IPL 2025: ದಿಢೀರ್ ನಾಯಕನ ಬದಲಾವಣೆ ಮಾಡಿದ ರಾಜಸ್ಥಾನ ರಾಯಲ್ಸ್! ಯಾರು ಹೊಸ ನಾಯಕ?.
ಐಪಿಎಲ್ 2025ರ ಆರಂಭಕ್ಕೆ ಇನ್ನು ಎರಡು ದಿನ ಮಾತ್ರ ಬಾಕಿ ಉಳಿದಿದೆ. ಐಪಿಎಲ್ ಹತ್ತಿರವಾದ ಬಳಿಕ ರಾಜಸ್ಥಾನ ರಾಯಲ್ಸ್ ಅಚ್ಚರಿಯ ನಿರ್ಧಾರವೊಂದನ್ನು ಮಾಡಿದೆ. ಹೌದು, ಐಪಿಎಲ್ ಆರಂಭದ ಮುನ್ನವೇ ತಂಡಕ್ಕೆ ಹೊಸ ನಾಯಕನ ನೇಮಕ ಮಾಡಿದೆ. ನಾಯಕನಾಗಿರುವ ಸಂಜು ಸ್ಯಾಮ್ಸನ್ ಕೂಡ ತಂಡದಲ್ಲಿ ಇದ್ದರೂ ಹೊಸ ನಾಯಕನ ನೇಮಕ ಮಾಡಿದೆ.
ಮಾರ್ಚ್ 22ರಂದು ಐಪಿಎಲ್ 18 ನೇ ಆವೃತ್ತೆಗೆ ಚಾಲನೆ ಸಿಗಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಈಡನ್ ಗಾರ್ಡನ್ಸ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಆಡಲಿದೆ. ಮಾರ್ಚ್ 23ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ ರಾಯಲ್ಸ್ ಮೊದಲ ಪಂದ್ಯ ಆಡಲಿದೆ. ಆದರೆ ಆರಂಭದ ಮೂರು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ನಾಯಕರಾಗಿರುವುದಿಲ್ಲ. ತಂಡದ ಯುವ ಆಟಗಾರ ರಿಯಾನ್ ಪರಾಗ್‌ಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ.

ನಾಯಕನ ಬದಲಾವಣೆಗೆ ಕಾರಣವೇನು?
ಸಂಜು ಸ್ಯಾಮ್ಸನ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಆರಂಭಿಕ ಮೂರು ಪಂದ್ಯಗಳಿಗೆ ಅನಿವಾರ್ಯವಾಗಿ ನಾಯಕನ ಬದಲಾವಣೆ ಮಾಡಿದೆ. ಸ್ಯಾಮ್ಸನ್ ಇನ್ನೂ ಕೀಪಿಂಗ್ ಮತ್ತು ಫೀಲ್ಡಿಂಗ್ ಮಾಡಲು ಅನುಮತಿ ಸಿಕ್ಕಿಲ್ಲ. ಆದರೆ ಅವರು ತಂಡದಲ್ಲಿ ಬ್ಯಾಟರ್ ಆಗಿ ಮಾತ್ರ ಆಡಲಿದ್ದಾರೆ.
"ರಾಜಸ್ಥಾನ ರಾಯಲ್ಸ್ ತಂಡದ ಅವಿಭಾಜ್ಯ ಅಂಗವಾಗಿರುವ ಸಂಜು ಸ್ಯಾಮ್ಸನ್, ವಿಕೆಟ್ ಕೀಪಿಂಗ್ ಮತ್ತು ಫೀಲ್ಡಿಂಗ್‌ಗೆ ಅನುಮತಿ ಪಡೆಯುವವರೆಗೆ ಬ್ಯಾಟಿಂಗ್‌ನಲ್ಲಿ ಪ್ರಮುಖ ಕೊಡುಗೆ ನೀಡುವವರಾಗಿ ಉಳಿಯುತ್ತಾರೆ. ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಅವರು ನಾಯಕನಾಗಿ ಮರಳುತ್ತಾರೆ" ಎಂದು ಫ್ರಾಂಚೈಸಿ ಅಧಿಕೃತವಾಗಿ ಮಾಹಿತಿ ನೀಡಿದೆ.
ಬೆರಳಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ ಸ್ಯಾಮ್ಸನ್ ಕೆಲವು ದಿನಗಳ ಹಿಂದೆ ತಂಡವನ್ನು ಸೇರಿಕೊಂಡಿದ್ದು ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತದ ಟಿ20ಐ ಸರಣಿಯ ಸಮಯದಲ್ಲಿ ಅವರು ಗಾಯಗೊಂಡಿದ್ದರು, ಇದರಿಂದಾಗಿ ಅವರು ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದರು.
ರಿಯಾನ್ ಪರಾಗ್‌ಗೆ ನಾಯಕತ್ವ ನೀಡಿರುವ ರಾಜಸ್ಥಾನ ರಾಯಲ್ಸ್ ಯುವ ಆಟಗಾರನ ಮೇಲೆ ಭರವಸೆ, ನಂಬಿಕೆಯನ್ನು ತೋರಿಸಿದೆ. ದೇಶೀಯ ಕ್ರಿಕೆಟ್‌ನಲ್ಲಿ ರಿಯಾನ್ ಪರಾಗ್ ಅಸ್ಸಾಂ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಹೀಗಾಗಿ ನಾಯಕನ ಜವಾಬ್ದಾರಿ ನಿಭಾಯಿಸಿರುವ ಅನುಭವ ಇದ್ದು, ಐಪಿಎಲ್‌ನಲ್ಲಿ ದೊಡ್ಡ ಜವಾಬ್ದಾರಿ ಹೊರಲು ಸಜ್ಜಾಗಿದ್ದಾರೆ.
ರಾಜಸ್ಥಾನ ರಾಯಲ್ಸ್‌ನ 2025ರ ಐಪಿಎಲ್‌ನ ಮೊದಲ ಎರಡು ತವರು ಪಂದ್ಯಗಳು ಮಾರ್ಚ್ 26 ಮತ್ತು ಮಾರ್ಚ್ 30 ರಂದು ಗುವಾಹಟಿಯ ಎಸಿಎ ಕ್ರೀಡಾಂಗಣದಲ್ಲಿ ನಡೆಯಲಿವೆ. ಮಾರ್ಚ್ 26ರಂದು ಕೆಕೆಆರ್ ವಿರುದ್ಧ ಸೆಣೆಸಲಿದ್ದು, ಮಾರ್ಚ್ 30ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಬಳಿಕ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣ ರಾಜಸ್ಥಾನ ರಾಯಲ್ಸ್‌ಗೆ ತವರಿನ ಅಂಗಳವಾಗಲಿದೆ.












Click it and Unblock the Notifications