ಸ್ಟೇಡಿಯಂ ಸಾಲುತ್ತಿಲ್ಲ, 1 ಲಕ್ಷ ಆಸನಗಳ ಸಾಮರ್ಥ್ಯದ ಮೈದಾನ ಬೇಕು: ಡಿಸಿಎಂಗೆ ಆರ್‌ಸಿಬಿ ಅಭಿಮಾನಿಗಳ ವಿಶೇಷ ಬೇಡಿಕೆ
RCB Fans Special Damands: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಆರ್‌ಸಿಬಿ-ಸಿಎಸ್‌ಕೆ ನಡುವಿನ ಹೈವೋಲ್ಟೇಜ್ ಐಪಿಎಲ್ ಪಂದ್ಯ ವೀಕ್ಷಣೆ ಮಾಡಲು ಅಭಿಮಾನಿಗಳ ದಂಡೇ ನೆರೆದಿತ್ತು. ಈ ವೇಳೆ ಎರಡೂ ತಂಡಗಳ ಪರ ಘೋಷಣೆಗಳು ಕೇಳಿಬಂದಿದ್ದಲ್ಲದೆ, ವಿಶೇಷ ಬೇಡಿಕೆ ಕೂಡ ಕೇಳಿಬಂತು. ಇದೀಗ ಇದೇ ವಿಚಾರ ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಬೆಂಗಳೂರಿನ ಹೃದಯಭಾಗದಲ್ಲಿರುವ ಎಂ.ಚಿನ್ನಸ್ವಾಮಿ ಕ್ರೀಡಾಂಗಣದತ್ತ ಭಾನುವಾರ ಅಭಿಮಾನಿಗಳ ಸಾಗರವೇ ಹರಿದುಬಂದಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಜರ್ಸಿ ಧರಿಸಿ, ಧ್ವಜಗಳನ್ನು ಹಿಡಿದು ಅಭಿಮಾನಿಗಳು ಎಂಜಿ ರಸ್ತೆ ಮತ್ತು ಕಬ್ಬನ್ ರಸ್ತೆಯ ಮೂಲೆ ಮೂಲೆಯಲ್ಲೂ ಕಂಡುಬಂದರು. ಪಂದ್ಯದ ಮೊದಲ ಎಸೆತಕ್ಕೂ ಮುನ್ನವೇ "ಆರ್‌ಸಿಬಿ.. ಆರ್‌ಸಿಬಿ" ಮತ್ತು "ಸಿಎಸ್‌ಕೆ.. ಸಿಎಸ್‌ಕೆ" ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.

ಪಂದ್ಯ ವೀಕ್ಷಣೆಗೆ ರಾಣೇಬೆನ್ನೂರಿನಿಂದ ಆಗಮಿಸಿದ್ದ ಅಭಿಮಾನಿ
ಮೈದಾನಕ್ಕೆ ತೆರಳುವ ಮುನ್ನ ತಮ್ಮ ನೆಚ್ಚಿನ ತಂಡದ ಜರ್ಸಿಯನ್ನು ಕೊಂಡುಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಿದ್ದರಿಂದ ಜರ್ಸಿ ವ್ಯಾಪಾರಿಗಳು ಹೈರಾಣಾಗಿದ್ದರು. ಹಾವು-ಏಣಿ ಆಟದಂತಿರುವ ಈ ದಶಕಗಳ ಹಳೆಯ ಪೈಪೋಟಿಯನ್ನು ನೇರವಾಗಿ ವೀಕ್ಷಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಿಂದ ಬಂದಿದ್ದ ಮಂಜುನಾಥ್ ಗೌಡ ಎಂಬ ಅಭಿಮಾನಿ, ಕಷ್ಟಪಟ್ಟು ಪಡೆದ ಟಿಕೆಟ್ ಹಿಡಿದು ಸಂಭ್ರಮಿಸುತ್ತಾ ನಿಂತಿದ್ದರು.
ಈ ಬಗ್ಗೆ ಮಾತನಾಡಿದ ಮಂಜುನಾಥ ಗೌಡ "ಕೇವಲ ಈ ಪಂದ್ಯಕ್ಕಾಗಿ ನಾವು ಮುಂಜಾನೆಯೇ ಬೆಂಗಳೂರು ತಲುಪಿದೆವು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾದ ವೇಳೆ ದೂರದ ಲೆಕ್ಕವೇ ಇರುವುದಿಲ್ಲ. ಇಲ್ಲಿನ ಸಂಭ್ರಮವನ್ನು ಅನುಭವಿಸಲು ನಾವು ಮಧ್ಯಾಹ್ನ 2 ಗಂಟೆಯಿಂದಲೇ ಕಾಯುತ್ತಿದ್ದೇವೆ," ಎಂದು ಅವರು ಹೇಳಿದರು.
