RCB vs DC: ಶ್ರೇಯಾಂಕಾ, ಮೊಲಿನ್ಯೂ, ಆಶಾ ಸ್ಪಿನ್ ದಾಳಿಗೆ ನಲುಗಿದ ಡೆಲ್ಲಿ: ಆರ್‌ಸಿಬಿ ಗೆಲುವಿಗೆ 114 ರನ್‌ಗಳ ಗುರಿ
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ 2024 ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಮೇಲುಗೈ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 18.3 ಓವರ್ ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಸ್ಫೋಟಕ ಆರಂಭ ಪಡೆಯಿತು. ಶೆಫಾಲಿ ವರ್ಮಾ ಮತ್ತು ನಾಯಕಿ ಮೆಗ್ ಲ್ಯಾನಿಂಗ್ 6 ಓವರ್ ಗಳಲ್ಲಿ 61 ರನ್ ಕಲೆಹಾಕಿದರು. ಡೆಲ್ಲಿ ಕ್ಯಾಪಿಟಲ್ಸ್ ಬೃಹತ್ ಮೊತ್ತ ಕಲೆಹಾಕುವ ಮುನ್ಸೂಚನೆ ಕೊಟ್ಟಿತ್ತು.

6ನೇ ಓವರ್ ಬಳಿಕ ಟೈಮ್ ಔಟ್ ತೆಗೆದುಕೊಂಡ ಆರ್ ಸಿಬಿ ಬಳಿಕ ಮ್ಯಾಜಿಕ್ ಮಾಡಿತು. 7ನೇ ಓವರ್ ನಲ್ಲಿ ಜಾರ್ಜಿಯಾ ವೇರ್ಹ್ಯಾಮ್ ಕೇವಲ 3 ರನ್ ನೀಡಿದರು. ಅದಾದ ಬಳಿಕ ದಾಳಿಗಿಳಿದ ಸೋಫಿ ಮೊಲಿನ್ಯೂ ಡೆಲ್ಲಿ ತಂಡಕ್ಕೆ ಆಘಾತ ನೀಡಿದರು. ಒಂದೇ ಓವರ್ ನಲ್ಲಿ 3 ವಿಕೆಟ್ ಪಡೆದು ಮಿಂಚಿದರು. ರಿಚಾ ಘೋಷ್ 27 ಎಸೆತಗಳಲ್ಲಿ 44 ರನ್ ಗಳಿಸಿ ಔಟಾದರೆ, ಜೆಮಿಮಾ ರೋಡ್ರಿಗಸ್ ಮತ್ತು ಅಲಿಸ್ ಕ್ಯಾಪ್ಸಿ ರನ್ ಗಳಿಸದೇ ವಿಕೆಟ್ ಒಪ್ಪಿಸಿದರು.
ಸ್ಪಿನ್ ದಾಳಿಗೆ ನಲುಗಿದ ಡೆಲ್ಲಿ ಕ್ಯಾಪಿಟಲ್ಸ್
ಮೂರು ವಿಕೆಟ್ ಬಿದ್ದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರ್ ಸಿಬಿ ಸ್ಪಿನ್ ಬೌಲಿಂಗ್ ದಾಳಿಗೆ ನಲುಗಿತು. ಶ್ರೇಯಾಂಕ ಪಾಟೀಲ್ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್ ವಿಕೆಟ್ ಪಡೆದರು. ಆಶಾ ಶೋಭನಾ ಒಂದೇ ಓವರ್ ನಲ್ಲಿ ಎರಡು ವಿಕೆಟ್ ಪಡೆದುಕೊಂಡರು.
ಮೆಗ್ ಲ್ಯಾನಿಂಗ್ 23 ರನ್, ಶೆಫಾಲಿ ವರ್ಮಾ 44 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ ಗಳಿಂದ ದೊಡ್ಡ ಮೊತ್ತ ಬರಲೇ ಇಲ್ಲ. ಮಾರಿಜನ್ನೆ ಕಾಪ್ 8 ರನ್, ಜೆಸ್ ಜೊನಾಸೆನ್ 3 ರನ್, ರಾಧಾ ಯಾದವ್ 12 ರನ್, ಮಿನ್ನು ಮಣಿ 5 ರನ್ ಗಳಿಸಿದರು.
ಶ್ರೇಯಾಂಕಾ ಪಾಟೀಲ್ 3.3 ಓವರ್ ಗಳಲ್ಲಿ 12 ರನ್ ನೀಡಿ 4 ವಿಕೆಟ್ ಪಡೆದರು. ಸೋಫಿ ಮೊಲಿನ್ಯೂ 4 ಓವರ್ ಗಳಲ್ಲಿ 20 ರನ್ ನೀಡಿ ಮೂರು ವಿಕೆಟ್ ಪಡೆದರು. ಆಶಾ ಶೋಭನಾ 3 ಓವರ್ ಗಳಲ್ಲಿ 14 ರನ್ ನೀಡಿ 2 ವಿಕೆಟ್ ಪಡೆದರು.












Click it and Unblock the Notifications