RCB: ಆರ್‌ಸಿಬಿ-ಎಸ್‌ಆರ್‌ಎಚ್ ಪಂದ್ಯ ರದ್ದಾಗುವ ಸಾಧ್ಯತೆ
IPL 2025 RCB: ಭಾರತ-ಪಾಕಿಸ್ತಾನ ನಡುವೆ ಸಂಘರ್ಷ ಕಾರಣ ಅರ್ಧಕ್ಕೆ ರದ್ದಾಗಿದ್ದ ಐಪಿಎಲ್ 2025 ಮತ್ತೆ ಮೇ 17ರಿಂದ ಆರಂಭ ಆಗಿದೆ. ಮೊದಲ ಪಂದ್ಯ ಆರ್‌ಸಿಬಿ-ಕೆಕೆಆರ್ ನಡುವೆ ಚಿನ್ನಸ್ವಾಮಿಯಲ್ಲಿ ನಡೆಯಬೇಕಿತ್ತು. ಭಾರೀ ಮಳೆ ಹಿನ್ನೆಲೆ ಪಂದ್ಯ ರದ್ದಾಗಿದ್ದು, ಎರಡು ತಂಡಗಳಿಗೂ ತಲಾ ಒಂದು ಅಂಕ ನೀಡಲಾಗಿದೆ. ಹಾಗೆಯೇ ಬೆಂಗಳೂರು ಮುಂದಿನ ಪಂದ್ಯವನ್ನ ಮತ್ತೆ ತವರಿನಲ್ಲೇ ಎಸ್‌ಆರ್‌ಎಚ್ ವಿರುದ್ಧ ಸೆಣಸಲಿದೆ. ಅಂದು ಸಹ ಪಂದ್ಯ ಸ್ಥಗಿತವಾಗುವ ಸಾಧ್ಯತೆಯಿದೆ. ಹಾಗಾದ್ರೆ ಕಾರಣ ಏನೆಂದು ತಿಳಿಯಿರಿ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟುಬಿಡದೇ ಭಾರೀ ಮಳೆ ಸುರಿಯುತ್ತಿದೆ. ಹಾಗೆಯೇ ಶನಿವಾರ ಸಹ ಭಾರೀ ಮಳೆಯಾಗಿದ್ದು, ನಗರದ ಹಲವೆಡೆ ರಸ್ತೆಗಳು ನದಿಯಂತಾಗಿ ಮಾರ್ಪಟ್ಟು ವಾಹನ ಸವಾರರು ಪರದಾಡಿದ ಘಟನೆಗಳು ನಡೆದಿವೆ. ಮತ್ತೊಂದೆಡೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಸಹ ಇದೇ ಪರಿಸ್ಥಿತಿ ಎದುರಾದ ಕಾರಣ ಆರ್‌ಸಿಬಿ-ಹಾಗೂ ಕೆಕೆಆರ್ ನಡುವೆ ನಡೆಯಬೇಕಿದ್ದ ಪಂದ್ಯ ಕೂಡ ರದ್ದಾಗಿದೆ. ಇದರಿಂದ ಕೆಕೆಆರ್ ಟೂರ್ನಿಯಿಂದಲೇ ಹೊರಬಿದ್ದಿದ್ದು, ಆರ್‌ಸಿಬಿ ಪ್ಲೇ ಆಫ್ ಪ್ರವೇಶದ ಹಂತದಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇನ್ನೂ ಎರಡು ಪಂದ್ಯಗಳಿವೆ. ಮುಂದಿನ ಪಂದ್ಯವನ್ನು ಮೇ 23ರಂದು ಈಗಾಗಲೇ ಸೋತು ಸುಣ್ಣವಾಗಿ ಟೂರ್ನಿಯಿಂದ ಹೊರಬಿದ್ದಿರುವ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಬೇಕಿದೆ. ಪ್ಲೇ ಆಫ್ ಪ್ರವೇಶದ ಹಾದಿ ಮತ್ತಷ್ಟು ಸುಗಮಗೊಳಿಸಿಕೊಳ್ಳಲು ಈ ಮ್ಯಾಚ್‌ನಲ್ಲಿ ಆರ್‌ಸಿಬಿ ಗೆಲ್ಲಲ್ಲೇಬೇಕಿದೆ. ಈ ಬೆನ್ನಲ್ಲೇ ಮುಂದಿನ ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಆತಂಕ ಎದುರಾಗಿದೆ.
ಯಾಕಂದ್ರೆ, ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಅಂಡಮಾನ್ ಮತ್ತು ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಿದೆ. ಈಗಾಗಲೇ ಇದರ ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದು ಮುಂದಿನ ಹಲವು ದಿನಗಳವರೆಗೂ ಮುಂದುವರೆಯುವ ಮುನ್ಸೂಚನೆಯನ್ನೂ ನೀಡಿದೆ.
ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇದರಿಂದ ಮತ್ತೆ ಮಳೆ ಅಡ್ಡಿಯಾಗುವ ಆತಂಕ ಆರ್‌ಸಿಬಿ ತಂಡಕ್ಕೆ ಎದುರಾಗಿದೆ. ಮೇ 23ರಂದು ಆರ್‌ಸಿಬಿಯು ಎಸ್‌ಆರ್‌ಎಚ್ ವಿರುದ್ಧ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಸೆಣಸಬೇಕಿದೆ. ಅಂದು ಮೇ 17ರಂತೆ ಅಂದು ಕೂಡ ಭಾರೀ ಮಳೆ ಮುಂದುವರೆದರೆ, ಪಂದ್ಯ ರದ್ದಾಗುವ ಸಾಧ್ಯತೆ ಹೆಚ್ಚಿರುವ. ಒಂದು ವೇಳೆ ಸಾಧಾರಣ ಮಳೆಯಾಗಿ ನಿಂತರೆ, ಓವರ್‌ಗಳನ್ನು ಕಡಿತ ಮಾಡಿ ಆಡಿಸಲಾಗುತ್ತದೆ.
