RCB: ಇದು ಟಿ20ಗೆ ಅನುಕೂಲವಾದ ಪಿಚ್ ಅಲ್ಲ: ದಿನೇಶ್ ಕಾರ್ತಿಕ್ ಅಸಮಾಧಾನ
ಐಪಿಎಲ್ 2025ರ ಆವೃತ್ತಿಯಲ್ಲಿ ಆರ್‌ಸಿಬಿ ತವರಿನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್‌ಗಳಿಂದ ಭರ್ಜರಿ ಗೆಲುವು ಕಂಡಿದೆ. ಕನ್ನಡಿಗ ಕೆಎಲ್ ರಾಹುಲ್ ಅಮೋಘ ಬ್ಯಾಟಿಂಗ್ ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು ತಂದುಕೊಟ್ಟರು.
ಕೋಲ್ಕತಾ, ಚೆನ್ನೈ ಮತ್ತು ಮುಂಬೈನಲ್ಲಿ ನಡೆದ ಪಂದ್ಯಗಳಲ್ಲಿ ಬಲಿಷ್ಠ ತಂಡಗಳಾದ ಕೆಕೆಆರ್, ಸಿಎಸ್‌ಕೆ, ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದಿರುವ ಆರ್ ಸಿಬಿ ತವರಿನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಕಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾತ್ರ ಆರ್ ಸಿಬಿ ಇನ್ನೂ ಗೆಲುವಿನ ಫಾರ್ಮುಲಾ ಕಂಡುಕೊಳ್ಳಲು ಆಗುತ್ತಿಲ್ಲ.

ಇದೀಗ ಪಿಚ್ ಬಗ್ಗೆ ಆರ್ ಸಿಬಿ ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ದಿನೇಶ್ ಕಾರ್ತಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್, ಆರ್‌ಸಿಬಿ ತಮ್ಮ ತವರಿನ ಪಂದ್ಯಗಳಿಗೆ ಉತ್ತಮ ಪಿಚ್‌ಗಳನ್ನು ಕೇಳಿತ್ತು ಆದರೆ ಇಲ್ಲಿ ಬೇರೆ ರೀತಿಯ ಪಿಚ್ ನೀಡಲಾಗಿದೆ ಎಂದರು. ಚಿನ್ನಸ್ವಾಮಿ ಮೈದಾನದಲ್ಲಿ ಒದಗಿಸಲಾದ ಪಿಚ್ ಬ್ಯಾಟಿಂಗ್ ಮಾಡಲು ಕಷ್ಟಕರವಾಗಿತ್ತು ಎಂದಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ಗಳು ಬರುತ್ತವೆ, ಅದು ಪ್ರಸಾರಕರಿಗೆ ಉತ್ತಮವಾಗಿರುತ್ತದೆ, ಅಭಿಮಾನಿಗಳಿಗೆ ಇಷ್ಟವಾಗುತ್ತದೆ, ಅವರೆಲ್ಲರೂ ಬೌಂಡರಿಗಳನ್ನು ನೋಡಲು ಇಷ್ಟಪಡುತ್ತಾರೆ. ಮೊದಲ ಎರಡು ಪಂದ್ಯಗಳಲ್ಲಿ, ನಾವು ಉತ್ತಮ ಪಿಚ್‌ಗಳನ್ನು ಕೇಳಿದ್ದೇವೆ. ಆದರೆ ಬ್ಯಾಟಿಂಗ್ ಮಾಡಲು ಸವಾಲಿನ ಪಿಚ್ ನೀಡಲಾಗಿದೆ ಎಂದು ಕಾರ್ತಿಕ್ ಹೇಳಿದ್ದಾರೆ.
ಕೆಎಲ್ ರಾಹುಲ್ ಅವರ ಅಜೇಯ 93 ರನ್‌ಗಳ ಬ್ಯಾಟಿಂಗ್‌ನಿಂದಾಗಿ ಆರ್‌ಸಿಬಿ ಡಿಸಿ ವಿರುದ್ಧ 6 ವಿಕೆಟ್‌ಗಳ ಸೋಲು ಕಂಡಿದೆ. ಇದಕ್ಕೂ ಮೊದಲು ಗುಜರಾತ್ ಟೈಟಾನ್ಸ್ ವಿರುದ್ಧ ಸೋತರು. ತಂಡವು ಕ್ಯುರೇಟರ್‌ನೊಂದಿಗೆ ಮಾತನಾಡಲಿದೆ ಎಂದು ಕಾರ್ತಿಕ್ ಹೇಳಿದರು. ಆರ್‌ಸಿಬಿ ಕ್ಯುರೇಟರ್ ಮುಂದಿನ ಪಂದ್ಯಕ್ಕೆ ಉತ್ತಮ ಪಿಚ್ ನೀಡುವ ವಿಶ್ವಾಸವಿದೆ ಎಂದರು.
