಮ್ಮ ಫಾರ್ಮ್ ಕಂಡುಕೊಳ್ಳಲು 6ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿರುವ ಸೂರ್ಯಕುಮಾರ್ ಯಾದವ್ ಅವರಿಗೆ ಎಲ್ಲಿಯವರೆಗೆ ಬೆಂಬಲ ಸಿಗುತ್ತದೆ ಎನ್ನುವದನ್ನು ನೋಡಬೇಕು ಎಂದು ಹೇಳಿದ್ದಾರೆ.
"ಸೂರ್ಯಕುಮಾರ್ ಯಾದವ್ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಹೆಚ್ಚು ಏಕದಿನ ಪಂದ್ಯಗಳನ್ನು ಆಡಿರುವ ಆಟಗಾರರ ಜೊತೆ ಮಾತನಾಡುತ್ತಿದ್ದು, ಯಾವ ರೀತಿಯ ವರ್ತನೆ ಮತ್ತು ಮನಸ್ಥಿತಿ ಹೊಂದಿರಬೇಕು ಎಂದು ಚರ್ಚೆ ಮಾಡುತ್ತಿದ್ದಾರೆ. ಅವರಂತಹ ಬ್ಯಾಟರ್ ಗೆ ಅವಕಾಶ ನೀಡುವುದು ಮುಖ್ಯವಾಗಿದೆ. ಅವಕಾಶ ಸಿಕ್ಕಂತೆ ಅವರ ಆಟ ಸುಧಾರಣೆಯಾಗುತ್ತದೆ, ಹೆಚ್ಚು ಆತ್ಮವಿಶ್ವಾಸ ಸಿಗುತ್ತದೆ" ಎಂದು ಹೇಳಿದರು.
"2023ರ ಐಪಿಎಲ್‌ನಲ್ಲಿ ಅವರು ಮೊದಲ 4-5 ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದರು. ಆದರೆ ಒಮ್ಮೆ ಫಾರ್ಮ್‌ಗೆ ಮರಳಿದ ನಂತರ ಅವರ ಆಟ ಹೇಗಿತ್ತು ಎನ್ನುವುದನ್ನು ನೋಡಿದ್ದೇವೆ." ಎಂದು ರೋಹಿತ್ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.
"ಅವರಂತಹ ಆಟಗಾರನಿಗೆ, ಅಂತಹ ಪರಿಸ್ಥಿತಿ ಮತ್ತು ಸನ್ನಿವೇಶವನ್ನು ಸೃಷ್ಟಿಸುವುದು ನಮ್ಮ ಕೆಲಸ, ನೀವು 2-3 ಪಂದ್ಯಗಳಲ್ಲಿ ಉತ್ತಮವಾಗಿ ಮಾಡದಿದ್ದರೆ ಪರವಾಗಿಲ್ಲ, ಆದರೆ ನೀವು ಸೆಟ್ ಆದ ಬಳಿಕ ಉತ್ತಮವಾಗಿ ಆಡುತ್ತೀರಿ, ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ನಿಮಗಿದೆ ಎಂದು ಗೊತ್ತಿದೆ. ಮೂರನೇ ಟಿ20 ಪಂದ್ಯದಲ್ಲಿ ಅವರು ಮಾಡಿದ್ದು ಅದನ್ನೇ, ಅಗ್ರಸ್ಥಾನದಲ್ಲಿರುವ ಬ್ಯಾಟರ್‌ಗಳು ಔಟಾದರೂ ಕೂಡ ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್ ಮಾಡುತ್ತಾರೆ. ಏಕದಿನ ಕ್ರಿಕೆಟ್ ವಿಭಿನ್ನ ಸ್ವರೂಪವಾಗಿದೆ. 4ನೇ ಕ್ರಮಾಂಕದಲ್ಲಿ ಅವರಿಗೆ ಇನ್ನು ಎಷ್ಟು ಅವಕಾಶ ಕೊಡಬೇಕು ಎನ್ನುವುದನ್ನು ನಾನು ನೋಡುತ್ತೇವೆ" ಎಂದು ಹೇಳಿದ್ದಾರೆ.
ಶನಿವಾರದಂದು ಲಾಡರ್‌ಹಿಲ್‌ನಲ್ಲಿ ನಡೆಯಲಿರುವ ನಾಲ್ಕನೇ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ಸಾಧಿಸುವ ಪ್ರದರ್ಶನ ನೀಡುತ್ತಾರೆ ಎಂದು ರೋಹಿತ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications