RCB: ಕನ್ನಡಿಗನಿಗೆ ಈ ಬಾರಿಯಾದರೂ ಅವಕಾಶ ಕೊಡುತ್ತಾ ಆರ್‌ಸಿಬಿ?
ಐಪಿಎಲ್ 2025ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 22ರಂದು ಶನಿವಾರ ಐಪಿಎಲ್ ಪಂದ್ಯಾವಳಿಗೆ ಚಾಲನೆ ಸಿಗಲಿದ್ದು ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೆಕೆಆರ್ ಆರ್ ಸಿಬಿ ತಂಡವನ್ನು ಎದುರಿಸಲಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಈ ಪಂದ್ಯ ನಡೆಯಲಿದೆ.
ಆರ್ ಸಿಬಿ ಈಗಾಗಲೇ ಅಭ್ಯಾಸ ಆರಂಭಿಸಿದ್ದು ಪ್ರಮುಖ ಆಟಗಾರರು ತಂಡವನ್ನು ಸೇರಿಕೊಂಡಿದ್ದಾರೆ. ನಾಯಕ ರಜತ್ ಪಟಿದಾರ್, ಜಿತೇಶ್ ಶರ್ಮಾ, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಸೇರಿದಂತೆ ಅನೇಕ ಆಟಗಾರರು ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದು ಅಭ್ಯಾಸ ಆರಂಭಿಸಿದ್ದಾರೆ.

ಮಾರ್ಚ್ 17ರಂದು ಆರ್ ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ ನಡೆಯಲಿದ್ದು ತಂಡದ ಎಲ್ಲಾ ಆಟಗಾರರು ಆ ವೇಳೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ವಿರಾಟ್ ಕೊಹ್ಲಿ ಕೂಡ ಶೀಘ್ರದಲ್ಲೇ ಆರ್ ಸಿಬಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಆರ್ ಸಿಬಿ ತಂಡದಲ್ಲಿ ಕನ್ನಡಿಗರು
ಐಪಿಎಲ್ ಆರಂಭದ ವರ್ಷಗಳಲ್ಲಿ ಆರ್ ಸಿಬಿ ತಂಡದಲ್ಲಿ ಕನ್ನಡಿಗರದ್ದೇ ಪ್ರಾಬಲ್ಯ ಇತ್ತು. ದ್ರಾವಿಡ್, ಅನಿಲ್ ಕುಂಬ್ಳೆ, ಅಖಿಲ್ ಬಾಲಚಂದ್ರ, ವಿನಯಕ್ ಕುಮಾರ್ ಸೇರಿದಂತೆ ಅನೇಕ ಆಟಗಾರರು ತಂಡದಲ್ಲಿದ್ದರು. ಬಳಿಕ ಕೂಡ ಕೆಎಲ್ ರಾಹುಲ್, ದೆವದತ್ ಪಡಿಕ್ಕಲ್, ಮನೀಶ್ ಪಾಂಡೆ ಸೇರಿದಂತೆ ಅನೇಕ ಆಟಗಾರರು ಇದ್ದರು. ಬಳಿಕ ಸ್ಥಳೀಯ ಆಟಗಾರರನ್ನು ಆರ್ ಸಿಬಿ ಕಡೆಗಣಿಸುತ್ತಿದ್ದು, ಹಬ್ಬಕ್ಕೆ ವಿಷ್ ಮಾಡಲು ಮಾತ್ರ ಕೆಲವು ಆಟಗಾರರನ್ನು ಖರೀದಿ ಮಾಡುತ್ತಿತ್ತು.
2023ರಲ್ಲಿ ತಂಡವನ್ನು ಸೇರಿಕೊಂಡ ಆಲ್‌ರೌಂಡರ್ ಮನೋಜ್ ಭಾಂಡಗೆ, 2025ರ ಮೆಗಾ ಹರಾಜಿನಲ್ಲಿ ತಂಡಕ್ಕೆ ಬಂದಿರುವ ದೇವದತ್ ಪಡಿಕ್ಕಲ್ ಮಾತ್ರ ಈಗ ಇರುವ ಆರ್ ಸಿಬಿಯಲ್ಲಿರುವ ಕನ್ನಡಿಗರಾಗಿದ್ದಾರೆ. ದೇವದತ್ ಪಡಿಕ್ಕಲ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗುತ್ತದಾ ಇಲ್ಲವಾ ಎನ್ನುವುದನ್ನು ಕಾದು ನೋಡಬೇಕಿದೆ.
