RCB vs MI IPL 2023: ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ನಂತರ ವಿರಾಟ್ ಕೊಹ್ಲಿ ಹೇಳಿದ್ದೇನು?
ಭಾನುವಾರ, ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆದ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮೂರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಗೆಲುವಿನಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಮುಂಬೈ ಇಂಡಿಯನ್ಸ್ ನೀಡಿದ್ದ 172 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಆರ್‌ಸಿಬಿ, ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ಫಾಡ್ ಡು ಪ್ಲೆಸಿಸ್ ಮೊದಲ ವಿಕೆಟ್‌ಗೆ 89 ಎಸೆತಗಳಲ್ಲಿ 148 ರನ್‌ಗಳ ಉತ್ತಮ ಜೊತೆಯಾಟ ನೀಡಿದರು. ಅಂತಿಮವಾಗಿ ಆರ್‌ಸಿಬಿ ತಂಡ 16.2 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಕೇವಲ 49 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ ಅಜೇಯ 82 ರನ್ ಬಾರಿಸಿದರು. ಮತ್ತೊಬ್ಬ ಆರಂಭಿಕ ಫಾಫ್ ಡು ಪ್ಲೆಸಿಸ್ 43 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ 73 ರನ್ ಗಳಿಸಿದರು.
ಭರ್ಜರಿ ಗೆಲುವಿನ ನಂತರ ಮಾತನಾಡಿದ ವಿರಾಟ್ ಕೊಹ್ಲಿ, ಐಪಿಎಲ್ ಇತಿಹಾಸದಲ್ಲಿ ಆರ್‌ಸಿಬಿ ಮೂರನೇ ಅತ್ಯಂತ ಯಶಸ್ವಿ ತಂಡವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಮುಂಬೈ ಇಂಡಿಯನ್ಸ್ ತಂಡ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕು ಬಾರಿ ಪ್ರಶಸ್ತಿ ಎತ್ತಿ ಹಿಡಿದಿದೆ. ಪ್ರತಿ ಬಾರಿ ಬಲಿಷ್ಠ ತಂಡವನ್ನು ಹೊಂದಿದ್ದರೂ ಆರ್‌ಸಿಬಿ ತಂಡ ಇನ್ನೂ ತನ್ನ ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಹೋರಾಡುತ್ತಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಈವರೆಗೆ 11 ಬಾರಿ ಪ್ಲೇಆಫ್‌ಗೆ ಅರ್ಹತೆ ಪಡೆದಿದ್ದರೆ, ಮುಂಬೈ ಇಂಡಿಯನ್ಸ್ 9 ಬಾರಿ ಪ್ಲೇಆಫ್ ತಲುಪಿದೆ. ಇನ್ನು ಆರ್‌ಸಿಬಿ ತಂಡ ಈವರೆಗೆ ಪ್ಲೇಆಫ್‌ನಲ್ಲಿ 8 ಬಾರಿ ಕಾಣಿಸಿಕೊಂಡಿದೆ. ಇದು ಪ್ಲೇಆಪ್‌ಗೆ ಅತಿ ಹೆಚ್ಚು ಬಾರಿ ಅರ್ಹತೆ ಪಡೆದ ಮೂರನೇ ತಂಡವಾಗಿದೆ ಎಂದು ವಿರಾಟ್ ಕೊಹ್ಲಿ ಗಮನಸೆಳೆದರು.

"ನಾನು ಇದನ್ನು ಸ್ವಲ್ಪ ಪ್ರಸ್ತಾಪಿಸಲು ಬಯಸುತ್ತೇನೆ, 5 ಪ್ರಶಸ್ತಿಗಳನ್ನು ಗೆದ್ದಿರುವ ಮುಂಬೈ ಇಂಡಿಯನ್ಸ್ ಮತ್ತು 4 ಪ್ರಶಸ್ತಿ ಗೆದ್ದಿರುವ ಸಿಎಸ್‌ಕೆ ನಂತರ, ನಾವು (ಆರ್‌ಸಿಬಿ) ಪ್ಲೇಆಫ್‌ಗೆ ಹೆಚ್ಚು ಬಾರಿ ಅರ್ಹತೆ ಪಡೆದ ಮೂರನೇ ತಂಡವಾಗಿದೆ. ಅದು 8 ಬಾರಿ," ಎಂದು ಪಂದ್ಯದ ನಂತರ ವಿರಾಟ್ ಕೊಹ್ಲಿ ಹೇಳಿದರು.
ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ತಂಡದ ಎಂಟು ವಿಕೆಟ್‌ಗಳ ಬೃಹತ್ ಗೆಲುವಿನ ಬಗ್ಗೆ ಕೇಳಿದಾಗ, "ಯಾವುದೇ ತಂಡದ ವಿರುದ್ಧ ಆಡುವಾಗ ನಾವು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಾವು ಅಂದುಕೊಂಡತೆ ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಯಿತು," ಎಂದು ವಿರಾಟ್ ಕೊಹ್ಲಿ ತಿಳಿಸಿದರು.
ಇದೇ ವೇಳೆ ಆರ್‌ಸಿಬಿ ತಂಡದ ಸ್ಟಾರ್ ಬ್ಯಾಟ್ಸ್‌ಮನ್ವ ವಿರಾಟ್ ಕೊಹ್ಲಿ 2023ರ ಐಪಿಎಲ್‌ನಲ್ಲಿ ತಮ್ಮ ತಂಡದ ಮೊದಲ ಪಂದ್ಯದಲ್ಲಿ ಬೃಹತ್ ಮೈಲಿಗಲ್ಲು ಸ್ಥಾಪಿಸಿದರು. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 800 ಬೌಂಡರಿಗಳನ್ನು ಬಾರಿಸಿದ ಸಾಧನೆ ಮಾಡಿದರು.

ಕಳೆದ ಋತುವಿನವರೆಗೆ 796 ಬೌಂಡರಿಗಳನ್ನು ಹೊಂದಿದ್ದ ವಿರಾಟ್ ಕೊಹ್ಲಿ, ಆರು ಬೌಂಡರಿ ಮತ್ತು ಐದು ಸಿಕ್ಸರ್ ಸಿಡಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ (800) ಅವರನ್ನು ಹಿಂದಿಕ್ಕಿ ಬೌಂಡರಿಗಳ ಲೆಕ್ಕಾಚಾರದಲ್ಲಿ (807) ಎರಡನೇ ಸ್ಥಾನಕ್ಕೇರಿದರು. ಮೊದಲ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ (843) ಇದ್ದಾರೆ.
ಅಷ್ಟು ಮಾತ್ರವಲ್ಲದೆ, ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 50 ಬಾರಿ 50ಕ್ಕೂ ಹೆಚ್ಚು ರನ್‌ಗಳನ್ನು ಬಾರಿಸಿದ ಸಾಧನೆಗೈದರು. ಡೇವಿಡ್ ವಾರ್ನರ್ ನಂತರ ಈ ಸಾಧನೆ ಮಾಡಿದ ಎರಡನೇ ಆಟಗಾರರಾದರು. ಇನ್ನು 49 ಬಾರಿ 50ಕ್ಕೂ ಹೆಚ್ಚು ಸ್ಕೋರ್ ಮಾಡಿರುವ ಶಿಖರ್ ಧವನ್ ಮೂರನೇ ಸ್ಥಾನದಲ್ಲಿದ್ದಾರೆ.












Click it and Unblock the Notifications