Rishabh Pant: ಗಾಯಗೊಂಡಿದ್ದೇನೆ ಎಂದು ನಾಟಕವಾಡಿದ್ದೆ! ಟಿ20 ವಿಶ್ವಕಪ್ ಫೈನಲ್ ಬಗ್ಗೆ ಪಂತ್ ಅಚ್ಚರಿಯ ಹೇಳಿಕೆ
ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯದಲ್ಲಿ ಭಾರತ ಸೋಲುವ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿತ್ತು. ಒಂದು ಹಂತದಲ್ಲಿ ಸೋತೇ ಬಿಡುವ ಹಂತದಲ್ಲಿದ್ದ ಭಾರತ ಬಳಿಕ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಗೆದ್ದು ಸಂಭ್ರಮಿಸಿತ್ತು. ಸೂರ್ಯಕುಮಾರ್ ಯಾದವ್‌ರ ಕ್ಯಾಚ್, ಬುಮ್ರಾ ಬೌಲಿಂಗ್ ಕ್ರಿಕೆಟ್ ಅಭಿಮಾನಿಗಳಿಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಇನ್ನು ಈ ಪಂದ್ಯದಲ್ಲಿ ರಿಷಬ್ ಪಂತ್ ತಾವು ಆಡಿದ ನಾಟಕದ ಬಗ್ಗೆ ಮಾತನಾಡಿದ್ದಾರೆ.
ಗೆಲುವಿನತ್ತ ಮುನ್ನುಗ್ಗುತ್ತಿದ್ದ ದಕ್ಷಿಣ ಆಫ್ರಿಕಾ ಬ್ಯಾಟರ್ ಗಳ ಲಯವನ್ನು ಹಾಳು ಮಾಡಲು ವಿಕೆಟ್ ಕೀಪರ್ ರಿಷಬ್ ಪಂತ್ ಗಾಯಗೊಂಡಂತೆ ನಾಟಕವಾಡಿದ್ದರು ಎಂದು ನಾಯಕ ರೋಹಿತ್ ಶರ್ಮಾ ಬಹಿರಂಗಪಡಿಸಿದ್ದರು. ದಕ್ಷಿಣ ಆಫ್ರಿಕಾ 30 ಎಸೆತಗಳಲ್ಲಿ ರನ್ ಅಗತ್ಯವಿದ್ದಾಗ, ಭಾರತ ಗೆಲ್ಲಲು ಏನಾದರೂ ವಿಶೇಷವಾದದ್ದನ್ನೇ ಮಾಡಬೇಕಿತ್ತು, ಆಗಲೇ ರಿಷಬ್ ಪಂತ್ ಕೆಲ ಸಮಯ ಆಟವನ್ನು ನಿಲ್ಲುವಂತೆ ಮಾಡಿದ್ದರು.

ಮೊಣಕಾಲಿಗೆ ನೋವಾಗಿದೆ ಎಂದು ಕೆಳಗೆ ಬಿದ್ದರು, ತಕ್ಷಣವೇ ಫಿಸಿಯೋ ರಿಷಬ್ ಪಂತ್‌ರನ್ನು ಪರಿಶೀಲನೆ ಮಾಡಲು ಮೈದಾನದೊಳಗೆ ಓಡಿ ಬಂದರು. ಕೆಲ ಸಮಯ ಪಂದ್ಯ ನಿಂತ ಬಳಿಕ ಆರಂಭವಾಯಿತು, ಬಳಿಕ ನಡೆದಿದ್ದು ಈಗ ಇತಿಹಾಸ. ಭಾರತ ಈ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿತು.
ಗುಟ್ಟು ಬಿಚ್ಚಿಟ್ಟ ರಿಷಬ್ ಪಂತ್
ರಿಷಬ್ ಪಂತ್ ಅಂದು ನಿಜವಾಗಿ ಗಾಯಗೊಂಡಿರಲಿಲ್ಲ ಬದಲಾಗಿ ಆಟವನ್ನು ಕೆಲ ಸಮಯ ನಿಲ್ಲಿಸಲು ಮಾಡಿದ ನಾಟವಾಗಿತ್ತು, ರೋಹಿತ್ ಶರ್ಮಾ ಕೂಡ ಇದನ್ನೇ ಹೇಳಿದ್ದರು. ಇದೀಗ ಘಟನೆ ಬಗ್ಗೆ ಬಾಯಿ ಬಿಟ್ಟಿರುವ ರಿಷಬ್ ಪಂತ್ ಮೈದಾನದಲ್ಲಿ ಸಮಯ ಕಳೆಯುವಂತೆ ಫಿಸಿಯೋಗೆ ಕೇಳಿಕೊಂಡಿದ್ದೆ ಎಂದಿದ್ದಾರೆ.
