RCB vs MI: ಮುಂಬೈ ಇಂಡಿಯನ್ಸ್ ಫೈನಲ್ ಕನಸು ಭಗ್ನ; ಗೆಲುವಿನ ಮೂಲಕ ಅಭಿಯಾನ ಮುಗಿಸಿದ ಆರ್‌ಸಿಬಿ
ಮಹಿಳಾ ಪ್ರೀಮಿಯರ್ ಲೀಗ್ 2025ರ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಮುಂಬೈ ಇಂಡಿಯನ್ಸ್ ವಿರುದ್ಧ 11 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಗೆಲುವಿನ ಮೂಲಕ ಹಾಲಿ ಚಾಂಪಿಯನ್ ಆರ್ ಸಿಬಿ ಅಭಿಯಾನ ಮುಗಿಸಿದರೆ, ಮುಂಬೈ ಇಂಡಿಯನ್ಸ್ ತಂಡದ ನೇರ ಫೈನಲ್ ಕನಸನ್ನು ಭಗ್ನಗೊಳಿಸಿದೆ.
ಆರ್ ಸಿಬಿ ವಿರುದ್ಧ ಗೆದ್ದಿದ್ದರೆ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ನೇರವಾಗಿ ಫೈನಲ್ ತಲುಪುತ್ತಿತ್ತು, ಆದರೆ ಆರ್ ಸಿಬಿ ಮುಂಬೈ ಇಂಡಿಯನ್ಸ್ ಅವರ ತವರಿನಲ್ಲೇ ಗೆಲುವು ಸಾಧಿಸುವ ಮೂಲಕ ಅವರ ಆಸೆಗೆ ತಣ್ಣಿರು ಎರಚಿದೆ. ಇದೀಗ ಮುಂಬೈ ಇಂಡಿಯನ್ಸ್ ಗುಜರಾತ್ ಜೈಂಟ್ಸ್ ವಿರುದ್ಧ ಪ್ಲೇಆಫ್ ಪಂದ್ಯದಲ್ಲಿ ಆಡಿ ಅಲ್ಲಿ ಗೆದ್ದು ಫೈನಲ್ ತಲುಪಬೇಕಾಗಿದೆ.

ಮುಂಬೈನ ಬಾರ್ಬೌನ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕೊನೆಯ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂಧಾನ ಫಾರ್ಮ್‌ಗೆ ಮರಳಿದರು, 37 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್ ಸಹಿತ 53 ರನ್ ಗಳಿಸಿದರು. ಸಬ್ಬಿನೇನಿ ಮೇಘನಾ 13 ಎಸೆತಗಳಲ್ಲಿ 26 ರನ್ ಗಳಿಸಿ ಸ್ಫೋಟಕ ಆರಂಭ ನೀಡಿದರು. ಎಲ್ಲಿಸ್ ಪೆರ್‍ರಿ 38 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿದರು. ರಿಚಾ ಘೋಷ್ 36 ರನ್ ಗಳಿಸಿದರೆ, ಜಾರ್ಜಿಯಾ ವೇರಂ 10 ಎಸೆತಗಳಲ್ಲಿ 5 ಬೌಂಡರಿ 1 ಭರ್ಜರಿ ಸಿಕ್ಸರ್ ಸಹಿತ ಅಜೇಯ 31 ರನ್ ಗಳಿಸಿ ಅಬ್ಬರಿಸಿದರು. ಆರ್ ಸಿಬಿ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿತು.
200 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ಗೆ ಸ್ನೇಹ್ ರಾಣಾ ಆರಂಭದಲ್ಲೇ ಆಘಾತ ನೀಡಿದರು. ಹೇಯ್ಲಿ ಮ್ಯಾಥ್ಯೂಸ್ (19 ರನ್) ಮತ್ತು ಅಮೆಲಿಯಾ ಕೆರ್ (9 ರನ್) ಅವರ ವಿಕೆಟ್ ಪಡೆದರು. ಬಳಿಕ ಬಂದ ನ್ಯಾಟ್ ಸಿವರ್ ಬ್ರಂಟ್ 35 ಎಸೆತಗಳಲ್ಲಿ 69 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ನಾಯಕಿ ಹರ್ಮನ್ ಪ್ರೀತ್ ಕೌರ್ 20 ರನ್ ಗಳಿಸಿದರೆ, ಅಮಂಜೋತ್ ಕೌರ್ 17 ರನ್ ಗಳಿಸಿದರು.
ಸಜನಾ ಸಜೀವನ್ 12 ಎಸೆತಗಳಲ್ಲಿ 23 ರನ್ ಗಳಿಸಿ ಹೋರಾಟ ನೀಡಿದರೂ ತಂಡವನ್ನು ಗೆಲ್ಲಿಸುವಲ್ಲಿ ವಿಫಲವಾದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಸ್ನೇಹ್ ರಾಣಾ 3 ವಿಕೆಟ್ ಪಡೆದರೆ, ಕಿಮ್ ಗಾರ್ತ್ ಮತ್ತು ಎಲ್ಲಿಸ್ ಪೆರ್‍ರಿ ತಲಾ 2 ವಿಕೆಟ್ ಪಡೆದರು. ಹೀಥರ್ ಗ್ರಹಾಂ ಮತ್ತು ಜಾರ್ಜಿಯಾ ವೇರಂ ತಲಾ ಒಂದು ವಿಕೆಟ್ ಪಡೆದುಕೊಂಡರು.












Click it and Unblock the Notifications