R Ashwin: ಆರ್. ಅಶ್ವಿನ್ ಮಡಿಲಿಗೆ ಮತ್ತೊಂದು 5 ವಿಕೆಟ್‌ಗಳ ಗೊಂಚಲು!
ಭಾರತ ಕ್ರಿಕೆಟ್ ತಂಡ ಇಂದು ಮತ್ತೆ ಅತ್ಯದ್ಭುತ ಟೆಸ್ಟ್ ಗೆಲುವನ್ನು ಸಾಧಿಸುವ ಮೂಲಕ, ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ತಲುಪಿದೆ. ಈ ಮೂಲಕ ಇಂಗ್ಲೆಂಡ್ ವಿರುದ್ಧದ ಒಟ್ಟು 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಸತತ 4ನೇ ಗೆಲುವು ದಾಖಲಿಸಿದೆ. ಈ ನಡುವೆ 5ನೇ ಟೆಸ್ಟ್ ಪಂದ್ಯಲ್ಲಿ ಆರ್. ಅಶ್ವಿನ್ ಮತ್ತೊಂದು ಸಾಧನೆ ಮಾಡಿದ್ದಾರೆ. ಈ ಮೂಲಕ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಆರ್. ಅಶ್ವಿನ್ ಇತಿಹಾಸ ನಿರ್ಮಿಸಿದ್ದಾರೆ.
ಆರ್. ಅಶ್ವಿನ್ ಅವರ ಹೆಸರು ಕ್ರಿಕೆಟ್ ಜಗತ್ತಿನಲ್ಲಿ ಅಜರಾಮರ ಎನ್ನಬಹುದು. ಯಾಕಂದ್ರೆ ಈ ಆಟಗಾರ ಕೆಲವೇ ವರ್ಷಗಳಲ್ಲಿ ಅತ್ಯದ್ಭುತ ಸಾಧನೆ ಮಾಡಿದ್ದಾರೆ. ಭಾರತ ತಂಡಕ್ಕಾಗಿ, ಆರ್. ಅಶ್ವಿನ್ ಅಮೂಲ್ಯ ಕೊಡುಗೆ ನೀಡಿದ್ದಾರೆ. ಎಷ್ಟೋ ಪಂದ್ಯಗಳಲ್ಲಿ ಭಾರತ ತಂಡಕ್ಕೆ ಆರ್. ಅಶ್ವಿನ್ ಅವರ ಕೈಚಳಕದ ಮೂಲಕವೇ ಗೆಲುವು ಸಿಕ್ಕಿದೆ ಎನ್ನಬಹುದು. ಈಗ ಇದೇ ಅಶ್ವಿನ್ ಅವರು ಮತ್ತೊಮ್ಮೆ 5 ವಿಕೆಟ್‌ಗಳ ಗೊಂಚಲು ಉರುಳಿಸಿ, ಇಡೀ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಗಿರಗಿರನೆ ತಿರುಗಿ ಬಂದ ಬಾಲ್!
ಆರ್. ಅಶ್ವಿನ್ ಅವರು ಪಕ್ಕಾ ಸ್ಪಿನ್ ಬೌಲರ್, ಅದರಲ್ಲೂ ಅಶ್ವಿನ್ ಅವರ ಕೇರಮ್ ಬಾಲ್ ನೋಡಿ ಆಂಗ್ಲರು ಅಂದ್ರೆ ಇಂಗ್ಲೆಡ್ ಕ್ರಿಕೆಟ್ ತಂಡ ನಡುಗಿ ಹೋಗಿದೆ. ಮೊದಲ ಪಂದ್ಯದಿಂದ ಹಿಡಿದು ಇದೀಗ 5ನೇ ಹಾಗೂ ಕೊನೆಯ ಪಂದ್ಯದ ತನಕ ಇಂಗ್ಲೆಂಡ್ ಟೀಂ ಅಶ್ವಿನ್ ಅವರ ಬೌಲಿಂಗ್ ದಾಳಿಗೆ ನಲುಗಿ ಹೋಗಿದೆ. ಮೊದಲನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ ಕೇವಲ 218 ರನ್‌ಗೆ ಆಲೌಟ್ ಆಗುವಲ್ಲಿ ಇದೇ ಅಶ್ವಿನ್ ಅವರ ಪಾತ್ರ ದೊಡ್ಡದಾಗಿತ್ತು. ಹೀಗಿದ್ದಾಗ 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಹೀನಾಯವಾಗಿ ಆಲೌಟ್ ಆಗಲು ಇದೇ ಅಶ್ವಿನ್ ಬಲವಾದ ಕಾರಣ ಆದರು.
