RCB Vs SRH: ಮ್ಯಾಕ್ಸ್‌ವೆಲ್ ಆಡೋದು ಫಿಕ್ಸ್; ಇವತ್ತು ಫುಲ್ ಗುದ್ದಾಂಗುದ್ದಿ ಪಕ್ಕಾ?
ಐಪಿಎಲ್ 2024ರ ಆವೃತ್ತಿಯಲ್ಲಿ ಆಡಿರುವ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಸೋತು ಒಂದು ಮಾತ್ರ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇಂದು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ಪ್ಲೇ ಆಫ್ ಕನಸನ್ನು ಬಹುತೇಕ ಕೈಬಿಟ್ಟಿರುವ ಆರ್‌ಸಿಬಿ ಮುಂದಿನ ಪಂದ್ಯಗಳನ್ನು ಪ್ರತಿಷ್ಠೆಗಾಗಿ ಆಡಲಿದೆ. ಮೊದಲಾರ್ಧ ಹೀನಾಯ ಪ್ರದರ್ಶನ ನೀಡಿದ್ದು, ಉಳಿದ ಆರು ಪಂದ್ಯಗಳನ್ನು ಗೆದ್ದು ಅಭಿಮಾನಿಗಳ ಮನಗೆಲ್ಲುವ ಯೋಜನೆಯಲ್ಲಿದೆ.

ಆಡಿದ ಪ್ರತಿ ಪಂದ್ಯದಲ್ಲೂ ಒಂದಲ್ಲಾ ಒಂದು ದಾಖಲೆ ಮಾಡುತ್ತಲೇ ಇರುವ ಸನ್‌ರೈಸರ್ಸ್ ಹೈದರಾಬಾದ್ ಆರ್‌ಸಿಬಿ ವಿರುದ್ಧ ರನ್ ಹೊಳೆ ಹರಿಸಲು ಸಜ್ಜಾಗಿದ್ದರೆ, ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ಆರ್‌ಸಿಬಿ ಬೌಲರ್ ಗಳು ಏನು ಮಾಡುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ 288 ರನ್‌ಗಳನ್ನು ಕಲೆಹಾಕಿ ಹೊಸ ದಾಖಲೆ ಬರೆದಿತ್ತು, ಈ ಬೃಹತ್ ಗುರಿಯನ್ನು ಬೆನ್ನತ್ತಿದ್ದ ಆರ್‌ಸಿಬಿ ಕೂಡ 262 ರನ್ ಗಳಿಸುವ ಮೂಲಕ ವಿಶ್ವದಾಖಲೆ ಬರೆದಿತ್ತು, ಚೇಸ್ ಮಾಡುವಾಗ ಇದು ತಂಡವೊಂದು ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಅಂದಿನ ಪಂದ್ಯದಲ್ಲಿ ಬೌಂಡರಿ, ಸಿಕ್ಸರ್, ಒಟ್ಟಾರೆ ಮೊತ್ತದ ವಿಚಾರದಲ್ಲಿ ಹಲವು ದಾಖಲೆ ನಿರ್ಮಾಣವಾಗಿತ್ತು.
ಮ್ಯಾಕ್ಸ್‌ವೆಲ್ ಕಣಕ್ಕೆ?
ಕಳೆದ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯದ ಮಾಕ್ಸ್‌ವೆಲ್ ಇಂದು ಆಡುವುದು ಬಹುತೇಕ ಪಕ್ಕಾ ಆಗಿದೆ. ಕ್ಯಾಮೆರಾನ್ ಗ್ರೀನ್ ಬದಲಾಗಿ ಮ್ಯಾಕ್ಸ್‌ವೆಲ್ ಕಣಕ್ಕಿಳಿಯಲಿದ್ದು, ಅವರು ಅಬ್ಬರಿಸಿದರೆ ಮತ್ತೊಮ್ಮೆ ರನ್ ಸುನಾಮಿಯ ರಸದೌತಣ ಅಭಿಮಾನಿಗಳಿಗೆ ಸಿಗುವುದು ಪಕ್ಕಾ ಆಗಿದೆ.
ಪ್ಲೇ ಆಫ್ ಕನಸು ಕೈಬಿಟ್ಟಿರುವ ಕಾರಣ ಆರ್ ಸಿಬಿ ನಿರ್ಭೀತಿಯಿಂದ ಆಡಲಿದ್ದು, ಬೆಂಗಳೂರಿನ ಸೋಲಿಗೆ ಲೆಕ್ಕಾಚಾರ ಚುಕ್ತಾ ಮಾಡಲು ಸಜ್ಜಾಗಿದೆ. ಕೊಹ್ಲಿ, ವಿಲ್ ಜ್ಯಾಕ್ಸ್, ರಜತ್ ಪಟಿದಾರ್, ಫಾಫ್ ಡುಪ್ಲೆಸಿಸ್, ದಿನೇಶ್ ಕಾರ್ತಿಕ್ ಈಗಾಗಲೇ ಉತ್ತಮ ಪ್ರದರ್ಶನ ನೀಡುತ್ತಿದ್ದು, ಮ್ಯಾಕ್ಸ್‌ವೆಲ್ ಕೂಡ ಅಬ್ಬರಿಸಬೇಕಿದೆ.
ಬೌಲಿಂಗ್ ವಿಭಾಗದಲ್ಲಿ ಸುಧಾರಣೆ?
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಬೌಲಿಂಗ್‌ನಲ್ಲಿ ಸುಧಾರಣೆ ಕಂಡಿತ್ತು. ಸುನಿಲ್ ನರೇನ್, ಆಂಡ್ರೆ ರಸೆಲ್ ಅವರ ವಿರುದ್ಧ ಉತ್ತಮವಾಗಿ ಬೌಲ್ ಮಾಡಿದ್ದರು. ಇಂದಿನ ಪಂದ್ಯದಲ್ಲಿ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ ಮತ್ತು ಹೆನ್ರಿಚ್ ಕ್ಲಾಸೆನ್ ಅವರನ್ನು ಕಟ್ಟಿಹಾಕಿದರೆ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಬಹುದು.
ಏನಾದರೂ ಇವತ್ತು ಮತ್ತೊಂದು ಹೈಸ್ಕೋರಿಂಗ್ ಪಂದ್ಯದ ರಸದೌತಣ ಅಭಿಮಾನಿಗಳಿಗೆ ಸಿಗುವುದು ಪಕ್ಕಾ ಎನ್ನಬಹುದು. ಕಳೆದ ಬಾರಿ ಐಪಿಎಲ್‌ನಲ್ಲಿ ಹೈದರಾಬಾದ್‌ನಲ್ಲಿ ಎಸ್ ಆರ್ ಎಚ್ ವಿರುದ್ಧ ಕೊಹ್ಲಿ ಶತಕ ಗಳಿಸಿದ್ದರು. ಇಂದು ಕೂಡ ಅವರಿಂದ ಮತ್ತೊಂದು ಶತಕದ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.












Click it and Unblock the Notifications