IPL 2024: RCB ಪ್ಲೇ ಆಫ್ ಆಸೆ ಜೀವಂತ: ಆಂಡಿ ಫ್ಲವರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಋತುವಿನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದು, ಎದುರಾಳಿಗಳ ಚಿಂತೆಯನ್ನು ವೃದ್ಧಿಸಿದೆ. ಇನ್ನು ಕಳೆದೆರಡು ಪಂದ್ಯದಲ್ಲಿ ಆರ್‌ಸಿಬಿ ತಂಡದ ಆಟವನ್ನು ನೋಡಿದ ಅಭಿಮಾನಿಗಳು ಪ್ಲೇ ಆಫ್ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ. ಇದಕ್ಕೆ ಆರ್‌ಸಿಬಿ ಕೋಚ್ ಸಹ ಧ್ವನಿಗೂಡಿಸಿದ್ದಾರೆ.
ಆರ್‌ಸಿಬಿ ತಂಡದ ಮುಖ್ಯ ತರಬೇತುದಾರ ಆಂಡಿ ಫ್ಲವರ್ ತಮ್ಮ ತಂಡವು ಐಪಿಎಲ್ 2024 ರ ಪ್ಲೇಆಫ್‌ಗೆ ಪ್ರವೇಶಿಸಬಹುದು ಎಂದು ನಂಬಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ಪ್ರದರ್ಶನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಉತ್ತಮ ಬೌಲಿಂಗ್ ದಾಳಿ ಇಲ್ಲದೇ ಇರುವುದು ಚಿಂತೆಯನ್ನು ಹೆಚ್ಚು ಮಾಡಿದೆ. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಇದೇ ತಂಡ ನೀಡಿರುವ ಪ್ರದರ್ಶನ ಎಲ್ಲರೂ ಹುಬ್ಬೇರುವಂತೆ ಮಾಡಿದೆ.

ಪ್ಲೇ ಆಫ್ ಆಸೆ ಜೀವಂತ
ಪ್ಲೇ ಆಫ್‌ಗಳ ಭರವಸೆ ಇನ್ನೂ ಇದೆ. ಮತ್ತು ಸದ್ಯದ ತಂಡದ ಪ್ರದರ್ಶನ ನೋಡಿದರೆ, ಹೋಗುವ ಆಸೆ ಹೆಚ್ಚಾಗಿದೆ. ಪರಿಸ್ಥಿತಿಗಳೂ ಸಹ ಇದಕ್ಕೆ ಪೂರಕವಾಗಿವೆ. ನಿಸ್ಸಂಶಯವಾಗಿ, ನಾವು ಪಾಯಿಂಟ್‌ಗಳ ಪಟ್ಟಿಯಲ್ಲಿ ಬಡ್ತಿ ಪಡೆಯಲು ಬಯಸುತ್ತೇವೆ. ಅದರ ಭರವಸೆ ಮತ್ತು ಅವಕಾಶ ಇನ್ನೂ ನಮ್ಮ ತಂಡಕ್ಕೆ ಇದೆ ಎಂದು ಕೋಚ್ ತಿಳಿಸಿದ್ದಾರೆ.
ತಂಡದ ಗೆಲುವಿಗೆ ತಮ್ಮ ನೂರಕ್ಕೆ ನೂರು ಪ್ರತಿಷತ ಕಾಣಿಕೆ ನೀಡಲು ಆಟಗಾರರು ಸಿದ್ಧರಾಗಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧ ಸತತ ಎರಡು ಗೆಲುವು ದಾಖಲಿಸಿದ ನಂತರ ಆರ್‌ಸಿಬಿ ಪ್ಲೇ ಆಫ್‌ನ ಹಾದಿ ಚಿಗುರೊಡಿದಿದೆ ಎಂದು ಫ್ಲಾವರ್ ತಿಳಿಸಿದ್ದಾರೆ.
ನಮ್ಮ ಬ್ಯಾಟ್ಸ್‌ಮನ್‌ಗಳು ಖಂಡಿತವಾಗಿಯೂ ಮಿಡ್ಲ್ ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡಲು ಆನಂದಿಸುತ್ತಾರೆ. ನಮ್ಮ ವೇಗದ ಬೌಲಿಂಗ್ ಘಟಕವು ತುಂಬಾ ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡುವುದನ್ನು ನಾನು ನೋಡಿದ್ದೇನೆ ಮತ್ತು ಮತ್ತೊಮ್ಮೆ ಅದೇ ರೀತಿ ಶಿಸ್ತು ಬದ್ಧ ದಾಳಿಯನ್ನು ಸಂಘಟಿಸಬೇಕಿದೆ ಎಂದು ಅವರು ಹೇಳಿದರು.

ಚಿನ್ನಸ್ವಾಮಿಯಲ್ಲಿ ಫೈಟ್
ಐಪಿಎಲ್ 2024 ರ 52 ನೇ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದೆ. ಇದಕ್ಕೂ ಮುನ್ನ ಉಭಯ ತಂಡಗಳ ನಡುವೆ 4 ಪಂದ್ಯಗಳು ನಡೆದಿವೆ. ಇದರಲ್ಲಿ ಇಬ್ಬರೂ ತಲಾ ಎರಡು ಪಂದ್ಯ ಜಯ ಸಾಧಿಸಿದೆ. ಏಪ್ರಿಲ್ 28 ರಂದು ಬೆಂಗಳೂರು ಮತ್ತು ಗುಜರಾತ್ ನಡುವಿನ ಪಂದ್ಯದಲ್ಲಿ ಬೆಂಗಳೂರು 9 ವಿಕೆಟ್‌ಗಳಿಂದ ಜಯಗಳಿಸಿತ್ತು.
ಐಪಿಎಲ್ 2024 ಅಂಕಗಳ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 10ನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ 10 ಪಂದ್ಯಗಳಲ್ಲಿ ಕೇವಲ 3 ಗೆಲುವಿನೊಂದಿಗೆ 6 ಅಂಕಗಳನ್ನು ಹೊಂದಿದೆ. ಇನ್ನುಳಿದ ನಾಲ್ಕು ಪಂದ್ಯಗಳನ್ನು ಗೆದ್ದರೂ ಬೆಂಗಳೂರು ಒಟ್ಟು 14 ಅಂಕ ಗಳಿಸಬಹುದು.












Click it and Unblock the Notifications