ಭಾರತೀಯ ಕ್ರಿಕೆಟ್‌ನ ಈ ತಂಡದಿಂದ ಆರ್‌ಸಿಬಿ ಸ್ಟಾರ್ ಭುವನೇಶ್ವರ್ ಕುಮಾರ್ ಔಟ್.. ಕೃನಾಲ್ ಪಾಂಡ್ಯಗೆ ನಾಯಕತ್ವ ಪಟ್ಟ
Krunal Pandya: ಕ್ರಿಕೆಟ್‌ನ ಅತ್ಯಂತ ವೇಗದ ಹಾಗೂ ಮನರಂಜನಾತ್ಮಕ ಮಾದರಿಯ ಪಂದ್ಯಾವಳಿಯಾದ 'ಹಾಂಗ್ ಕಾಂಗ್ ಸಿಕ್ಸಸ್' ಅಕ್ಟೋಬರ್ 30ರಿಂದ ನವೆಂಬರ್ 1ರ ವರೆಗೆ ನಡೆಯಲಿದೆ. ಈ ಟೂರ್ನಿಗಾಗಿ ಐಪಿಎಲ್‌ನ ಸ್ಟಾರ್ ಆಟಗಾರರನ್ನೊಳಗೊಂಡ ಭಾರತ ತಂಡವನ್ನು ಘೋಷಿಸಲಾಗಿದ್ದು, ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ ಇದೀಗ ಅವರು ಹೊರಬಿದ್ದಿದ್ದು, ಕೃನಾಲ್ ಪಾಂಡ್ಯಗೆ ಆ ಜವಾಬ್ದಾರಿ ವಹಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಮುಂಬರುವ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಮೆಂಟ್‌ಗೆ ಭಾರತೀಯ ತಂಡದಲ್ಲಾದ ಪ್ರಮುಖ ಬದಲಾವಣೆಯಲ್ಲಿ, ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಬದಲಿಗೆ ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಅವರಿಗೆ ಭಾರತೀಯ ತಂಡದ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲಾಗಿದೆ. ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತೀಯ ರಾಷ್ಟ್ರೀಯ ತಂಡಕ್ಕೆ ಭುವನೇಶ್ವರ್ ಕುಮಾರ್ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರು ಈ ಸರಣಿಯಿಂದ ಹೊರಗುಳಿದಿದ್ದಾರೆ.

ರಾಷ್ಟ್ರೀಯ ತಂಡಕ್ಕೆ ಭುವನೇಶ್ವರ್ ಕುಮಾರ್ ಭರ್ಜರಿ ಕಮ್‌ಬ್ಯಾಕ್
ಸುಮಾರು ನಾಲ್ಕು ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಭುವನೇಶ್ವರ್ ಕುಮಾರ್ ಭಾರತದ ಅಂತಾರಾಷ್ಟ್ರೀಯ ತಂಡಕ್ಕೆ ಮರಳಿರುವುದು ಅವರ ಅಭಿಮಾನಿಗಳಿಗೆ ತೀವ್ರ ಸಂತಸ ತಂದಿದೆ. ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಪ್ರವಾಸಕ್ಕೆ ಆಯ್ಕೆಯಾಗಿದ್ದರಿಂದ, ಅಕ್ಟೋಬರ್ 30ರಿಂದ ನವೆಂಬರ್ 1ರ ವರೆಗೆ ನಡೆಯಲಿರುವ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಅವರು ಭಾಗವಹಿಸುತ್ತಿಲ್ಲ. ಭುವನೇಶ್ವರ್ ಸ್ಥಾನವನ್ನು ಗುಜರಾತ್ ಟೈಟನ್ಸ್ ತಂಡದ ವೇಗಿ ಕುಲ್ವಂತ್ ಖೇಜ್ರೋಲಿಯಾ ಭರ್ತಿ ಮಾಡಲಿದ್ದಾರೆ.
