Rajat Patidar: ಆರ್‌ಸಿಬಿ ಫೈನಲ್ ಪಂದ್ಯಕ್ಕೂ ಮುನ್ನ ನಾಯಕ ರಜತ್ ಪಾಟಿದಾರ್ ಬಿಗ್ ಸ್ಟೇಟ್‌ಮೆಂಟ್
RCB Rajat Patidar: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ (ಮೇ 31) ನಡೆಯಲಿರುವ ಐಪಿಎಲ್ 2026ರ ಹೈವೋಲ್ಟೇಲ್ ಫೈನಲ್ ಸಮರದಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಬಿಗ್ ಸ್ಟೇಟ್‌ಮೆಂಟ್ ಕೊಟ್ಟಿದ್ದಾರೆ. ಇದು ಇದೀಗ ಸಖತ್ ಸದ್ದು ಮಾಡುತ್ತಿದೆ.
ಐಪಿಎಲ್ 2026ರ ಫೈನಲ್ ಪಂದ್ಯಕ್ಕೂ ಮುನ್ನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟೀದಾರ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪ್ರಶಸ್ತಿ ಸಮರ ಗೆದ್ದರೆ, ಎಂ.ಎಸ್.ಧೋನಿ ಮತ್ತು ರೋಹಿತ್ ಶರ್ಮಾ ನಂತರ ಸತತ ಎರಡು ಐಪಿಎಲ್ ಟ್ರೋಫಿ ಗೆದ್ದ ಮೂರನೇ ನಾಯಕ ಎಂಬ ಇತಿಹಾಸವನ್ನು ಪಾಟಿದಾರ್ ಬರೆಯಲಿದ್ದಾರೆ.

ರಜತ್ ಪಾಟಿದಾರ್ ಹೇಳಿದ್ದೇನು?
ಈ ಬಗ್ಗೆ ಮಾತನಾಡಿದ ರಜತ್ ಪಾಟಿದಾರ್ ಅವರು, 'ಇತರ ನಾಯಕರು ಹಿಂದೆ ಏನು ಮಾಡಿದ್ದಾರೆ ಅಥವಾ ನಾನು ಯಾರೊಂದಿಗಾದರೂ ಸ್ಪರ್ಧಿಸಬೇಕೇ ಎಂಬ ಬಗ್ಗೆ ನಾನು ಎಂದಿಗೂ ಯೋಚಿಸಿಲ್ಲ. ಒಬ್ಬ ವ್ಯಕ್ತಿಯಾಗಿ ನನ್ನ ಕ್ರಿಕೆಟ್ ಜರ್ನಿ ರೋಲರ್ ಕೋಸ್ಟರ್‌ನಂತಿತ್ತು. ನಾನು ಪ್ರಸ್ತುತ ಕ್ಷಣದಲ್ಲಿ ಬದುಕಲು ಇಷ್ಟಪಡುತ್ತೇನೆ. ನಾಳೆ ಫೈನಲ್ ಪಂದ್ಯವಿದ್ದು, ನಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ನಾವು ಗಮನ ಹರಿಸುತ್ತಿದ್ದೇವೆ,' ಎಂದು ಹೇಳಿದರು.
ಭಾರತ ತಂಡಕ್ಕೆ ಆಯ್ಕೆ ಬಗ್ಗೆ ರಜತ್ ಮಹತ್ವದ ಹೇಳಿಕೆ
ಈ ಸೀಸನ್‌ನಲ್ಲಿ 14 ಪಂದ್ಯಗಳಿಂದ ಬರೋಬ್ಬರಿ 486 ರನ್ ಚಚ್ಚಿರುವ ರಜತ್ ಪಾಟೀದಾರ್ ಅವರನ್ನು ಭಾರತ ಟಿ20 ತಂಡಕ್ಕೆ ಆಯ್ಕೆ ಮಾಡಬೇಕು ಹಾಗೂ ಅವರನ್ನೇ ಮುಂದಿನ ಟಿ20 ನಾಯಕನನ್ನಾಗಿ ಮಾಡಬೇಕು ಎಂಬ ಚರ್ಚೆಗಳು ಜೋರಾಗಿವೆ. ಈ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಅವರು, 'ನಾನು ಸದ್ಯಕ್ಕೆ ಭಾರತ ತಂಡದ ಯಾವುದೇ ಆಯ್ಕೆಯ ಪ್ರಕ್ರಿಯೆಯನ್ನು ಎದುರುನೋಡುತ್ತಿಲ್ಲ. ಹಾಗಾಗಿ ಅದರ ಬಗ್ಗೆ ಯೋಚಿಸುತ್ತಿಲ್ಲ,' ಎಂದು ಖಡಕ್ ಆಗಿ ಹೇಳಿದರು. ಅಲ್ಲದೆ 'ನಾನು ಭಾರತ ಟಿ20 ತಂಡದ ನಾಯಕನಾಗುವ ಕನಸನ್ನು ಕಾಣುತ್ತಿಲ್ಲ. ಆದರೆ ಒಬ್ಬ ನಾಯಕನಾಗಿ ಟ್ರೋಫಿಗಳನ್ನು ಗೆಲ್ಲಲು ಬಯಸುತ್ತೇನೆ,' ಎಂದು ಸ್ಪಷ್ಟಪಡಿಸಿದರು.
