Romario Shepherd: 14 ಎಸೆತಗಳಲ್ಲೇ ಅರ್ಧಶತಕ: ಶೆಫರ್ಡ್ ಬಗ್ಗೆ ಮೊದಲೇ ಎಚ್ಚರಿಕೆ ಕೊಟ್ಟಿದ್ದ ಜಿತೇಶ್
ಶನಿವಾರ ಬೆಂಗಳೂರಿನಲ್ಲಿ ನಡೆದ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಆಲ್‌ರೌಂಡರ್ ರೊಮಾರಿಯೋ ಶೆಫರ್ಡ್ ಅಬ್ಬರಿಸಿದರು. ರೊಮಾರಿಯೋ ಅಬ್ಬರಕ್ಕೆ ಹಲವು ದಾಖಲೆಗಳು ಪುಡಿಯಾದವು. ಆರ್ ಸಿಬಿ ಪರವಾಗಿ ವೇಗದ ಅರ್ಧಶತಕ ಬಾರಿಸಿದ ರೊಮಾರಿಯೋ ಶೆಫರ್ಡ್ ಬೃಹತ್ ಮೊತ್ತ ಕಲೆ ಹಾಕಲು ಪ್ರಮುಖ ಕೊಡುಗೆ ನೀಡಿದರು.
ಆರ್ ಸಿಬಿ 17.4 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಗೆಲುವಿಗೆ ಬೃಹತ್ ಮೊತ್ತದ ಅವಶ್ಯಕತೆ ಇತ್ತು. 180 ರನ್ ಹೊಡೆದರೆ ಸಾಕು ಎನ್ನುವಾಗಲೆ, ಕೊನೆಯ 2.2 ಓವರ್ ಬಾಕಿ ಇದ್ದಾಗ ಕ್ರೀಸ್‌ಗೆ ಬಂದ ರೊಮಾರಿಯೋ ಶೆಫರ್ಡ್ ಸಿಎಸ್‌ಕೆ ಬೌಲರ್ ಗಳನ್ನು ತರಾಟೆಗೆ ತೆಗೆದುಕೊಂಡರು.

19ನೇ ಓವರ್ ನಲ್ಲಿ ಖಲೀಲ್ ಅಹ್ಮದ್‌ಗೆ 33 ರನ್ ಬಾರಿಸುವ ಮೂಲಕ ಅಬ್ಬರಿಸಿದರು. ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್ ನಲ್ಲಿ ನಾಲ್ಕನೇ ದುಬಾರಿ ಓವರ್ ಎನಿಸಿಕೊಂಡಿದೆ. ಕ್ರಿಸ್ ಗೇಲ್ ಆರ್ ಸಿಬಿ ಪರವಾಗಿ ಕೇರಳ ಟಸ್ಕರ್ಸ್ ವಿರುದ್ಧ ಒಂದೇ ಓವರ್ ನಲ್ಲಿ 37 ರನ್ ಬಾರಿಸಿದ್ದು ಈವರೆಗಿನ ದಾಖಲೆಯಾಗಿದೆ. ಈ ಆವೃತ್ತಿಯಲ್ಲಿ ಒಂದೇ ಓವರ್ ನಲ್ಲಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ.
ರೊಮಾರಿಯೊ ಶೆಫರ್ಡ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 213 ರನ್ ಕಲೆಹಾಕಿದರು.
ಈ ಆವೃತ್ತಿಯ ವೇಗದ ಅರ್ಧಶತಕ
ಮೊದಲ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಲಾಂಗ್ ಆಫ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ, ರೊಮಾರಿಯೊ ಐಪಿಎಲ್‌ನಲ್ಲಿ ಸಾರ್ವಕಾಲಿಕ ಎರಡನೇ ವೇಗದ ಅರ್ಧಶತಕ ಗಳಿಸಿದರು. 14 ಎಸೆತಗಳಲ್ಲಿ ಅವರು ಅರ್ಧಶತಕ ಗಳಿಸಿದ ದಾಖಲೆ ಮಾಡಿದರು. 14 ಎಸೆತಗಳಲ್ಲಿ 10 ಎಸೆತಗಳಲ್ಲಿ ಬೌಂಡರಿ ಬಾರಿಸಿದರು.
ಯಶಸ್ವಿ ಜೈಸ್ವಾಲ್ 13 ಎಸೆತಗಳಲ್ಲಿ ಅರ್ಧಶತಕ ಗಳಿಸಿರುವುದು ಐಪಿಎಲ್‌ನ ಅತಿ ವೇಗದ ಅರ್ಧಶತಕವಾಗಿದೆ. ಕೆಎಲ್ ರಾಹುಲ್ ಮತ್ತು ಪಾಟ್ ಕಮ್ಮಿನ್ಸ್ ಕೂಡ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ದಾಖಲೆ ಹೊಂದಿದ್ದು, ರೊಮಾರಿಯೋ ಶೆಫರ್ಡ್ ಈ ದಾಖಲೆಯನ್ನು ಸರಿಗಟ್ಟಿದ್ದಾರೆ. ಆರ್ ಸಿಬಿ ಪರವಾಗಿ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ಬರೆದಿದ್ದಾರೆ.
ಎಚ್ಚರಿಕೆ ನೀಡಿದ್ದ ಜಿತೇಶ್ ಶರ್ಮಾ
ರೊಮಾರಿಯೋ ಶೆಫರ್ಡ್ ಬಗ್ಗೆ ಆರ್ ಸಿಬಿ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಮೊದಲೇ ಎಚ್ಚರಿಕೆ ನೀಡಿದ್ದರು. ಆರ್ ಸಿಬಿ ಅಭ್ಯಾಸ ಮಾಡುವ ವೇಳೆ ರೊಮಾರಿಯೋ ಶೆಫರ್ಡ್ ಅವರ ಬ್ಯಾಟಿಂಗ್ ನೋಡಿದ್ದ ಜಿತೇಶ್ ಶರ್ಮಾ, ಇವರ ತೋಳಿನಲ್ಲಿ ರ್‍ಹಿನೋಸ್‌ನ ಬಲವಿದೆ ಎಂದು ಹೇಳಿದ್ದರು. ಅಭ್ಯಾಸದ ವೇಳೆಯೇ ಶೆಫರ್ಡ್ ಸಾಕಷ್ಟು ಬಾರಿ ಚೆಂಡನ್ನು ಮೈದಾನದಿಂದ ಹೊರಗೆ ಬಾರಿಸಿದ್ದರು.












Click it and Unblock the Notifications