ವಿರಾಟ್ ಕೊಹ್ಲಿಯನ್ನು ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿಸಲು ನಡೆದಿತ್ತು ಪ್ಲ್ಯಾನ್: ಪಾರ್ಥಿವ್ ಪಟೇಲ್ ಅಚ್ಚರಿ ಮಾಹಿತಿ ರಿವೀಲ್

RCB Virat Kohli: ಐಪಿಎಲ್‌ ಇತಿಹಾಸದಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂತಾ ಇದ್ರೆ ಅದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಾತ್ರ.. ಅದರಲ್ಲೂ ವಿರಾಟ್‌ ಕೊಹ್ಲಿ ತನ್ನದೇ ಆದ ಫ್ಯಾನ್‌ ಬೇಸ್‌ ಹೊಂದಿರುವ ಕಾರಣ ಆರ್‌ಸಿಬಿ ಕ್ರೇಜ್ ಹೆಚ್ಚಾಗುತ್ತಲಿದೆ. ಈ ನಡುವೆಯೇ 'ಕಿಂಗ್' ಕೊಹ್ಲಿಯನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಲು ನಡೆದಿದ್ದ ಬಿಗ್ ಪ್ಲ್ಯಾನ್ ಬಗ್ಗೆ ಪಾರ್ಥಿವ್ ಪಟೇಲ್ ಬಹಿರಂಗಪಡಿಸಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾಗಿದೆ. ಆದರೆ ತಂಡದ ನಾಯಕತ್ವ ಮತ್ತು ನಿರ್ಧಾರಗಳ ಕುರಿತು ತೆರೆಮರೆಯಲ್ಲಿ ನಡೆದಿದ್ದ ಪ್ರಮುಖ ಘಟನೆಯೊಂದನ್ನು ಟೀಮ್ ಇಂಡಿಯಾ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಪಾರ್ಥಿವ್ ಪಟೇಲ್ ರಿವೀಲ್ ಮಾಡಿದ್ದಾರೆ.

RCB Big Plan to Replace Virat Kohli as Captain Revealed by India Former Cricketer Parthiv Patel

ನಾಯಕತ್ವ ಸ್ಥಾನದಿಂದ ಕೊಹ್ಲಿ ಕೆಳಗಿಳಿಸುವ ಪ್ಲ್ಯಾನ್

ಇಂಗ್ಲೆಂಡ್‌ನ ಮಾಜಿ ಆಲ್ ರೌಂಡರ್ ಮೊಯಿನ್ ಅಲಿ ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ, 'ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರಾಟ್ ಕೊಹ್ಲಿ ಬದಲಿಗೆ ಪಾರ್ಥಿವ್ ಪಟೇಲ್ ಅವರನ್ನು ತಂಡದ ನಾಯಕನನ್ನಾಗಿ ಮಾಡಲು ನಿರ್ಧರಿಸಿತ್ತು,' ಎಂದು ಹೇಳಿದ್ದರು. ಇದೀಗ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಪಾರ್ಥಿವ್ ಪಟೇಲ್ ಅವರು, ಮೊಯಿನ್ ಅಲಿ ನೀಡಿದ್ದ ಆ ಹೇಳಿಕೆ ಸಂಪೂರ್ಣವಾಗಿ ಸತ್ಯವಾಗಿತ್ತು ಎಂದು ಖಚಿತಪಡಿಸಿದ್ದಾರೆ.

ಆಶಿಶ್ ನೆಹ್ರಾ ಮತ್ತು ಗ್ಯಾರಿ ಕರ್ಸ್ಟನ್ ಬಿಗ್ ಪ್ಲ್ಯಾನ್

2018 ಮತ್ತು 2019ರ ಐಪಿಎಲ್ ಆವೃತ್ತಿಯಲ್ಲಿ ಆಶಿಶ್ ನೆಹ್ರಾ ಆರ್‌ಸಿಬಿ ಬೌಲಿಂಗ್ ಕೋಚ್ ಆಗಿದ್ದರೆ, ಗ್ಯಾರಿ ಕರ್ಸ್ಟನ್ ಮುಖ್ಯ ತರಬೇತುದಾರರಾಗಿದ್ದರು. 2019ರ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಅತ್ಯಂತ ಕಳಪೆ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ (8ನೇ ಸ್ಥಾನ) ಪಡೆಯಿತು.

