RCB New Coach : ಇವರೇ ನೋಡಿ ಆರ್‌ಸಿಬಿ ಹೊಸ ಕೋಚ್!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಹೊಸ ಯುಗ ಆರಂಭವಾಗಲಿದೆ. ಆರ್‌ಸಿಬಿ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಮೈಕ್ ಹೆಸ್ಸನ್ ಆಗಸ್ಟ್ 31ರಿಂದ ತಮ್ಮ ಸ್ಥಾನವನ್ನು ತೊರೆಯಲಿದ್ದಾರೆ. ಆಂಡಿ ಫ್ಲವರ್ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಸದ್ಯ ತಂಡದ ಮುಖ್ಯ ಕೋಚ್ ಆಗಿರುವ ಸಂಜಯ್ ಬಂಗಾರ್ ಮತ್ತು ಹೆಸ್ಸನ್‌ನ ಸಹಾಯಕ ಸಿಬ್ಬಂದಿಯ ಉಳಿದ ಸದಸ್ಯರನ್ನು ಕೂಡ ಕೈಬಿಡಲಾಗಿದೆ. ಇವರ ಬದಲಾಗಿ ಹೊಸ ಸಿಬ್ಬಂದಿ ನೇಮಕವಾಗಲಿದ್ದಾರೆ.

ಆಂಡಿ ಫ್ಲವರ್ ಅವರನ್ನು ನೇಮಿಸಿಕೊಳ್ಳಲು ರಾಜಸ್ಥಾನ್ ರಾಯಲ್ಸ್ ಸೇರಿದಂತೆ ಹಲವಾರು ಫ್ರಾಂಚೈಸಿಗಳು ಮಾತುಕತೆ ನಡೆಸಿದ್ದವು, ಆದರೆ ಆರ್ ಸಿಬಿ ಅವರನ್ನು ನೇಮಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆಂಡಿ ಫ್ಲವರ್ ಎನ್ನುವ ಮಾಂತ್ರಿಕ
ಜಿಂಬಾಬ್ವೆ ತಂಡದ ಮಾಜಿ ಕ್ರಿಕೆಟಿಗ ಆಂಡಿ ಫ್ಲವರ್ ಕೋಚ್ ಆಗಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕಾಗಿ ಕೆಲಸ ಮಾಡಿದ್ದಾರೆ. ಎರಡು ವರ್ಷಗಳ ಒಪ್ಪಂದ ಮುಕ್ತಾಯವಾದ ಬಳಿಕ ಅವರು ಆರ್ ಸಿಬಿ ತಂಡದ ಕೋಚ್ ಆಗಿ ನೇಮಕವಾಗಿದ್ದಾರೆ.
ಆಂಡಿ ಫ್ಲವರ್ ಕೋಚ್ ಆಗಿ ಜಾಗತಿಕ ಮಟ್ಟದಲ್ಲಿ ಭಾರಿ ಹೆಸರು ಮಾಡಿದ್ದಾರೆ. 2020 ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಂಡಿ ಫ್ಲವರ್ ಕೋಚ್ ಆಗಿದ್ದ ಟ್ರಿನ್‌ಬಾಗೋ ನೈಟ್ ರೈಡರ್ಸ್ ಚಾಂಪಿಯನ್ ಆಗಿತ್ತು, ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ 2021ರ ಚಾಂಪಿಯನ್ ಆದ ಮುಲ್ತಾನ್ ಸುಲ್ತಾನ್ ತಂಡಕ್ಕೆ ಕೂಡ ಆಂಡಿ ಫ್ಲವರ್ ಕೋಚ್ ಆಗಿ ಕೆಲಸ ಮಾಡಿದ್ದಾರೆ.
2023ರಲ್ಲಿ ದುಬೈನಲ್ಲಿ ನಡೆದ ಇಂಟರ್ನ್ಯಾಷನಲ್ ಲೀಗ್ ಟಿ20 ಪಂದ್ಯಾವಳಿಯಲ್ಲಿ ಚಾಂಪಿಯನ್ ಆದ ಗಲ್ಫ್ ಜೈಂಟ್ಸ್ ತಂಡಕ್ಕೆ ಕೋಚ್ ಆಗಿದ್ದವರು ಇದೇ ಆಂಡಿ ಫ್ಲವರ್. ಇದಕ್ಕೂ ಮುನ್ನ ಅವರು ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ ಗೆದ್ದಾಗ ಕೋಚ್ ಆಗಿ ಕೆಲಸ ಮಾಡಿದ್ದರು. ಇತ್ತೀಚೆಗೆ ಮುಕ್ತಾಯವಾದ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಸಲಹೆಗಳನ್ನು ನೀಡಿದ್ದಾರೆ.
ಎಬಿ ಡಿವಿಲಿಯರ್ಸ್ ಕೂಡ ತಂಡಕ್ಕೆ ಸೇರ್ಪಡೆ
ಆರ್ ಸಿಬಿ ತಂಡದ ಮಾಜಿ ಆಟಗಾರ ಮಿಸ್ಟರ್ 360 ಎಂದೇ ಜನಪ್ರಿಯವಾಗಿರುವ ಎಬಿ ಡಿವಿಲಿಯರ್ಸ್ ಕೂಡ ತಂಡದ ಜೊತೆ ಕೆಲಸ ಮಾಡುವ ಸಾಧ್ಯತೆ ಇದೆ. ಹೊಸ ಕೋಚ್ ಆಂಡಿ ಫ್ಲವರ್ ಜೊತೆ ತಂಡದ ಮಾರ್ಗದರ್ಶಕರಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಕಳೆದ ವರ್ಷವೇ ಅವರು ತಂಡದ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಾರೆ ಎಂದು ಹೇಳಲಾಗಿತ್ತು ಆದರೆ, ಫ್ರಾಂಚೈಸಿ ತರಬೇತಿ ಸಿಬ್ಬಂದಿಯನ್ನು ಬದಲಾವಣೆ ಮಾಡದೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದ್ದರು. ಕ್ರಿಸ್ ಗೇಲ್ ಮತ್ತು ಎಬಿಡಿ ಅವರಿಗೆ ಹಾಲ್ ಆಫ್ ಫೇಮ್ ನೀಡಿ ಗೌರವಿಸಲಾಗಿದೆ.
ಬಲಿಷ್ಠ ತಂಡ, ದೊಡ್ಡ ಆಟಗಾರರು ಇದ್ದಾಗ್ಯೂ ಆರ್ ಸಿಬಿ ಈವರೆಗೆ ಒಂದೂ ಕಪ್ ಗೆಲ್ಲದೇ ಇರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಹಲವು ಲೀಗ್‌ಗಳಲ್ಲಿ ತಂಡವನ್ನು ಚಾಂಪಿಯನ್ ಮಾಡಿರುವ ಕೋಚ್ ಸಿಕ್ಕಿದ್ದು ಮುಂದಿನ ಐಪಿಎಲ್‌ನಲ್ಲಿ ತಂಡದ ಅದೃಷ್ಟ ಬದಲಾಗುತ್ತಾ ಕಾದು ನೋಡಬೇಕಿದೆ.












Click it and Unblock the Notifications