Ricky Ponting: ಭಾರತದ ಸಂಪ್ರದಾಯ ಪಾಲಿಸಿ ಇಂಡಿಯನ್ಸ್ ಹೃದಯ ಗೆದ್ದ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ರಿಕಿ ಪಾಂಟಿಂಗ್
Ricky Ponting: ಆಧುನಿಕ ಕ್ರಿಕೆಟ್ ಎಂದರೆ ಕೇವಲ ರನ್ ಬೆನ್ನಟ್ಟುವುದು ಅಥವಾ ವಿಕೆಟ್ ಪಡೆಯುವುದು ಮಾತ್ರವಲ್ಲ. ಬದಲಿಗೆ ಅದು ಇಂದಿನ ಯುವ ಪೀಳಿಗೆಗೆ ಜೀವನಶೈಲಿಯ ಮಾದರಿಯೂ ಹೌದು. ಇತ್ತೀಚಿನ ದಿನಗಳಲ್ಲಿ ಕ್ರೀಡಾಪಟುಗಳು ಟ್ಯಾಟ್ಯೂ, ದುಬಾರಿ ಗಡಿಯಾರ ಅಥವಾ ಫ್ಯಾಶನ್ ಟ್ರೆಂಡ್‌ಗಳ ಹಿಂದೆ ಬೀಳುವುದು ಸಾಮಾನ್ಯ. ಆದರೆ ಈ ನಡುವೆ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ ಆಸ್ಟ್ರೇಲಿಯಾದವರಾಗಿದ್ದರೂ ಸಹ ಭಾರತದ ಸಂಪ್ರದಾಯ ಪಾಲನೆ ಮಾಡಿ ಗಮನ ಸೆಳೆದಿದ್ದಾರೆ. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿವೆ.
ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ರಿಕಿ ಪಾಂಟಿಂಗ್ ಅವರು ಭಾರತೀಯ ಸಂಸ್ಕೃತಿಯ ಮೇಲೆ ತೋರುತ್ತಿರುವ ಒಲವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಮೈದಾನದಲ್ಲಿ ಉತ್ತಮ ನಾಯಕನಾಗಿ ಕೋಚ್ ಆಗಿ ಗುರುತಿಸಿಕೊಂಡಿರುವ ಪಾಂಟಿಂಗ್ ಈಗ ತಮ್ಮ ಸರಳತೆ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಮೂಲಕ ಭಾರತೀಯರ ಮನ ಗೆದ್ದಿದ್ದಾರೆ.

ಭಾರತೀಯ ಸಂಪ್ರದಾಯ ಪಾಲಿಸಿದ ಪಾಂಟಿಂಗ್
ಇತ್ತೀಚೆಗಷ್ಟೇ ನಡೆದ ಪಂಜಾಬ್ ಕಿಂಗ್ಸ್ ಪಂದ್ಯದ ವೇಳೆ ಕೋಚ್ ರಿಕಿ ಪಾಂಟಿಂಗ್ ಅವರು ಕೈಯಲ್ಲಿ ಧರಿಸಿರುವ ಪವಿತ್ರವಾದ ಕೆಂಪು ದಾರ ಎಲ್ಲರ ಗಮನ ಸೆಳೆದಿದೆ. ಕಳೆದ ವರ್ಷವಷ್ಟೇ ಭಾರತೀಯ ಸಂಪ್ರದಾಯದಂತೆ ದೇವಸ್ಥಾನವೊಂದರಲ್ಲಿ ವಿಶೇಷ ಪೂಜೆ ಹಾಗೂ ಹವನ ನೆರವೇರಿಸಿ ಸುದ್ದಿಯಾಗಿದ್ದ ಪಾಂಟಿಂಗ್ ಈ ಬಾರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಭಾರತದಲ್ಲಿ ರಕ್ಷಣೆ ಮತ್ತು ಶುಭ ಸಂಕೇತವಾಗಿ ಧರಿಸುವ ಕೆಂಪು ದಾರವನ್ನು ಕೈಗೆ ಕಟ್ಟಿಕೊಂಡು ಅವರು ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೇವಲ ಫ್ಯಾಷನ್ ಅಲ್ಲ, ಬದಲಿಗೆ ಭಾರತದ ಮಣ್ಣಿನ ಸಂಪ್ರದಾಯದ ಮೇಲೆ ಅವರಿಗಿರುವ ಅಪಾರ ಗೌರವವನ್ನು ಪ್ರತಿಬಿಂಬಿಸುತ್ತಿದೆ.