ಕೃನಾಲ್ ಪಾಂಡ್ಯ ಹೆಗಲಿಗೆ ನಾಯಕತ್ವದ ಜವಾಬ್ದಾರಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಈಗ 7 ಸದಸ್ಯರ ಭಾರತೀಯ ಪಡೆಯನ್ನು ಮುನ್ನಡೆಸಲಿದ್ದಾರೆ. ಈ ಬಾರಿಯ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಮೆಂಟ್‌ನಲ್ಲಿ ಐಪಿಎಲ್‌ನ ಅನುಭವಿ ಆಟಗಾರರು, ಆಲ್ರೌಂಡರ್‌ಗಳು ಹಾಗೂ ಸ್ಫೋಟಕ ಬ್ಯಾಟರ್‌ಗಳ ಮಿಶ್ರಣವನ್ನು ಕಾಣಬಹುದಾಗಿದೆ.
ತಂಡದಲ್ಲಿ ಯಾರೆಲ್ಲಾ ಇದ್ದಾರೆ?
* ಕೃನಾಲ್ ಪಾಂಡ್ಯ (ನಾಯಕ) - ರಾಯಲ್ ಚಾಲೆಂಜರ್ಸ್ ಬೆಂಗಳೂರು
* ಶಶಾಂಕ್ ಸಿಂಗ್ - ಪಂಜಾಬ್ ಕಿಂಗ್ಸ್
* ರಾಹುಲ್ ತೆವಾಟಿಯಾ - ಗುಜರಾತ್ ಟೈಟನ್ಸ್
* ನಿತೀಶ್ ರಾಣಾ - ಡೆಲ್ಲಿ ಕ್ಯಾಪಿಟಲ್ಸ್
* ರಾಹುಲ್ ತ್ರಿಪಾಠಿ - ಕೋಲ್ಕತಾ ನೈಟ್ ರೈಡರ್ಸ್
* ಟಿ. ನಟರಾಜನ್ - ಸನ್ ರೈಸರ್ಸ್ ಹೈದರಾಬಾದ್
* ಕುಲ್ವಂತ್ ಖೇಜ್ರೋಲಿಯಾ - ಗುಜರಾತ್ ಟೈಟನ್ಸ್
ಭುವನೇಶ್ವರ್ ಕುಮಾರ್ ಅವರ ದಿಢೀರ್ ನಿರ್ಗಮನದ ಕುರಿತು ಪ್ರತಿಕ್ರಿಯಿಸಿರುವ 'ಕ್ರಿಕೆಟ್ ಹಾಂಗ್ ಕಾಂಗ್'ನ ವಾಣಿಜ್ಯ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಅನುರಾಗ್ ಭಟ್ನಾಗರ್ ಅವರು, 'ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಭುವನೇಶ್ವರ್ ಕುಮಾರ್ ಅವರ ಸೇವೆಯನ್ನು ನಾವು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳುತ್ತೇವೆ. ಆದರೆ, ನಾಲ್ಕು ವರ್ಷಗಳ ನಂತರ ಅವರು ಮತ್ತೆ ಭಾರತೀಯ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವುದು ಅತ್ಯಂತ ಸಂತಸದ ವಿಷಯ. ಅವರ ಈ ಮೈಲಿಗಲ್ಲಿಗೆ ನಮ್ಮ ಶುಭ ಹಾರೈಕೆಗಳು,' ಎಂದು ತಿಳಿಸಿದ್ದಾರೆ.
ವೇಗದ ಹಾಗೂ ಅತ್ಯಂತ ರೋಚಕ ಆರು ಓವರ್‌ಗಳ ಶೈಲಿಯ ಈ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಕೃನಾಲ್ ಪಾಂಡ್ಯ ಅವರ ಚತುರ ನಾಯಕತ್ವ ಮತ್ತು ಐಪಿಎಲ್ ಆಟಗಾರರ ಉತ್ತಮ ಪ್ರದರ್ಶನದ ಮೇಲೆ ಭಾರತದ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಟೂರ್ನಿಯಲ್ಲಿ ಅವರ ಪ್ರದರ್ಶನ ಹೇಗಿರಲಿದೆ ಎಂದು ಕಾದುನೋಡಬೇಕಿದೆ.


Click it and Unblock the Notifications