ಆರ್‌ಸಿಬಿ vs ಸಿಎಸ್‌ಕೆ ಅಭಿಮಾನಿಗಳು
ಮತ್ತೊಂದೆಡೆ ಈ ಪಂದ್ಯ ವೀಕ್ಷಣೆ ಮಾಡಲು ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದ ಕಾರ್ತಿಕ್ ರಾಜಾ ಎಂಬುವವರು ಮಾತನಾಡಿ, "ನಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ಸಿಎಸ್‌ಕೆ ಹಲವು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಿದೆ. ನಮಗೆ ಆತಂಕವಿಲ್ಲ, ನಾವು ಇಂದು ಗೆಲ್ಲಲು ಬಂದಿದ್ದೇವೆ," ಎಂದು ಹೇಳಿದರು. ಇನ್ನೂ ಅವರ ಪಕ್ಕದಲ್ಲೇ ನಿಂತಿದ್ದ ಅವರ ಆಪ್ತ ಗೆಳೆಯ ಹಾಗೂ ಸ್ಥಳೀಯ ನಿವಾಸಿ, ಆರ್‌ಸಿಬಿ ಅಭಿಮಾನಿ ರಾಹುಲ್ ಶೆಟ್ಟಿ ಪ್ರತಿಕ್ರಿಯಿಸಿ, "ನಾವಿಬ್ಬರೂ ಪ್ರಾಣ ಸ್ನೇಹಿತರು ನಿಜ, ಆದರೆ, ಆರ್‌ಸಿಬಿ-ಸಿಎಸ್‌ಕೆ ಪಂದ್ಯದ ವೇಳೆ ನಮ್ಮ ಸ್ನೇಹವೆಲ್ಲಾ ಸ್ಟೇಡಿಯಂ ಗೇಟಿನ ಹೊರಗೇ ಇರುತ್ತದೆ," ಎಂದು ನಗುತ್ತಾ ಹೇಳಿ ಗಮನ ಸೆಳೆದಿದ್ದಾರೆ. ಪಂದ್ಯ ಮುಗಿದರೂ ಈ ಹೇಳಿಕೆಗಳು ಮಾತ್ರ ಇದೀಗ ಸಖತ್ ವೈರಲ್ ಆಗಿವೆ.
ಸರ್ಕಾರಕ್ಕೆ ಅಭಿಮಾನಿಗಳಿಂದ ವಿಶೇಷ ಮನವಿ
ಸಾವಿರಾರು ಮಂದಿ ಮೈದಾನದ ಒಳಗೆ ಪ್ರವೇಶಿಸುತ್ತಿದ್ದಂತೆ, ಹೊರಗೆ ಉಳಿದವರ ನೋವು ರಸ್ತೆಗಳಲ್ಲಿ ಎದ್ದು ಕಾಣುತ್ತಿತ್ತು. ನಗರದ ಯುವ ಕ್ರಿಕೆಟ್ ಪ್ರೇಮಿಗಳ ಹತಾಶೆಯನ್ನು ಬಿಂಬಿಸುವ ಪೋಸ್ಟರ್‌ವೊಂದನ್ನು ಹಿಡಿದು ಅಭಿಮಾನಿಯೊಬ್ಬರು ಬ್ಯಾರಿಕೇಡ್ ಬಳಿ ನಿಂತಿದ್ದರು. ಅಧಿಕಾರಿಗಳನ್ನು ಉದ್ದೇಶಿಸಿ ಬರೆದಿದ್ದ ಆ ಪೋಸ್ಟರ್‌ನಲ್ಲಿ, "ಪೂಜ್ಯ ಉಪಮುಖ್ಯಮಂತ್ರಿಗಳೇ, ನನ್ನ ಸಹೋದರಿ ಮತ್ತು ಸ್ನೇಹಿತರಿಗೆ ಪಂದ್ಯದ ಟಿಕೆಟ್ ಸಿಗಲಿಲ್ಲ. ದಯವಿಟ್ಟು ನಿಮ್ಮ ಅವಧಿ ಮುಗಿಯುವ ಮೊದಲು ಆರ್‌ಸಿಬಿ ಅಭಿಮಾನಿಗಳಿಗಾಗಿ 1 ಲಕ್ಷ ಸಾಮರ್ಥ್ಯದ ಕ್ರೀಡಾಂಗಣವನ್ನು ನಿರ್ಮಿಸಿಕೊಡಿ," ಎನ್ನುವ ಸಾಲು ಕಂಡುಬಂದಿತು.
ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ ತಂಡಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದ 32,000 ಆಸನಗಳ ಸಾಮರ್ಥ್ಯವು ಸಮುದ್ರಕ್ಕೆ ಒಂದು ಹನಿಯಂತಿದೆ. ಮತ್ತೊಬ್ಬ ಅಭಿಮಾನಿ ಸಿದ್ದಾರ್ಥ್ ಎಂ.ಮಾತನಾಡಿ, "ಪ್ರತಿ ವರ್ಷವೂ ಇದೇ ಗೋಳು. ನಾವು ಹಣ ನೀಡಲು ಸಿದ್ಧರಿದ್ದೇವೆ, ಕಾಯಲು ಸಿದ್ಧರಿದ್ದೇವೆ. ಆದರೆ, ಬೆಂಗಳೂರಿನ ಜನತೆ ಈ ತಂಡದ ಮೇಲೆ ಇಟ್ಟಿರುವ ಪ್ರೀತಿಗೆ ಈ ಕ್ರೀಡಾಂಗಣ ತೀರಾ ಚಿಕ್ಕದಾಗಿದೆ," ಎಂದು ಬೇಸರ ವ್ಯಕ್ತಪಡಿಸಿದರು. ಹೀಗೆ ಪಂದ್ಯ ಮುಗಿದಿದ್ದರೂ ಸಹ ಆರ್‌ಸಿಬಿ ಅಭಿಮಾನಿಗಳ ಈ ವಿಶೇಷ ಬೇಡಿಕೆಯ ಕೂಗುಗಳು ಮಾತ್ರ ಇನ್ನೂ ಕೇಳಿಬರುತ್ತಿವೆ.












Click it and Unblock the Notifications