ಮೆಚ್ಚುಗೆಗೆ ಪಾತ್ರವಾದ ಪಾಂಟಿಂಗ್ ನಡೆ
ಒಂದು ಕಾಲದಲ್ಲಿ ಎದುರಾಳಿ ತಂಡಗಳಿಗೆ ಸಿಂಹಸ್ವಪ್ನವಾಗಿದ್ದ ಆಸ್ಟ್ರೇಲಿಯಾ ಮೂಲದ ಇವರು ಈಗ ಭಾರತೀಯ ಭಾವನೆಗಳಿಗೆ ಸ್ಪಂದಿಸುತ್ತಿರುವ ರೀತಿ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಮೂಡಿಸಿದೆ. ಕ್ಯಾಮರಾ ಕಣ್ಣುಗಳು ಪಾಂಟಿಂಗ್ ಕೈಮೇಲಿರುವ ಈ ದಾರದ ಮೇಲೆ ಬಿದ್ದಿದೆ. ಈ ಫೋಟೋ ವೈರಲ್ ಆದ ಬೆನ್ನಲ್ಲೇ "ಪಾಂಟಿಂಗ್ ಈಗ ಅರ್ಧ ಭಾರತೀಯರಾಗಿದ್ದಾರೆ" ಎಂಬ ಮಾತುಗಳು ಕೇಳಿಬರುತ್ತಿವೆ. ಅವರ ಈ ನಡೆ ಕ್ರೀಡಾ ಜಗತ್ತಿನಲ್ಲಿ ಎರಡು ದೇಶಗಳ ಸಂಸ್ಕೃತಿಗಳ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತಿದೆ ಎನ್ನಬಹುದು.
ಈ ಧಾರ ಕೇವಲ ಮೈದಾನಕ್ಕೆ ಹಾಕಿಕೊಂಡು ಬರುವ ಒಂದು ಅಲಂಕಾರಿಕ ವಸ್ತುವಲ್ಲ. ಅದು ಅವರ ನಂಬಿಕೆ, ದೈವಿಕ ರಕ್ಷಣೆ ಮತ್ತು ಸಂಪ್ರದಾಯದ ಮೇಲಿರುವ ಅಚಲವಾದ ವಿಶ್ವಾಸದ ಸಂಕೇತವಾಗಿದೆ. ಎಷ್ಟೇ ಎತ್ತರಕ್ಕೆ ಬೆಳೆದರೂ ತಾವು ಇರುವ ನೆಲದ ಸಂಸ್ಕೃತಿಯನ್ನು ಮರೆಯಬಾರದು ಎನ್ನುವುದಕ್ಕೆ ಪಾಂಟಿಂಗ್ ಅವರ ಈ ನಡೆ ಪ್ರಮುಖ ಸಾಕ್ಷಿಯಾಗಿದೆ. ಈ ಮೂಲಕ ಆಧುನಿಕತೆ ಮತ್ತು ಪರಂಪರೆಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಹೇಗೆ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.
ಕ್ರಿಕೆಟ್ ಪ್ರೇಮಿಗಳು ಹೇಳೋದೇನು?
ಐಪಿಎಲ್ ಮತ್ತು ಭಾರತದೊಂದಿಗಿನ ದಶಕಗಳ ಕಾಲದ ಸಂಬಂಧವು ಪಾಂಟಿಂಗ್ ಅವರನ್ನು ಇಲ್ಲಿನ ಆಚಾರ-ವಿಚಾರಗಳಿಗೆ ಹತ್ತಿರವಾಗಿಸಿದೆ. ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಈ ದೃಶ್ಯವನ್ನು ಕಂಡು ಸಂತೋಷ ವ್ಯಕ್ತಪಡಿಸಿದ್ದಾರೆ. 'ಬೇರೆ ದೇಶದವರಾದರೂ ನಮ್ಮ ಸಂಸ್ಕೃತಿಯನ್ನು ಪಾಲನೆ ಮಾಡುತ್ತಿರುವ ಪಾಂಟಿಂಗ್ ಅವರ ಮನಸ್ಸು ನಿಜಕ್ಕೂ ದೊಡ್ಡದು,' ಎಂದು ಗುಣಗಾನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಮೈದಾನದ ರಣತಂತ್ರಗಳ ನಡುವೆಯೂ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತಿರುವ ರಿಕಿ ಪಾಂಟಿಂಗ್ ಅವರ ಈ ಸರಳತೆ ಮತ್ತು ಪ್ರೀತಿ ನಿಜಕ್ಕೂ ಶ್ಲಾಘನೀಯವಾಗಿದೆ.












Click it and Unblock the Notifications