RCB vs RR: 'ಮೇ'ನಲ್ಲಿ ಅವ್ರು ಗೆದ್ದಿಲ್ಲ, ಇವ್ರು ಸೋತಿಲ್ಲ; ಪ್ಲೇಯಿಂಗ್ ಇಲೆವೆನ್, ಪಿಚ್ ವರದಿ
ಸತತ ಆರು ಪಂದ್ಯಗಳನ್ನು ಗೆದ್ದು ಎಲ್ಲರ ಲೆಕ್ಕವನ್ನು ಉಲ್ಟಾ ಮಾಡಿರುವ ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ಬುಧವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ.
ಇಂದು (ಮಂಗಳವಾರ) ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್ 1 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಇಂದು ಗೆಲ್ಲುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ.

ನಾಳೆ (ಬುಧವಾರ) ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣೆಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಜ್ಜಾಗಿದೆ. ಪ್ಲೇಆಫ್‌ನಲ್ಲಿ ಸತತವಾಗಿ ಆರು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಆರ್ ಸಿಬಿ ಈ ಪಂದ್ಯದಲ್ಲಿ ಗೆಲ್ಲುವ ಫೇವರಿಟ್ ಆಗಿದೆ.
ಅವ್ರು ಗೆದ್ದಿಲ್ಲ, ಇವ್ರು ಸೋತಿಲ್ಲ
ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಆರ್‌ಆರ್ ತಂಡಗಳದ್ದು ತದ್ವಿರುದ್ಧ ಕಥೆ. ರಾಜಸ್ಥಾನ ರಾಯಲ್ಸ್ ಮೊದಲ ಒಂಭತ್ತು ಪಂದ್ಯಗಳಲ್ಲಿ ಬರೋಬ್ಬರಿ 8 ಪಂದ್ಯಗಳನ್ನು ಗೆದ್ದು ಒಂದರಲ್ಲಿ ಮಾತ್ರ ಸೋತಿತ್ತು. ಆದರೆ ನಂತರ ಸತತವಾಗಿ ನಾಲ್ಕು ಪಂದ್ಯಗಳನ್ನು ಸೋತಿದ್ದು, ಲೀಗ್ ಹಂತದಲ್ಲಿ ಕೆಕೆಆರ್ ವಿರುದ್ಧದ ಕೊನೆಯ ಪಂದ್ಯ ಮಳೆಯಿಂದ ರದ್ದಾಗಿತ್ತು.
ಆರ್‌ಸಿಬಿ ಮೊದಲ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದ್ದು ಬಳಿಕ ಸತತವಾಗಿ ಆರು ಪಂದ್ಯಗಳಲ್ಲಿ ಗೆದ್ದು ಪ್ಲೇಆಫ್‌ಗೆ ಬಂದಿದೆ. ಇದು ಆರ್ ಸಿಬಿ ತಂಡದ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.
ರಾಜಸ್ಥಾನ ರಾಯಲ್ಸ್ ಕೊನೆಯದಾಗಿ ಗೆಲುವು ಕಂಡಿದ್ದು ಏಪ್ರಿಲ್ 27 ರಂದು, ಮೇ ತಿಂಗಳಿನಲ್ಲಿ ರಾಜಸ್ಥಾನ ರಾಯಲ್ಸ್ ನಾಲ್ಕು ಪಂದ್ಯಗಳನ್ನಾಡಿದ್ದು ಎಲ್ಲದರಲ್ಲೂ ಸೋತಿದೆ. ಆರ್ ಸಿಬಿ ಕೊನೆಯಬಾರಿ ಸೋಲು ಕಂಡಿದ್ದು ಏಪ್ರಿಲ್ 21ರಂದು ಕೆಕೆಆರ್ ವಿರುದ್ಧ, ಅದಾದ ಬಳಿಕ ಸೋಲು ಕಂಡಿಲ್ಲ.
ಅಹಮದಾಬಾದ್ ಪಿಚ್ ವರದಿ
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಒಟ್ಟು 11 ಪಿಚ್‌ಗಳಿವೆ. ಕೆಂಪುಮಣ್ಣಿನ 6 ಪಿಚ್‌ಗಳು ಮತ್ತು ಕಪ್ಪು ಮಣ್ಣಿನ 5 ಪಿಚ್‌ಗಳು. ಕೆಂಪು ಮಣ್ಣಿನ ಪಿಚ್‌ಗಳು ಬ್ಯಾಟಿಂಗ್ ಸಹಕಾರಿಯಾಗಿವೆ. ಆರಂಭದಲ್ಲಿ ವೇಗಿಗಳಿಗೂ ಈ ಪಿಚ್ ನೆರವು ನೀಡಲಿದ್ದು, ಹೈಸ್ಕೋರಿಂಗ್ ಪಂದ್ಯವನ್ನು ನಿರೀಕ್ಷೆ ಮಾಡಬಹುದು. ಒಂದು ವೇಳೆ ಕಪ್ಪು ಮಣ್ಣಿನ ಪಿಚ್‌ನಲ್ಲಿ ಆಡಿದರೆ ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು ಸಿಗಲಿದ್ದು, ಬ್ಯಾಟಿಂಗ್ ಮಾಡುವುದು ಕಷ್ಟವಾಗಲಿದೆ.
ಹವಾಮಾನ ವರದಿ ಹೇಗಿರಲಿದೆ?
ಬುಧವಾರ ಅಹಮದಾಬಾದ್‌ಗೆ ಯಾವುದೇ ಮಳೆ ಮುನ್ಸೂಚನೆ ಇಲ್ಲ. ತಾಪಮಾನ ಕನಿಷ್ಠ 31 ಡಿಗ್ರಿ ಸೆಲ್ಸಿಯಸ್ ಇದ್ದರೆ ಗರಿಷ್ಠ 44 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಪಂದ್ಯಕ್ಕೆ ಮಳೆಯ ಆತಂಕ ಇರುವುದಿಲ್ಲ.
ಉಭಯ ತಂಡಗಳ ಆಡುವ ಬಳಗ
ಆರ್‌ಸಿಬಿ ತಂಡದಲ್ಲಿ ವಿಲ್ ಜ್ಯಾಕ್ಸ್ ಮತ್ತು ರೀಸ್ ಟೋಪ್ಲಿ ಇಂಗ್ಲೆಂಡ್ ಮರಳಿದ್ದು, ಅವರು ಆಯ್ಕೆಗೆ ಲಭ್ಯವಿಲ್ಲ. ಸಿಎಸ್‌ಕೆ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಮಿಂಚಿದ್ದು, ಆರ್‌ಸಿಬಿ ಬಲ ಹೆಚ್ಚಾಗಿದೆ. ಆದರೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್ ಅಲಭ್ಯತೆ ಹೆಚ್ಚಾಗಿ ಕಾಡಲಿದೆ.
ಆರ್‌ಸಿಬಿ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಟಿದಾರ್, ಕ್ಯಾಮೆರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್, ಸ್ವಪ್ನಿಲ್ ಸಿಂಗ್, ಕರಣ್ ಶರ್ಮಾ, ಯಶ್ ದಯಾಳ್, ಲಾಕಿ ಫರ್ಗ್ಯುಸನ್, ಮೊಹಮ್ಮದ್ ಸಿರಾಜ್.
ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕಾಡ್ಮೋರ್, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್), ರಿಯಾನ್ ಪರಾಗ್, ಧ್ರುವ್ ಜುರೆಲ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಅವೇಶ್ ಖಾನ್, ನಾಂದ್ರೆ ಬರ್ಗರ್.












Click it and Unblock the Notifications