RCB: ಆರ್‌ಸಿಬಿ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ ಕನ್ನಡಿಗ; ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಖಚಿತ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ 2025ರ ಆವೃತ್ತಿಯ ಮೊದಲ ಪಂದ್ಯಕ್ಕೆ ಸಜ್ಜಾಗುತ್ತಿದೆ. ಮಾರ್ಚ್ 22ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಅಂಗಳದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಆರ್ ಸಿಬಿ ಸೆಣೆಸಲಿದ್ದು, ಈಗಾಗಲೇ ತಂಡದ ಆಟಗಾರರು ಕೋಲ್ಕತಾಗೆ ಪ್ರಯಾಣಿಸಿದ್ದಾರೆ.
ಕೋಲ್ಕತಾಗೆ ಪ್ರಯಾಣಿಸುವ ಮೊದಲು ಬೆಂಗಳೂರಿನಲ್ಲಿ ಆರ್ ಸಿಬಿ ಆಟಗಾರರು ಸಾಕಷ್ಟು ಅಭ್ಯಾಸ ನಡೆಸಿದ್ದಾರೆ. ಅಭ್ಯಾಸದ ಭಾಗವಾಗಿ ಪಂದ್ಯವನ್ನು ಕೂಡ ಆಡಿಸಲಾಗಿದೆ. ಆಟಗಾರರನ್ನು ಎರಡು ತಂಡಗಳನ್ನಾಗಿ ಮಾಡಿ ಪಂದ್ಯ ಆಡಿಸಲಾಗಿದ್ದು ಒಂದು ತಂಡಕ್ಕೆ ರಜತ್ ಪಾಟಿದಾರ್ ನಾಯಕರಾಗಿದ್ದು ಮತ್ತೊಂದು ತಂಡಕ್ಕೆ ಜಿತೇಶ್ ಶರ್ಮಾ ನಾಯಕತ್ವ ವಹಿಸಿಕೊಂಡಿದ್ದರು.

ಕನ್ನಡಿಗನ ಸ್ಫೋಟಕ ಬ್ಯಾಟಿಂಗ್
ಮೊದಲು ಬ್ಯಾಟಿಂಗ್ ಮಾಡಿದ ರಜತ್ ಪಾಟಿದಾರ್ ನಾಯಕತ್ವದ ತಂಡದಲ್ಲಿ ದೇವದತ್ ಪಡಿಕ್ಕಲ್ ಆಡಿದ್ದು, ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದರು. ಟೀಂ ರಜತ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 215 ರನ್ ಕಲೆಹಾಕಿತು. ಕನ್ನಡಿಗ ದೇವದತ್ ಪಡಿಕ್ಕಲ್ 48 ಎಸೆತಗಳಲ್ಲಿ 82 ರನ್ ಗಳಿಸಿ ಭರವಸೆ ಮೂಡಿಸಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವುದು ನನಗೆ ಖುಷಿಯ ಸಂಗತಿ ಎಂದು ಬ್ಯಾಟಿಂಗ್ ಬಳಿಕ ಹೇಳಿದ್ದಾರೆ.
ಬಳಿಕ ಬ್ಯಾಟಿಂಗ್ ಮಾಡಿದ ಟೀಂ ಜಿತೇಶ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿತು. ರೊಮಾರಿಯೋ ಶೆಫರ್ಡ್ 21 ಎಸೆತಗಳಲ್ಲಿ 36 ರನ್ ಗಳಿಸಿ ಗಮನ ಸೆಳೆದರು. ಲುಂಗಿ ಎಂಗಿಡಿ 3 ವಿಕೆಟ್ ಪಡೆದು ಮಿಂಚಿದರು.
ದಿನೇಶ್ ಕಾರ್ತಿಕ್ ಮೆಚ್ಚುಗೆ
ಅಭ್ಯಾಸ ಪಂದ್ಯದ ಬಳಿಕ ಮಾತನಾಡಿದ ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್, ಎಲ್ಲಾ ಆಟಗಾರರು ಉತ್ತಮವಾಗಿ ಆಡಿದರು. ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
2024ರ ಐಪಿಎಲ್‌ನಲ್ಲಿ ಸತತವಾಗಿ ಆರು ಪಂದ್ಯಗಳನ್ನು ಗೆದ್ದು ಪ್ಲೇಆಫ್ ತಲುಪಿದ್ದ ಆರ್ ಸಿಬಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ತಂಡದ ಬೌಲಿಂಗ್ ದುರ್ಬಲವಾಗಿದ್ದು ಸೋಲಿಗೆ ಕಾರಣವಾಗಿತ್ತು. ಆದರೆ ಈ ಬಾರಿ ತಂಡದ ಬೌಲಿಂಗ್ ವಿಭಾಗವನ್ನು ಬಲಪಡಿಸಲಾಗಿದೆ. ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ನುವಾನ್ ತುಷಾರ, ಯಶ್ ದಯಾಳ್, ರಸಿಕ್ ದಾರ್, ಲುಂಗಿ ಎನ್‌ಗಿಡಿ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ.
ಐಪಿಎಲ್ 2025ರ ಆವೃತ್ತಿಗೆ ಆರ್ ಸಿಬಿ ತಂಡ
ಫಿಲ್ ಸಾಲ್ಟ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಟಿದಾರ್ (ನಾಯಕ), ಲಿಯಾಮ್ ಲಿವಿಂಗ್ ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಜೇಕಬ್ ಬೆಥೆಲ್, ಮನೋಜ್ ಭಾಂಡಗೆ, ರೊಮಾರಿಯೋ ಶೆಫರ್ಡ್, ಸುಯಾಶ್ ಶರ್ಮಾ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ನುವಾನ್ ತುಷಾರ, ಯಶ್ ದಯಾಳ್, ರಸಿಕ್ ದಾರ್, ಲುಂಗಿ ಎನ್‌ಗಿಡಿ, ಸ್ವಸ್ತಿಕ್ ಚಿಕಾರ, ಸ್ವಪ್ನಿಲ್ ಸಿಂಗ್, ಅಭಿನಂದನ್ ಸಿಂಗ್, ಮೋಹಿತ್ ರಾಥಿ.












Click it and Unblock the Notifications