Ravichandran Ashwin: ರವಿಚಂದ್ರನ್ ಅಶ್ವಿನ್ ನಿವೃತ್ತಿ ಹಿಂದಿರುವ 'ಗಂಭೀರ' ಕಾರಣ ಇದೇನಾ?
ಭಾರತ ತಂಡದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯವಾದ ಬಳಿಕ, ಅಶ್ವಿನ್ ನಿವೃತ್ತಿ ಘೋಷಣೆ ಮಾಡಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ತಂದಿತ್ತು. ಸರಣಿಯಲ್ಲಿ ಇನ್ನೂ ಎರಡು ಪಂದ್ಯ ಇರುವಂತೆಯೇ ವಿದಾಯ ಹೇಳಿ ತವರಿಗೆ ಮರಳಿದ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ.
ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ರವಿಚಂದ್ರನ್ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಬಳಿಕ ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಅಶ್ವಿನ್‌ರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಡಲಾಗಿತ್ತು. ಮಳೆಯಿಂದಾಗಿ ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯವಾಯಿತು. ಪಂದ್ಯದ ಬಳಿಕ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಣೆ ಮಾಡಿ ಅಚ್ಚರಿ ಮೂಡಿಸಿದರು.

ದಿಢೀರ್ ನಿವೃತ್ತಿಗೆ ಕಾರಣವೇನು?
ರವಿಚಂದ್ರನ್ ಅಶ್ವಿನ್‌ರ ದಿಢೀರ್ ನಿವೃತ್ತಿಗೆ ಹಲವು ಕಾರಣಗಳನ್ನು ನೀಡಲಾಗುತ್ತಿದೆ. ಆದರೆ ಕೋಚ್ ಗೌತಮ್ ಗಂಭೀರ್ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಹಿರಿಯ ಆಟಗಾರರನ್ನು ಕೈಬಿಟ್ಟು ಯುವ ಆಟಗಾರರ ತಂಡವನ್ನು ಕಟ್ಟುವ ಬಗ್ಗೆ ಮಾತನಾಡಿದ್ದ ಗಂಭೀರ್, ಅದನ್ನು ಜಾರಿ ಮಾಡಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಟಿ20 ವಿಶ್ವಕಪ್ ಗೆದ್ದ ಬಳಿಕ ರೋಹಿತ್, ವಿರಾಟ್, ಜಡೇಜಾ ನಿವೃತ್ತಿ ಘೋಷಿಸಲು ಕೂಡ ಇದೇ ಕಾರಣ ಎನ್ನಲಾಗಿದೆ.
ರವಿಚಂದ್ರನ್ ಅಶ್ವಿನ್‌ಗೆ ತಂಡದಲ್ಲಿ ಅವಮಾನ ಮಾಡಲಾಗಿದೆ. ಆದ್ದರಿಂದಲೇ ಅವರು ಬೇಸತ್ತು ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂದು ಅಶ್ವಿನ್ ತಂದೆ ಕೂಡ ಆರೋಪಿಸಿದ್ದರು. ಸಿಎಸ್‌ಕೆ ತಂಡದ ಮಾಜಿ ಆಟಗಾರ ಎಸ್ ಬದ್ರಿನಾಥ್ ಕೂಡ ಅಶ್ವಿನ್‌ಗೆ ತಂಡದಲ್ಲಿ ಸಿಗಬೇಕಾದ ಗೌರವ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬದ್ರಿನಾಥ್ ಹೇಳಿದ್ದೇನು?
"ನನಗೆ ನಿಜಕ್ಕೂ ಆಘಾತವಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಆತನನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಪರ್ತ್ ಟೆಸ್ಟ್ ಬಳಿಕವೇ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಿಸುವ ಉದ್ದೇಶ ಹೊಂದಿದ್ದರು. ತನ್ನ ಬದಲಿಗೆ ವಾಷಿಂಗ್ಟನ್ ಸುಂದರ್ ಆಡಿದ್ದು ಅವರಿಗೆ ಬೇಸರ ತರಿಸಿತ್ತು ಎಂದು ರೋಹಿತ್ ಶರ್ಮಾ ತಿಳಿಸಿದ್ದರು" ಎಂದು ಬದ್ರಿನಾಥ್ ಹೇಳಿದ್ದಾರೆ.
"ತಮಿಳುನಾಡು ಕ್ರಿಕೆಟ್‌ಗೆ ಇದು ದೊಡ್ಡ ವಿಷಯವಾಗಿದೆ. ಬೇರೆ ರಾಜ್ಯದ ಆಟಗಾರರಿಗೆ ಸುಲಭವಾಗಿ ಅವಕಾಶ ಸಿಗುವಾಗ, ಅಶ್ವಿನ್ ಅದೆಲ್ಲವನ್ನೂ ಮೀರಿ ಬೆಳೆದವರು. ಟೆಸ್ಟ್ ಕ್ರಿಕೆಟ್‌ನಲ್ಲಿ 500ಕ್ಕಿಂತ ಹೆಚ್ಚು ವಿಕೆಟ್ ಪಡೆದು ಲೆಜೆಂಡ್ ಆಗಿದ್ದಾರೆ" ಎಂದು ಹೇಳಿದ್ದಾರೆ.
ಅಶ್ವಿನ್ ಅಸಮಾಧಾನದಿಂದಲೇ ನಿವೃತ್ತರಾಗಿದ್ದಾರೆ ಎನ್ನುವ ಅಭಿಪ್ರಾಯವೇ ವ್ಯಕ್ತವಾಗುತ್ತಿದೆ. ಭಾರತ ತಂಡಕ್ಕಾಗಿ ಇಷ್ಟು ವರ್ಷ ಆಡಿರುವ ಆಟಗಾರನಿಗೆ. ಒಂದು ವಿದಾಯ ಪಂದ್ಯ ಇರಬೇಕಿತ್ತು ಎಂದು ಅಭಿಮಾನಿಗಳು ಕೂಡ ಬೇಸರಪಟ್ಟುಕೊಂಡಿದ್ದಾರೆ. ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಅನುಮಾನ ಕೂಡ ಹೆಚ್ಚಾಗಿದೆ.
ಕೆಲವು ಆಟಗಾರರು ಪದೇ ಪದೇ ವಿಫಲವಾಗುತ್ತಿದ್ದರೂ ಅವಕಾಶ ಪಡೆಯುತ್ತಿದ್ದರೆ ಇನ್ನು ಕೆಲವು ಆಟಗಾರರು ಒಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದೇ ಇದ್ದರೂ ಮುಂದಿನ ಪಂದ್ಯಕ್ಕೆ ಬೆಂಚ್ ಕಾಯಬೇಕಾದ ಪರಿಸ್ಥಿತಿ ಟೀಂ ಇಂಡಿಯಾದಲ್ಲಿದೆ. ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್, ಆರ್ ಅಶ್ವಿನ್‌ರಂತಹ ಆಟಗಾರರು ಪದೇ ಪದೇ ಇಂತಹ ಮುಜುಗರ ಅನುಭವಿಸಿದ್ದಾರೆ.












Click it and Unblock the Notifications