ಅತಿಹೆಚ್ಚು ವಿಕೆಟ್ ಪಡೆದ ಆಟಗಾರರು
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅನಿಲ್ ಕುಂಬ್ಳೆ ಅವರ ಹೆಸರು ರಾರಾಜಿಸುತ್ತೆ, ಅತಿಹೆಚ್ಚು ವಿಕೆಟ್ ಉರುಳಿಸಿದ ಟಾಪ್ 5 ಟೆಸ್ಟ್ ಬೌಲರ್‌ಗಳ ಪೈಕಿ ಕುಂಬ್ಳೆ 4ನೇ ಸ್ಥಾನದಲ್ಲಿ ಇದ್ದಾರೆ. 619 ವಿಕೆಟ್ ಪಡೆದಿರುವ ಅನಿಲ್ ಕುಂಬ್ಳೆ 4ನೇ ಸ್ಥಾನದಲ್ಲಿದ್ದು 800 ವಿಕೆಟ್‌ಗಳನ್ನ ಉರುಳಿಸಿರುವ ಮುತ್ತಯ್ಯ ಮುರಳೀಧರನ್ ಈಗಲೂ ಮೊದಲನೇ ಸ್ಥಾನದಲ್ಲಿ ಇದ್ದಾರೆ. ಆಸ್ಟ್ರೇಲಿಯಾದ ಶೇನ್ ವಾರ್ನ್ 708 ವಿಕೆಟ್ ಉರುಳಿಸಿ 2ನೇ ಸ್ಥಾನವನ್ನು ಪಡೆದಿದ್ದಾರೆ. ಹಾಗೆಯೇ 700 ವಿಕೆಟ್ ಪಡೆದ ಜೇಮ್ಸ್ ಆಂಡರ್ಸನ್ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ 3ನೇ ಸ್ಥಾನದಲ್ಲಿ ಇದ್ದಾರೆ. ಆರ್. ಅಶ್ವಿನ್ 516 ವಿಕೆಟ್ ಪಡೆದು 9ನೇ ಸ್ಥಾನದಲ್ಲಿದ್ದಾರೆ.

ಭೀಕರ ಸೋಲು ಕಂಡ ಆಂಗ್ಲರು
ಮೊದಲನೇ ಇನ್ನಿಂಗ್ಸ್‌ನಲ್ಲಿ ಕೇವಲ 218 ರನ್ ಗಳಿಸಿದ್ದ ಇಂಗ್ಲೆಂಡ್ ಪಡೆಗೆ ಮೊದಲೇ ಸೋಲಿನ ಸುಳಿವು ಸಿಕ್ಕಿತ್ತು. ಅದ್ರಲ್ಲೂ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಯಾವಾಗ ಭರ್ಜರಿ, 477 ರನ್ ಗಳಿಸಿತ್ತೋ ಅಲ್ಲಿಂದಲೇ ಇಂಗ್ಲೆಂಡ್ ತಂಡಕ್ಕೆ ಕಂಟಕ ಶುರುವಾಗಿತ್ತು. ಭಾರತದ ಬ್ಯಾಟಿಂಗ್ ಅಬ್ಬರ ತಡೆಯಲು ವಿಫಲವಾದ ಇಂಗ್ಲೆಂಡ್ ಟಿಂ ಕೊನೆಗೆ ಭಾರತದ ಭರ್ಜರಿ ಸ್ಪಿನ್ ದಾಳಿಯನ್ನ ಎದುರಿಸುವಲ್ಲಿ ಕೂಡ ಎಡವಟ್ಟು ಮಾಡಿಕೊಂಡಿತ್ತು. ಹೀಗಾಗಿ 2ನೇ ಇನ್ನಿಂಗ್ಸ್‌ನಲ್ಲಿ ಹೀನಾಯ ಪ್ರದರ್ಶನ ನೀಡಿರುವ ಇಂಗ್ಲೆಂಡ್ ತಂಡ 195 ರನ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ ಭಾರತ ಇನ್ನಿಂಗ್ಸ್ ಜೊತೆ 64 ರನ್‌ಗಳ ಗೆಲುವು ಕಂಡಿದೆ.












Click it and Unblock the Notifications