ಮನೋಜ್ ಭಾಂಡಗೆಗೆ ಅವಕಾಶ ನೀಡಿ
ತಂಡದಲ್ಲಿರುವ ಆಲ್‌ರೌಂಡರ್ ಮನೋಜ್ ಭಾಂಡಗೆ ಅವರಿಗೆ ಈ ಬಾರಿಯಾದರೂ ತಂಡದಲ್ಲಿ ಅವಕಾಶ ಸಿಗಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಮನೋಜ್ ಭಾಂಡಗೆ ಕರ್ನಾಟದ ಪ್ರತಿಭಾವಂತ ಆಟಗಾರ. ಮಹಾರಾಜ ಕಪ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ದೇಶೀಯ ಟಿ20 ಕ್ರಿಕೆಟ್‌ನಲ್ಲಿ 15 ಇನ್ನಿಂಗ್ಸ್‌ಗಳಲ್ಲಿ 187 ರನ್ ಗಳಿಸಿದ್ದರೆ, 22 ಇನ್ನಿಂಗ್ಸ್‌ಗಳಲ್ಲಿ 18 ವಿಕೆಟ್ ಪಡೆದುಕೊಂಡಿದ್ದಾರೆ. 2024ರ ಮಹಾರಾಜ ಟ್ರೋಫಿ ಪಂದ್ಯಾವಳಿಯಲ್ಲಿ 12 ಪಂದ್ಯಗಳಲ್ಲಿ 213.13 ಸ್ಟ್ರೈಕ್‌ರೇಟ್‌ನಲ್ಲಿ 297 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಅರ್ಧಶತಕ ಕೂಡ ಸೇರಿದೆ. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಿದ್ದ ಅವರು ಫಿನಿಷರ್ ರೀತಿ ಸ್ಪೋಟಕ ಬ್ಯಾಟಿಂಗ್ ಮಾಡಿದ್ದಾರೆ. 10 ಇನ್ನಿಂಗ್ಸ್‌ಗಳಲ್ಲಿ 8 ವಿಕೆಟ್ ಕೂಡ ಪಡೆದಿದ್ದಾರೆ.
ಮನೋಜ್ ಭಾಂಡಗೆ ಸ್ಫೋಟಕ ಬ್ಯಾಟರ್ ಜೊತೆಗೆ ಉತ್ತಮ ಬೌಲರ್ ಕೂಡ, ಆದರೆ ಅವರಿಗೆ ಅವಕಾಶದ ಕೊರತೆ ಇದೆ. ಆರ್ ಸಿಬಿ ಅವರನ್ನು ತಂಡದಲ್ಲಿ ಇರಿಸಿಕೊಂಡಿದ್ದರೂ ಅವಕಾಶ ಕೊಡದಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಈ ಬಾರಿಯಾದರೂ ಅವರಿಗೆ ಅವಕಾಶ ಸಿಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಅಭ್ಯಾಸ ಆರಂಭಿಸಿದ ಆರ್ ಸಿಬಿ
ಆರ್ ಸಿಬಿ ತಂಡದ ಆಟಗಾರರು ಬೆಂಗಳೂರಿನಲ್ಲಿ ಬುಧವಾರದಿಂದ ಅಭ್ಯಾಸ ಆರಂಭಿಸಿದ್ದಾರೆ. ಜಿತೇಶ್ ಶರ್ಮಾ, ಮನೋಜ್ ಭಾಂಡಗೆ, ಕೃನಾಲ್ ಪಾಂಡ್ಯ, ರಜತ್ ಪಟಿದಾರ್, ದೇವದತ್ ಪಡಿಕ್ಕಲ್, ಟಿಮ್ ಡೇವಿಡ್, ಸುಯಶ್ ಶರ್ಮಾ ಸೇರಿದಂತೆ ತಂಡದ ಬಹುತೇಕ ಆಟಗಾರರು ಮೊದಲ ದಿನ ಅಭ್ಯಾಸದಲ್ಲಿ ಪಾಲ್ಗೊಂಡರು.
ಮನೋಜ್ ಭಾಂಡಗೆ ಗಾಯಗೊಂಡಿದ್ದಾರೆ ಅವರ ಬದಲಾಗಿ ಕರ್ನಾಟಕ ಮತ್ತೊಬ್ಬ ಆಟಗಾರ ಸ್ಮರಣ್ ರವಿಚಂದ್ರನ್ ಅವಕಾಶ ಪಡೆಯುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಮನೋಜ್ ಭಾಂಡಗೆ ಫಿಟ್ ಆಗಿದ್ದು ಮೊದಲ ಪಂದ್ಯದಿಂದಲೇ ಆಯ್ಕೆಗೆ ಲಭ್ಯವಿದ್ದಾರೆ.
