RCB Vs MI: ಈ ಬದಲಾವಣೆ ಮಾಡದಿದ್ದರೆ ಆರ್‌ಸಿಬಿ ಹೊಸ ಅಧ್ಯಾಯ ಆರಂಭ ಆಗಲ್ಲ!
ಐಪಿಎಲ್ 2024 ಆರ್‌ಸಿಬಿಗೆ ಹೊಸ ಅಧ್ಯಾಯ ಎಂದು ವಿರಾಟ್ ಕೊಹ್ಲಿ ಹೇಳಿದ್ದರು. ಆದರೆ ಇದುವರೆಗೂ ಆಡಿರುವ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಸೋತಿದ್ದು, ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಇದನ್ನು ಕಂಡ ಅಭಿಮಾನಿಗಳು ನಮಗೆ ಹಳೆ ಅಧ್ಯಾಯವೇ ಚನ್ನಾಗಿತ್ತು ಎಂದು ಎನ್ನುತ್ತಿದ್ದಾರೆ.
ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಲ್ಲಿಂದ ಸೀದಾ ಮುಂಬೈ ತಲುಪಿದೆ. ಏಪ್ರಿಲ್ 11ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಆಡಲಿದೆ.

ಸತತ ಮೂರು ಪಂದ್ಯಗಳನ್ನು ಸೋತಿದ್ದ ಮುಂಬೈ ಇಂಡಿಯನ್ಸ್ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸುವ ಮೂಲಕ ಗೆಲುವಿನ ಖಾತೆ ತೆರೆದಿದೆ. ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಲಯ ಕಂಡುಕೊಂಡಿರುವ ಮುಂಬೈ ಆರ್ ಸಿಬಿ ವಿರುದ್ಧ ಕೂಡ ಗೆಲ್ಲುವ ವಿಶ್ವಾಸದಲ್ಲಿದೆ.
ಆರ್‌ಸಿಬಿ ತಂಡದಲ್ಲಿ ಬದಲಾವಣೆ
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಪ್ಲೇಯಿಂಗ್ ಇಲೆವೆನ್ ಬದಲಾವಣೆ ಮಾಡದೇ ಇದ್ದರೆ, ಗೆಲ್ಲುವುದು ಕಷ್ಟಸಾಧ್ಯ. ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲೇ ಆರ್‌ಸಿಬಿ ಎಡವುತ್ತಿರುವುದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ.
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮಹಿಪಾಲ್ ಲೊಮ್ರೋರ್ ಕೈಬಿಟ್ಟ ಬಳಿಕ, ಫಾರ್ಮ್‌ನಲ್ಲಿದ್ದ ದಿನೇಶ್ ಕಾರ್ತಿಕ್ ಅವರನ್ನು ಬ್ಯಾಟಿಂಗ್‌ಗೆ ಕಳಿಸದೇ ಸೋಲು ಅನುಭವಿಸಿತು. ಕೆಕೆಆರ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದರೂ ವಿಜಯ್ ಕುಮಾರ್ ವೈಶಾಖ್‌ಗೆ ಮತ್ತೆ ಅವಕಾಶ ಸಿಗಲೇ ಇಲ್ಲ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿಲ್ ಜ್ಯಾಕ್ಸ್ ಆಡಿದರೆ ಆರ್‌ಸಿಬಿ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಕ್ಕೆ ಬಲ ಬರಲಿದೆ. ಉತ್ತಮ ಪ್ರದರ್ಶನ ನೀಡದ ಗ್ರೀನ್ ಅಥವಾ ಮ್ಯಾಕ್ಸ್‌ವೆಲ್ ಅವರಿಗೆ ವಿಶ್ರಾಂತಿ ನೀಡುವ ಅಗತ್ಯವಿದೆ.
ಮುಖ್ಯವಾಗಿ ಫಾರ್ಮ್‌ನಲ್ಲಿರುವ ಮಹಿಪಾಲ್ ಲೊಮ್ರೊರ್ ಮತ್ತು ವೈಶಾಖ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಬೇಕಿದೆ. ಕೊಹ್ಲಿ ಉತ್ತಮವಾಗಿ ಆಡುತ್ತಿದ್ದು, ಅವರಿಗೆ ಬೆಂಬಲ ನೀಡುವ ಬ್ಯಾಟರ್ ಬೇಕಿದೆ. ವಿಲ್‌ಜ್ಯಾಕ್ಸ್ ಸ್ಫೋಟಕ ಬ್ಯಾಟರ್ ಆಗಿದ್ದು, ಅವರನ್ನು ಆಡಿಸಿದರೆ, ಕೊಹ್ಲಿ ಮೇಲಿನ ಒತ್ತಡ ಕಡಿಮೆ ಮಾಡಬಹುದು.
ಪ್ಲೇಯಿಂಗ್ ಇಲೆವೆನ್ ಆಯ್ಕೆ, ಮೈದಾನದಲ್ಲಿ ಬೌಲಿಂಗ್ ಬದಲಾವಣೆ ವಿಚಾರದಲ್ಲಿ ನಾಯಕ ಫಾಪ್ ಡುಪ್ಲೆಸಿಸ್ ಕೂಡ ಪರಿಣಾಮಕಾರಿ ನಿರ್ಧಾರ ಮಾಡುವಲ್ಲಿ ಎಡವಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೂಡ ಬದಲಾವಣೆ ಮಾಡಬೇಕಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಕ್ಯಾಮೆರಾನ್ ಗ್ರೀನ್ ಬದಲಿಗೆ ದಿನೇಶ್ ಕಾರ್ತಿಕ್ ಬಂದಿದ್ದರೆ ಇನ್ನೂ 10-15 ಹೆಚ್ಚು ರನ್‌ಗಳನ್ನು ಆರ್ ಸಿಬಿ ಕಲೆಹಾಕಬಹುದಿತ್ತು ಎಂದು ಮಾಜಿ ಕ್ರಿಕೆಟಿಗರು ಕೂಡ ಅಭಿಪ್ರಾಯಪಟ್ಟಿದ್ದಾರೆ.
ಆದರೆ ಎಲ್ಲರ ನಿರೀಕ್ಷೆಗಳನ್ನು ತಲೆ ಕೆಳಗಾಗಿಸಿ, ಅಭಿಮಾನಿಗಳಿಗೆ ಶಾಕ್ ಕೊಡುವಲ್ಲಿ ಆರ್‌ಸಿಬಿ ಮೊದಲಿನಿಂದಲೂ ಹಿಂದೆ ಬಿದ್ದಿಲ್ಲ. ಮುಂಬೈ ಇಂಡಿಯನ್ಸ್ ವಿರುದ್ಧ ತಂಡದಲ್ಲಿ ಬದಲಾವಣೆ ಮಾಡುತ್ತಾ, ಮತ್ತೆ ಗೆಲುವಿನ ಹಾದಿಗೆ ಮರಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ತಂಡದ ಸಂಭಾವ್ಯ ಇಲೆವೆನ್
ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜ್ಯಾಕ್ಸ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸೌರವ್ ಚೌಹಾಣ್, ಕ್ಯಾಮೆರಾನ್ ಗ್ರೀನ್ / ಗ್ಲೆನ್ ಮ್ಯಾಕ್ಸ್‌ವೆಲ್ಯಶ್ ದಯಾಳ್, ಮೊಹಮ್ಮದ್ ಸಿರಾಜ್, ವಿಜಯ್ ಕುಮಾರ್ ವೈಶಾಖ್, ಲಾಕಿ ಫರ್ಗ್ಯುಸನ್ / ರೀಸ್ ಟೋಪ್ಲಿ.












Click it and Unblock the Notifications