ಕಲಬುರಗಿ ಟೆನ್ನಿಸ್ ಟೂರ್ನಿ; ಸಿಂಗಲ್ಸ್ ಕಿರೀಟ ರಾಮಕುಮಾರ್ ಮುಡಿಗೆ
ಕಲಬುರಗಿ, ಡಿಸೆಂಬರ್ 04; ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಐ.ಟಿ.ಎಫ್ ಕಲಬುರಗಿ ಓಪನ್ ಮೆನ್ಸ್ ಸಿಂಗಲ್ಸ್ ಫೈನಲ್ ಪಂದ್ಯ ಭಾನುವಾರ ನಡೆಯಿತು. ಭಾರತದ ರಾಮಕುಮಾರ್ ರಾಮನಾಥನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಫೈನಲ್ ಪಂದ್ಯದಲ್ಲಿ ರಾಮಕುಮಾರ್‌ಗೆ ಆಸ್ಟ್ರಿಯಾದ ಡೇವಿಡ್ ಪಿಚ್ಲರ್ ಎದುರಾಳಿಯಾಗಿದ್ದರು. ಪಂದ್ಯ ಬಹುತೇಕ ಏಕಪಕ್ಷೀಯವಾಗಿತ್ತು. ರಾಮಕುಮಾರ್ ಕೇವಲ 64 ನಿಮಿಷಗಳಲ್ಲಿ 6-2, 6-1 ನೇರ ಸೆಟ್‌ಗಳಿಂದ ಪ್ರತಿಸ್ಪರ್ಧಿಗೆ ಸೋಲುಣಿಸಿ ಸಿಂಗಲ್ಸ್ ಕಿರೀಟಕ್ಕೆ ಮುತ್ತಿಟ್ಟರು.

ಪಂದ್ಯದ ಬಳಿಕ ನಡೆದ ಸಮಾರಂಭದಲ್ಲಿ ರಾಮಕುಮಾರ ರಾಮನಾಥನ್ ಅವರಿಗೆ US $ 3600 ಚೆಕ್, ಟ್ರೋಫಿ ಮತ್ತು ರನ್ನರ್ ಅಪ್ ಪ್ರಶಸ್ತಿಯನ್ನು ಆಸ್ಟ್ರಿಯಾದ ಡೇವಿಡ್ ಪಿಚ್ಲರ್ ಅವರಿಗೆ US $ 2120 ಚೆಕ್ ಮತ್ತು ಟ್ರೋಫಿ ಪ್ರದಾನ ಮಾಡಲಾಯಿತು. ಈ ಮೂಲಕ ಕಲಬುರಗಿಯಲ್ಲಿ ಆಯೋಜನೆ ಮಾಡಲಾಗಿದ್ದ ಟೆನ್ನಿಸ್ ಹಬ್ಬಕ್ಕೆ ತೆರೆ ಬಿದ್ದಿತು.
ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ, ರಾಮಕುಮಾರ, "ದೇಶಿಯ ಮಟ್ಟದಲ್ಲಿ ಕೆ.ಎಸ್.ಎಲ್.ಟಿ.ಎ. ಇಂತಹ ಟೂರ್ನಿ ಹೆಚ್ಚು ಆಯೋಜಿಸಿದಲ್ಲಿ ಉತ್ತಮ ರ‍್ಯಾಂಕ್ ಗಳಿಸಲು ಸಾಧ್ಯವಾಗಲಿದೆ" ಎಂದು ಹೇಳಿದರು. ಅಚ್ಚುಕಟ್ಟಾಗಿ ಕ್ರೀಡಾಕೂಟ ಆಯೋಜನೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಪ್ರಾದೇಶಿಕ ಕೇಂದ್ರ ತೆರೆಯಬೇಕು; ವಿಜೇತರಿಗೆ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, "ರಾಜ್ಯದಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಟೆನಿಸ್ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡಲು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಸಂಸ್ಥೆಯು ಕಲಬುರಗಿಯನ್ನು ಕೇಂದ್ರವಾಗಿಟ್ಟುಕೊಂಡು ಆಸಕ್ತ ಕ್ರೀಡಾಪಟುಗಳಿಗೆ ನಿರಂತರ ತರಬೇತಿ ನೀಡಲು ಪ್ರಾದೇಶಿಕ ತರಬೇತಿ ಕೇಂದ್ರ ತೆರೆಯಬೇಕು" ಎಂದು ಹೇಳಿದರು.