ಆರ್ ಸಿಬಿ ತಂಡದ ವೇಗಿ ಜೋಶ್ ಹೇಜಲ್‌ವುಡ್ ಮತ್ತು ಆಲ್‌ರೌಂಡರ್ ಜೇಕಬ್ ಬೆಥೆಲ್ ಗಾಯಗೊಂಡಿದ್ದು ಈ ಬಾರಿ ಪಂದ್ಯಾವಳಿಯಲ್ಲಿ ಆಡುವುದು ಅನುಮಾನವಾಗಿದೆ. ಆದರೂ ಆರ್ ಸಿಬಿ ಕೊನೆಯ ಕ್ಷಣದವರೆಗೂ ಕಾದು ನೋಡುತ್ತಿದ್ದು, ಇಬ್ಬರೂ ಅಲಭ್ಯವಾದರೆ ಬದಲೀ ಆಟಗಾರರನ್ನು ಆಯ್ಕೆ ಮಾಡಲಿದೆ.
ತಂಡದ ಚಿಂತೆ ಹೆಚ್ಚಿಸಿದ ಇಂಗ್ಲೆಂಡ್ ಆಟಗಾರರು
2025ರ ಮೆಗಾ ಹರಾಜಿನಲ್ಲಿ ಆರ್ ಸಿಬಿ ಹೊಸ ತಂಡವನ್ನೇ ಕಟ್ಟಿದೆ. ಇಂಗ್ಲೆಂಡ್‌ನ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಜೇಕಬ್ ಬೆಥೆಲ್‌ರನ್ನು ಖರೀದಿ ಮಾಡಿದೆ. ಫಿಲ್ ಸಾಲ್ಟ್ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವುದು ತಂಡದ ಚಿಂತೆ ಹೆಚ್ಚಿಸಿದೆ. ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಸತತವಾಗಿ ವೈಫಲ್ಯ ಅನುಭವಿಸಿದ್ದಾರೆ. ಆದರೂ ಐಪಿಎಲ್‌ನಲ್ಲಿ ಇವರಿಬ್ಬರೂ ಫಾರ್ಮ್ ಕಂಡುಕೊಂಡರೆ ಎದುರಾಳಿಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.
ಫಾಫ್ ಡುಪ್ಲೆಸಿಸ್ ಬಳಿಕ ರಜತ್ ಪಟಿದಾರ್ ಆರ್ ಸಿಬಿ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ತಂಡದ ನಾಯಕತ್ವ ನಿಭಾಯಿಸಿರುವ ರಜತ್ ಪಟಿದಾರ್ ತಂಡವನ್ನು ಮುನ್ನಡೆಸುವ ವಿಶ್ವಾಸ ಹೊಂದಿದ್ದಾರೆ. 18ನೇ ವರ್ಷವಾದರೂ ಆರ್ ಸಿಬಿ ಇನ್ನೂ ಮೊದಲ ಟ್ರೋಫಿ ಹುಡುಕಾಟದಲ್ಲಿದ್ದು ಹೊಸ ನಾಯಕತ್ವವಾದರೂ ತಂಡಕ್ಕೆ ಅದೃಷ್ಟು ತಂದುಕೊಡುತ್ತಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ವಿರಾಟ್ ಕೊಹ್ಲಿ ಜೆರ್ಸಿ ಸಂಖ್ಯೆ 18 ಆಗಿದ್ದು ಐಪಿಎಲ್ ಕೂಡ 18ನೇ ಆವೃತ್ತಿ ಆಗಿದ್ದು, ಕೊಹ್ಲಿಗಾಗಿ ಆದರೂ ಆರ್ ಸಿಬಿ ಈ ಬಾರಿ ಕಪ್ ಗೆಲ್ಲಬೇಕು ಎನ್ನುವುದು ಅಭಿಮಾನಿಗಳ ಆಸೆಯಾಗಿದೆ. ತಂಡ ಬಲಿಷ್ಠವಾಗೇ ಇದೆ, ಎಲ್ಲಾ ಆಟಗಾರರು ಫಾರ್ಮ್ ಕಂಡುಕೊಂಡರೆ ಈ ಬಾರಿ ಕಪ್ ಗೆಲ್ಲುವ ಕನಸು ನನಸಾಗುವ ಸಾಧ್ಯತೆ ಕೂಡ ಇದೆ.
2025ರ ಐಪಿಎಲ್‌ಗೆ ಆರ್ ಸಿಬಿ ತಂಡ ಹೀಗಿದೆ
ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ರಸಿಖ್ ದಾರ್, ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಾಂಢಗೆ, ನುವಾನ್ ತುಷಾರ, ಜೇಕಬ್ ಬೆಥೆಲ್, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ, ಸ್ವಸ್ತಿಕ್ ಚಿಕಾರ, ದೇವದತ್ ಪಡಿಕ್ಕಲ್.
ಗಾಯಗೊಂಡ ಆಟಗಾರರು: ಜೋಶ್ ಹ್ಯಾಜಲ್‌ವುಡ್.












Click it and Unblock the Notifications