ನಾವು ಕ್ಯುರೇಟರ್ ಜೊತೆ ಮಾತುಕತೆ ನಡೆಸುತ್ತೇವೆ. ಅವರು ತಮ್ಮ ಕೆಲಸವನ್ನು ಮಾಡುತ್ತಾರೆಂದು ನಾವು ನಂಬುತ್ತೇವೆ ಮತ್ತು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ದಿನೇಶ್ ಕಾರ್ತಿಕ್ ಹೇಳಿದರು.
ಪಿಚ್ ಬಗ್ಗೆ ಸಿಎಸ್‌ಕೆ, ಕೆಕೆಆರ್ ಅಸಮಾಧಾನ
2025ರ ಐಪಿಎಲ್ ಆವೃತ್ತಿಯಲ್ಲಿ ಪಿಚ್ ಬಗ್ಗೆ ಹಲವು ತಂಡಗಳು ಅಸಮಾಧಾನ ವ್ಯಕ್ತಪಡಿಸಿವೆ. ಕೆಕೆಆರ್ ನಾಯಕ ರಹಾನೆ ಈಡನ್ ಗಾರ್ಡನ್ಸ್‌ನಲ್ಲಿ ಸ್ಪಿನ್ ಸ್ನೇಹಿ ಪಿಚ್ ಕೇಳಿದ್ದರು ನೀಡಿಲ್ಲ ಎಂದು ದೂರಿದ್ದರು. ಕ್ಯುರೇಟರ್ ಸುಜನ್ ಮುಖರ್ಜಿ ಅವರೊಂದಿಗೆ ಪದೇ ಪದೇ ವಾಗ್ವಾದ ಮಾಡಿದ ಬಳಿಕ ನಾನು ಏನಾದರೂ ಹೇಳಿದರೆ ವಿವಾದವಾಗುತ್ತದೆ ಎಂದು ಹೇಳಿ ಸುಮ್ಮನಾದರು.
ಎಲ್‌ಎಸ್‌ಜಿ ಮೆಂಟರ್ ಜಹೀರ್ ಖಾನ್ ಏಕಾನಾದಲ್ಲಿ ತಂಡದ ಮೊದಲ ತವರಿನ ಪಂದ್ಯಕ್ಕೆ ಒದಗಿಸಲಾದ ಪಿಚ್ ಅನ್ನು ಟೀಕಿಸಿದ್ದರು. ಪಿಬಿಕೆಎಸ್ ವಿರುದ್ಧದ ಸೋಲಿನ ನಂತರ, ಪಂಜಾಬ್ ಕ್ಯುರೇಟರ್ ಎಲ್‌ಎಸ್‌ಜಿಯ ತವರಿನ ಪಂದ್ಯಕ್ಕೆ ಮೇಲ್ಮೈಯನ್ನು ಸಿದ್ಧಪಡಿಸಿದಂತೆ ಭಾಸವಾಗುತ್ತಿದೆ ಎಂದಿದ್ದರು.
ಸಿಎಸ್‌ಕೆ ತರಬೇತುದಾರ ಸ್ಟೀಫನ್ ಫ್ಲೆಮಿಂಗ್ ಕೂಡ ತವರಿನ ಪರಿಸ್ಥಿತಿಯ ಲಾಭದ ಬಗ್ಗೆ ಮಾತನಾಡುತ್ತಾ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ತಂಡವು ಯಾವುದೇ ಹೋಮ್ ಅಡ್ವಾಂಟೇಜ್ ಸಿಕ್ಕಿಲ್ಲ ಎಂದು ಅವರು ಹೇಳಿದ್ದರು. ಆರ್‌ಸಿಬಿ ವಿರುದ್ಧ ಪಂದ್ಯವನ್ನು ಸೋತ ಬಳಿಕ ಈ ಹೇಳಿಕೆ ನೀಡಿದ್ದರು.












Click it and Unblock the Notifications