"ತರಬೇತಿ ಕೇಂದ್ರ ಸ್ಥಾಪನೆ ಮಾಡಲು ಸರ್ಕಾರ ಎಲ್ಲಾ ರೀತಿಯ ಮೂಲಸೌಕರ್ಯ ಕಲ್ಪಿಸಲು ಬದ್ಧವಾಗಿದೆ. ತರಬೇತಿ ಇಲ್ಲದೆ ಹೋದಲ್ಲಿ ಸ್ಥಳೀಯ ಪ್ರತಿಭೆಗಳು ಹೊರಬರಲು ಅಸಾಧ್ಯ. ನಮ್ಮ ಸರ್ಕಾರ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದಕ್ಕೆ ಕಲಬುರಗಿಯಲ್ಲಿ ಐ.ಟಿ.ಎಫ್ ಟೂರ್ನಿ ಆಯೋಜನೆ ಇದಕ್ಕೆ ಸಾಕ್ಷಿ. ಕೆ.ಎಸ್.ಎಲ್.ಟಿ.ಗೆ ಇದು ಒಂದು ಟೂರ್ನಿಯಾದರೆ, ಕಲಬುರಗಿಗೆ 9 ಜನ ವಿದೇಶಿ ಆಟಗಾರರು ಭಾಗವಹಿಸಿ ಅಂತಾರಷ್ಟ್ರಿಯ ಪಂದ್ಯಾವಳಿ ಇದಾಗಿದೆ" ಎಂದರು.
"ಸುಮಾರು ಒಂದು ವಾರಗಳ ಟೆನಿಸ್ ಹಬ್ಬವನ್ನು ಇಲ್ಲಿನ ಜನರು ಕಣ್ತುಂಬಿಕೊಂಡಿದ್ದಾರೆ. ಇಂತಹ ಅಂತರಾಷ್ಟ್ರೀಯ, ರಾಷ್ಟ್ರಿಯ ಟೂರ್ನಿ ವರ್ಷದಲ್ಲಿ ಎರಡು ಮೂರು ಬಾರಿ ಇಲ್ಲಿ ಆಯೋಜಿಸಿದಲ್ಲಿ ಟೆನಿಸ್ ಬೆಳವಣಿಗೆಗೆ ತುಂಬಾ ಸಹಕಾರಿಯಾಗಲಿದೆ. ಸ್ಥಳೀಯ ಕ್ರೀಡಾಪಟುಗಳು, ಬಾಲ್ ಬಾಯ್ಸ್ ಗಳಿಗೆ ವಿದೇಶಿ ಆಟಗಾರರನ್ನು ಸಮೀಪದಿಂದ ನೋಡುವ ಭಾಗ್ಯ ಸಿಕ್ಕಿದೆ. ಇದು ಅವರಲ್ಲಿ ಟೆನಿಸ್ ಪ್ರೀತಿ ಹೆಚ್ಚಿಸಲಿದೆ" ಎಂದು ತಿಳಿಸಿದರು.
ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ನೇತೃತ್ವಡ ಇಡೀ ಜಿಲ್ಲಾಡಳಿತ ತಂಡಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದನೆ ಸಲ್ಲಿಸಿದರು. ಇದಲ್ಲದೇ ಟೂರ್ನಿ ಅಯೋಜನೆಗೆ ಪ್ರಾಯೋಜಕತ್ವ ನೀಡಿದ ಉದ್ಯಮಿಗಳಿಗೆ, ಬಾಲ್ ಬಾಯ್ಸ್, ಅಂಪೈರ್, ಕ್ರೀಡಾಪಟುಗಳು, ಮಾಧ್ಯಮದವರಿಗೆ, ಪೈನಲ್ ಪಂದ್ಯದಲ್ಲಿ ಕಿರೀಟಕ್ಕೆ ಶ್ರಮಿಸಿದ ರಾಮಕುಮಾರ ರಾಮನಾಥನ್ ಮತ್ತು ಡೇವಿಡ್ ಪಿಚ್ಲರ್ ಹಾಗೂ ಫೈನಲ್ ಪಂದ್ಯ ವೀಕ್ಷಣೆಗೆ ಬಂದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದರು.
ಸಚಿವರು ಮಾತನಾಡಿ, "ಕಲ್ಯಾಣ ಕರ್ನಾಟಕ ಭಾಗದಲ್ಲಿ ಟೆನ್ನಿಸ್ ಕ್ರೀಡೆ ಸೇರಿದಂತೆ ಎಲ್ಲಾ ಕ್ರೀಡೆಗಳಿಗೆ ಉತ್ತೇಜನ ನೀಡಲು ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣಲ್ಲಿ ಟೆನ್ನಿಸ್ ಕ್ರೀಡಾಂಗಣವನ್ನು 33 ಕೋಟಿ ರೂ. ವೆಚ್ಚದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮೇಲ್ದರ್ಜೆಗೇರಿಸಲು ನೀಲಿ ನಕ್ಷೆ ಸಿದ್ಧಪಡಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಇದಕ್ಕೆ 20 ಕೋಟಿ ರೂ. ಅನುದಾನ ಸಹ ಬಿಡುಗಡೆ ಮಾಡಲಾಗುವುದು" ಎಂದರು.












Click it and Unblock the Notifications