ಫೈನಲ್ ಪಂದ್ಯದ ಬಗ್ಗೆ ಮಾತನಾಡಿರುವ ರಿಷಬ್ ಪಂತ್, 2-3 ಓವರ್ ಗಳಲ್ಲಿ ಸಾಕಷ್ಟು ರನ್ ಬಂದಿದ್ದವು, ನಾನು ತುಂಬಾ ಯೋಚನೆ ಮಾಡಿದ್ದೆ, ಆಟವನ್ನು ಸ್ವಲ್ಪ ಸಮಯ ನಿಲ್ಲಿಸಿದರೆ ಏನಾದರೂ ಬದಲಾಗುತ್ತದೆ ಎನಿಸಿತ್ತು. ತಕ್ಷಣ ಗಾಯಗೊಂಡವನಂತೆ ಕೆಳಗೆ ಬಿದ್ದೆ, ನೋಡಲು ಬಂದ ಫಿಸಿಯೋಗೆ ಸ್ವಲ್ಪ ಸಮಯ ತೆಗೆದುಕೊಳ್ಳಿ ಎಂದು ಹೇಳಿದೆ. ಅವರು ಚೆನ್ನಾಗಿದ್ದೀಯಾ ಎಂದು ಕೇಳುತ್ತಿದ್ದರು, ನಾನು ಗಾಯಗೊಂಡವನಂತೆ ನಟಿಸಿದೆ. ಎಲ್ಲಾ ಸಮಯದಲ್ಲಿ ಈ ತಂತ್ರ ಕೆಲಸ ಮಾಡುತ್ತದೆ ಎಂದು ನಾನು ಹೇಳುವುದಿಲ್ಲ ಆದರೆ ಕೆಲವು ಪರಿಸ್ಥಿಯಿಯಲ್ಲಿ ಇದು ಕೆಲಸಕ್ಕೆ ಬರುತ್ತದೆ. ಅಂದಿನ ಪಂದ್ಯದಲ್ಲಿ ನಾನು ಮಾಡಿದ್ದು ತಂಡಕ್ಕೆ ಸಹಕಾರಿಯಾಯಿತು, ನನಗೆ ಇನ್ನೇನೂ ಬೇಕಿಲ್ಲ ಎಂದು ಹೇಳಿದ್ದಾರೆ.
ಅದು ನಾಟಕ ಎಂದಿದ್ದ ರೋಹಿತ್
ದಿ ಕಪಿಲ್ ಶರ್ಮಾ ಶೋನ ಸಂಚಿಕೆಯಲ್ಲಿ ರೋಹಿತ್ ಶರ್ಮಾ ಕೂಡ ರಿಷಬ್ ಪಂತ್‌ರ ಘಟನೆ ಬಗ್ಗೆ ನೆನಪು ಮಾಡಿಕೊಂಡಿದ್ದರು. ದಕ್ಷಿಣ ಆಫ್ರಿಕಾ ಗೆಲುವಿಗೆ 30 ಎಸೆತಗಳಲ್ಲಿ 30 ರನ್ ಬೇಕಿದ್ದಾಗ, ಪಂತ್ ಆಟವನ್ನು ಸ್ವಲ್ಪ ಸಮಯ ನಿಲ್ಲಿಸಲು ಬುದ್ಧಿವಂತಿಕೆಯನ್ನು ಬಳಿಸಿದ. ಇದರಿಂದ ಆಟ ನಿಧಾನವಾಯಿತು, ಉತ್ತಮವಾಗಿ ರನ್ ಬರುವಾಗ ಬ್ಯಾಟರ್ ಬೇಗ ಬೇಗ ಬೌಲಿಂಗ್ ಮಾಡಲಿ ಎಂದು ಬಯಸುತ್ತಾರೆ. ಆದರೆ ಪಂತ್ ಕೆಳಗೆ ಬಿದ್ದಾಗ, ಕ್ಲಾಸೆನ್ ಅವರು ಬೇಗನೆ ಆಟ ಶುರುವಾಗಲಿ ಎಂದು ಕಾಯುತ್ತಿದ್ದರು. ಪಂದ್ಯ ಕೆಲ ಸಮಯದ ಬಳಿಕ ಆರಂಭವಾಯಿತು, ಕ್ಲಾಸೆನ್ ಔಟಾದರು, ಪಂತ್ ತನ್ನ ಬುದ್ದಿವಂತಿಯನ್ನು ಬಳಸಿದ್ದ ಎಂದು ರೋಹಿತ್ ಶರ್ಮಾ ಹೇಳಿದರು.












Click it and Unblock the Notifications