'ಮತ್ತೊಂದು ಟ್ರೋಫಿ ಗೆಲ್ಲುವ ಅವಕಾಶ ಸಿಕ್ಕಿದೆ'
ಕಳೆದ 2025ರ ಸೀಸನ್‌ನಲ್ಲಿ ಆರ್‌ಸಿಬಿಗೆ ಮೊದಲ ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿದ್ದ ರಜತ್, ಈ ಬಾರಿ ನಾವು ಡಿಫೆಂಡಿಂಗ್ ಚಾಂಪಿಯನ್ಸ್ ಎಂಬ ಹಮ್ಮಿನಿಂದ ಕಣಕ್ಕಿಳಿಯುತ್ತಿಲ್ಲ ಎಂದಿದ್ದಾರೆ. 'ನಾವು 2025ರಲ್ಲಿ ಮಾಡಿದ್ದನ್ನೇ ಮಾತನಾಡುತ್ತಾ ಕೂರಲು ಸಾಧ್ಯವಿಲ್ಲ. ಇದು ಹೊಸ ಸೀಸನ್, ಮತ್ತೊಂದು ಟ್ರೋಫಿ ಗೆಲ್ಲಲು ನಮಗೆ ಹೊಸ ಅವಕಾಶ ಸಿಕ್ಕಿದೆ. ನಾವು ಯಾವುದನ್ನೂ ಡಿಫೆಂಡ್ ಮಾಡಿಕೊಳ್ಳಲು ಬಂದಿಲ್ಲ, ಮತ್ತೊಮ್ಮೆ ಕಪ್ ಗೆಲ್ಲಲು ಬಂದಿದ್ದೇವೆ,' ಎಂದರು.
ತಂಡದಲ್ಲಿ ಆಗಿರುವ ಧನಾತ್ಮಕ ಬದಲಾವಣೆಯ ಬಗ್ಗೆ ಮಾತನಾಡಿದ ಅವರು, 'ಹಿಂದೆ ಆರ್‌ಸಿಬಿ ಕೇವಲ ಒಬ್ಬಿಬ್ಬರು ಸ್ಟಾರ್ ಆಟಗಾರರ ಮೇಲೆ ಅವಲಂಬಿತವಾಗಿರುತ್ತಿತ್ತು. ಆದರೆ ಈಗ ತಂಡದ ಪ್ರತಿಯೊಬ್ಬ ಆಟಗಾರನೂ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡುವಾಗ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ನಾವು ಕೇವಲ ಕ್ವಾಲಿಫೈಯರ್ ಪಂದ್ಯಗಳನ್ನು ಆಡಲು ಬಂದಿಲ್ಲ, ಫೈನಲ್ ಆಡಿ ಗೆಲ್ಲಲು ಬಂದಿದ್ದೇವೆ ಎಂಬ ಮೈಂಡ್‌ಸೆಟ್ ಎಲ್ಲರಲ್ಲೂ ಮೂಡಿದೆ,' ಎಂದು ಹೇಳಿದರು.
ಯುವ ಆಟಗಾರರ ಮೇಲಿರುವ ಒತ್ತಡದ ಬಗ್ಗೆ ಮಾತನಾಡಿದ ಅವರು, 'ನಾನು 2021ರಲ್ಲಿ ಇಂತಹದ್ದೇ ಆತಂಕ ಹಾಗೂ ಒತ್ತಡದ ಪರಿಸ್ಥಿತಿಯನ್ನು ಎದುರಿಸಿದ್ದೆ. ಹಾಗಾಗಿ ಯುವ ಆಟಗಾರರೊಂದಿಗೆ ಸಮಯ ಕಳೆದು, ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಿ. ಎದುರಾಳಿ ಯಾರು ಎಂಬುದನ್ನು ನೋಡಬೇಡಿ ಎಂದು ಧೈರ್ಯ ತುಂಬುತ್ತೇನೆ,' ಎಂದು ಹೇಳಿದರು. ಒಟ್ಟಿನಲ್ಲಿ ರಜತ್ ಪಾಟಿದಾರ್ ಅವರು ಆರ್‌ಸಿಬಿ ಹಾಗೂ ಟೀಂ ಇಂಡಿಯಾ ನಾಯಕನ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿ ಗಮನ ಸೆಳೆದಿದ್ದಾರೆ.












Click it and Unblock the Notifications