ಈಗಾಗಲೇ ಮೇ 17ರಂದು ಬೆಂಗಳೂರಿನಲ್ಲಿ ಭಾರೀ ಮಳೆ ಮುಂದುವರೆದ ಹಿನ್ನೆಲೆ ಆರ್‌ಸಿಬಿ-ಕೆಕೆಆರ್ ನಡುವೆ ನಡೆಯಬೇಕಿದ್ದ ಪಂದ್ಯ ರದ್ದಾಗಿದ್ದು, ಎರಡು ತಂಡಗಳಿಗೂ ತಲಾ ಒಂದು ಅಂಕಗಳನ್ನು ನೀಡಲಾಗಿದೆ. ಮಳೆ ನಿಂತಿದ್ದರೆ, 6 ಓವರ್‌ಗಳಿಗೆ ಆಡಿಸುವ ಪ್ಲಾನ್ ಮಾಡಿಕೊಂಡಿದ್ದು, ಇದು ಸಾಧ್ಯವಾಗಲಿಲ್ಲ. ಇದೇ ಪರಿಸ್ಥಿತಿ ಮುಂದಿನ ಪಂದ್ಯಕ್ಕೂ ಆಗುವ ಆತಂಕ ಎದುರಾಗಿದೆ.
ಮುಂದಿನ ಪಂದ್ಯ ಕೂಡ ಬೆಂಗಳೂರಿನಲ್ಲೇ ಇರುವುದರಿಂದ ಆರ್‌ಸಿಬಿ ಆಟಗಾರರೆಲ್ಲಾ ಇಲ್ಲೇ ಮೊಕ್ಕಾಂ ಹೂಡಿದ್ದಾರೆ. ಒಂದು ವೇಳೆ ಆ ಪಂದ್ಯ ಸಹ ರದ್ದಾದ್ರೆ, ಮತ್ತೆ ಎರಡು ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗುತ್ತದೆ. ಇದು ಆರ್‌ಸಿಬಿಗೆ ನಷ್ಟಕ್ಕಿಂತ ಹೆಚ್ಚು ವರದಾನ ಆದಂತಾಗಲಿದೆ. ಯಾಕೆ ಅಂತೀರಾ ಈಗಾಗಲೇ ಆರ್‌ಸಿಬಿ ಪ್ಲೇ ಆಫ್ ಹೊಸ್ತಿಲಿಗೆ ಬಂದು ನಿಂತಿದ್ದು, ಈ ಗೆರೆ ದಾಟಲು ಇನ್ನೂ ಅರ್ಧ ಹೆಜ್ಜೆ ಅಷ್ಟೇ ಬಾಕಿಯಿದೆ. ಅದೇನೆ ಇರಲಿ ಅಂದು ಮಳೆ ಬಾರದಿದ್ದರೆ ಸಾಕು ನಮ್ಮ ಆರ್‌ಸಿಬಿ ತಂಡ ಗೆದ್ದೇ ಗೆಲ್ಲುತ್ತದೆ ಎಂದು ಅಭಿಮಾನಿಗಳು ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ.
ಕೆಕೆಆರ್ ಮತ್ತು ಆರ್‌ಸಿಬಿ ನಡುವಿನ ಈ ಪಂದ್ಯ ಮಳೆಯಿಂದಾಗಿ ರದ್ದಗಿದ್ದು, ಆರ್‌ಸಿಬಿ ತಂಡಕ್ಕೆ ತುಸು ಲಾಭ ಆದಂತಾಗಿದೆ. ಪ್ರಸ್ತುತ ತಂಡವು 12 ಪಂದ್ಯಗಳಲ್ಲಿ 8 ಗೆಲುವು ಮತ್ತು 3 ಸೋಲು, ಒಂದು ರದ್ದಿನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 17 ಅಂಕಗಳನ್ನು ಪಡೆದು ಅಗ್ರಸ್ಥಾನ ಅಲಂಕರಿಸಿದೆ. ಆದರೂ ಪ್ಲೇ ಆಫ್ ಹಾದಿಗೆ ಬಹುತೇಕ ತಲುಪಬೇಕೆಂದರೆ, ಆರ್‌ಸಿಬಿ ಉಳಿದ ಎರಡು ಪಂದ್ಯಗಳಲ್ಲಿ ಒಂದು ಗೆಲ್ಲಲ್ಲೇಬೇಕಿದೆ. ಯಾಕಂದ್ರೆ ಕೆಳಿಗಿಂದ ತಂಡಗಳಿಗೆ ಇನ್ನೂ ಎರಡ್ಮೂರು ಪಂದ್ಯಗಳು ಬಾಕಿಯಿವೆ.
ಇನ್ನು ಕೆಕೆಆರ್ ತಂಡ 13 ಪಂದ್ಯಗಳಲ್ಲಿ 5 ಗೆಲುವು, 6 ಸೋಲು, ಎರಡು ರದ್ದಾದ ಪಂದ್ಯದೊಂದಿಗೆ ಪ್ರಸ್ತುತ 12 ಅಂಕಗಳನ್ನು ಪಡೆದುಕೊಂಡಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಆರನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಕೊನೆ ಉಳಿದ 1 ಪಂದ್ಯದಲ್ಲಿ ಗೆದ್ದು 14 ಅಂಕ ಪಡೆದರೂ ಸಹ ಕೆಕೆಆರ್ ಪ್ಲೇಆಫ್ ತಲುಪಲು ಸಾಧ್ಯವಿಲ್ಲದಂತಾಗಿದೆ.












Click it and Unblock the Notifications