ಈ ವೇಳೆ ಕೋಚ್‌ಗಳಾಗಿದ್ದ ನೆಹ್ರಾ ಮತ್ತು ಕರ್ಸ್ಟನ್ ಇಬ್ಬರೂ ಪಾರ್ಥಿವ್ ಪಟೇಲ್ ಅವರ ಬಳಿ ಮಾತನಾಡಿ, 'ಮುಂದಿನ ಆವೃತ್ತಿಗೆ ಸಿದ್ಧವಾಗಿರಿ, ಕೊಹ್ಲಿ ಬದಲಿಗೆ ನಿಮ್ಮನ್ನು ನಾಯಕನನ್ನಾಗಿ ಮಾಡಲು ಆಲೋಚಿಸುತ್ತಿದ್ದೇವೆ,' ಎಂದು ತಿಳಿಸಿದ್ದರು. ನಾಯಕತ್ವದ ರೇಸ್‌ನಲ್ಲಿ ಮೊಯಿನ್ ಅಲಿ ಕೂಡ ಇದ್ದರೂ, ಪಾರ್ಥಿವ್ ಅವರನ್ನು ಅಂತಿಮಗೊಳಿಸಲಾಗಿತ್ತು.

ಪಾರ್ಥಿವ್ ಪಟೇಲ್ ಹೇಳಿದ್ದೇನು?

ಇದೀಗ ಆಕಾಶ್ ಚೋಪ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಇದೇ ವಿಷಯದ ಕುರಿತು ಮಾತನಾಡಿದ ಪಾರ್ಥಿವ್ ಪಟೇಲ್ ಅವರು, 'ನಾನು ಈ ವಿಷಯದ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ ಮೊಯಿನ್ ಅಲಿ ತಮ್ಮ ಸಂದರ್ಶನವೊಂದರಲ್ಲಿ ಇದನ್ನು ಪ್ರಸ್ತಾಪಿಸಿದ್ದರು. ನನಗೆ ಮ್ಯಾನೇಜ್‌ಮೆಂಟ್ ಕಡೆಯಿಂದ ಸಿದ್ಧವಾಗಿರಿ, ನಾವು ಮುಂದಿನ ವರ್ಷಕ್ಕೆ ಈ ಬಗ್ಗೆ ಆಲೋಚಿಸುತ್ತಿದ್ದೇವೆ ಎಂದು ಹೇಳಲಾಗಿತ್ತು,' ಅಂತಾ ತಿಳಿಸಿದ್ದಾರೆ.

'ಆದರೆ ಮರುವರ್ಷ ನನಗೆ ಈ ನಾಯಕತ್ವದ ಭರವಸೆ ನೀಡಿದ್ದ ಆ ಇಬ್ಬರು ವ್ಯಕ್ತಿಗಳನ್ನೇ (ಆಶಿಶ್ ನೆಹ್ರಾ ಮತ್ತು ಗ್ಯಾರಿ ಕರ್ಸ್ಟನ್) ತಂಡದಿಂದ ತೆಗೆದುಹಾಕಲಾಯಿತು. ಹೊಸ ಕೋಚ್‌ಗಳು ಬಂದರು ಮತ್ತು ಆ ಇಡೀ ಸೀಸನ್‌ನಲ್ಲಿ ನನಗೆ ಒಂದೇ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಗಲಿಲ್ಲ,' ಎಂದು ಹೇಳಿಕೊಂಡಿದ್ದಾರೆ.

ಮ್ಯಾನೇಜ್‌ಮೆಂಟ್ ಬದಲಾವಣೆ

ಆದರೆ 2019ರ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಆರ್‌ಸಿಬಿ ಆಡಳಿತ ಮಂಡಳಿಯು ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಹಾಗೂ ಹೆಡ್ ಕೋಚ್ ಗ್ಯಾರಿ ಕರ್ಸ್ಟನ್ ಇಬ್ಬರನ್ನೂ ಹುದ್ದೆಯಿಂದ ವಜಾಗೊಳಿಸಿತು. 2020ರ ಐಪಿಎಲ್ ಆವೃತ್ತಿಗೆ ಮುನ್ನ ಮೈಕ್ ಹೆಸ್ಸನ್ ಮತ್ತು ಸೈಮನ್ ಕಟಿಚ್ ಆರ್‌ಸಿಬಿ ಈ ಜವಾಬ್ದಾರಿಗಳನ್ನು ವಹಿಸಿಕೊಂಡರು. ಹೊಸ ಮ್ಯಾನೇಜ್‌ಮೆಂಟ್ ಆಗಮಿಸುತ್ತಿದ್ದಂತೆ ಕೊಹ್ಲಿಯನ್ನು ನಾಯಕತ್ವದಿಂದ ತೆಗೆದುಹಾಕುವ ಯೋಜನೆಯು ರದ್ದಾಯಿತು.

2020ರ ಸೀಸನ್‌ನಲ್ಲೀ ಸಿಗದ ಅವಕಾಶ

ತಮಗೆ ನಾಯಕತ್ವದ ಭರವಸೆ ನೀಡಿದ್ದ ಕೋಚ್‌ಗಳೇ ಹೊರಬಿದ್ದಿದ್ದರಿಂದ ಪಾರ್ಥಿವ್ ಪಟೇಲ್ ಅವರಿಗೆ ನಾಯಕತ್ವ ಸಿಗಲಿಲ್ಲ. ಅಷ್ಟೇ ಅಲ್ಲದೆ, 2020ರ ಐಪಿಎಲ್‌ನಲ್ಲಿ ಆರ್‌ಸಿಬಿ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಅವರನ್ನು ಆರಂಭಿಕರಾಗಿ ಹಾಗೂ ಎಬಿ ಡಿವಿಲಿಯರ್ಸ್ ಅವರನ್ನು ವಿಕೆಟ್ ಕೀಪರ್ ಆಗಿ ಕಣಕ್ಕಿಳಿಸಿತು. ಇದರಿಂದಾಗಿ ಪಾರ್ಥಿವ್ ಪಟೇಟ್‌ಗೆ ಇಡೀ ಸೀಸನ್‌ನಲ್ಲಿ ಒಂದೇ ಒಂದು ಪಂದ್ಯದಲ್ಲೂ ಪ್ಲೇಯಿಂಗ್‌ 11ನಲ್ಲಿ ಆಡುವ ಅವಕಾಶ ಸಿಗಲಿಲ್ಲ

ಪಾರ್ಥಿವ್ ಪಟೇಲ್ ನಿವೃತ್ತಿ

ಆರ್‌ಸಿಬಿಯ ಈ ಹೊಸ ತಂತ್ರಗಾರಿಕೆ ಫಲ ನೀಡಿತು. 2016ರ ನಂತರ ಆರ್‌ಸಿಬಿ ತಂಡವು 2020ರಲ್ಲಿ ಮೊದಲ ಬಾರಿಗೆ ಪ್ಲೇಆಫ್‌ಗೆ ಅರ್ಹತೆ ಪಡೆಯಿತು. ಇತ್ತ 2020ರ ಸೀಸನ್ ಮುಗಿದ ತಕ್ಷಣವೇ ಪಾರ್ಥಿವ್ ಪಟೇಲ್ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಗೆ ನಿವೃತ್ತಿ ಘೋಷಿಸಿದರು. ಅಂದರೆ ಅವರು 2019ರಲ್ಲೇ ತಮ್ಮ ಕೊನೆಯ ಐಪಿಎಲ್ ಪಂದ್ಯವಾಡಿದ್ದರು. ವಿರಾಟ್ ಕೊಹ್ಲಿ 2020 ಮತ್ತು 2021ರ ಸೀಸನ್‌ಗಳಲ್ಲೂ ನಾಯಕರಾಗಿ ಮುಂದುವರಿದಿದ್ದು, 2021ರ ಕೊನೆಯಲ್ಲಿ ತಾವೇ ಸ್ವತಃ ನಾಯಕತ್ವ ತ್ಯಜಿಸಿದರು. ಒಟ್ಟಿನಲ್ಲಿ ಇದೀಗ ಪಾರ್ಥಿವ್ ಪಟೇಲ್ ಅವರು ನೀಡಿದ ಹೇಳಿಕೆ ಸಖತ್ ಸದ್ದು ಮಾಡುತ್ತಿದೆ. ಅಲ್ಲದೆ, ನೆಟ್ಟಿಗರು ಈ ಕುರಿತು ಪ್ರತಿಕ್ರಿಯಿಸಿದ್ದು, 'ತೆರೆಮರೆಯಲ್ಲಿ ಇಷ್ಟೆಲ್ಲಾ ಸಂಚುಗಳು ನಡೆದಿದ್ವಾ?' ಅಂತಾ ಪ್ರಶ್ನಿಸಲು ಆರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+