Virat Kohli: ಕಿಂಗ್ ಕೊಹ್ಲಿ ಕಾಲಿಗೆ ಬಿದ್ದ ರಾಯಚೂರಿನ ಯುವಕ ಹೇಳಿದ್ದೇನು..? ಆ ಕ್ಷಣ ಏನಾಯ್ತು..?
ಬೆಂಗಳೂರು, ಏಪ್ರಿಲ್ 02: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಪಂಬಾಬ್ ಕಿಂಗ್ಸ್ ನಡುವೆ ಐಪಿಎಲ್ ಪಂದ್ಯ ನಡೆಯುವ ವೇಳೆ ಅಭಿಮಾನಿಯೊಬ್ಬ ಮೈದಾನದೊಳಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಕಾಲಿಗೆ ಬಿದ್ದ ಘಟನೆ ನಡೆದಿತ್ತು.
ವಿರಾಟ್ ಕೊಹ್ಲಿಯ ಹುಚ್ಚು ಅಭಿಮಾನಿಯಾಗಿರುವ ರಾಯಚೂರು ಮೂಲದ ಯುವಕ, ಬಿಗಿ ಭದ್ರತೆಯನ್ನು ಭೇಧಿಸಿ ವಿರಾಟ್ ಕೊಹ್ಲಿ ಬಳಿಗೆ ತೆರಳಿ ಆಶೀರ್ವಾದ ಪಡೆದಿದ್ದಾನೆ. ಈತ ಮೂಲತಃ ರಾಯಚೂರು ನಗರದ ಎಲ್‌ಬಿಎಸ್ ನಗರದವನಾಗಿದ್ದು, ಯುವಕನ ಹೆಸರು ಚಿನ್ನಾ. ಈ ಘಟನೆಯ ಬಗ್ಗೆ ಹಾಗೂ ಆ ಕ್ಷಣದಲ್ಲಿ ಏನಾಯಿತು ಎನ್ನುವುದರ ಬಗ್ಗೆ ಸ್ವತಃ ಯುವಕನೇ ಮಾತನಾಡಿದ್ದಾನೆ. ಖಾಸಗಿ ಮಾಧ್ಯಮವೊಂದರ ಜೊತೆ ಚಿನ್ನಾ ಮಾತನಾಡಿದ್ದಾನೆ.

"ಮೊದಲಿನಿಂದಲೂ ವಿರಾಟ್ ಕೊಹ್ಲಿ ಸರ್ ಅವರನ್ನು ಭೇಟಿಯಾಗಬೇಕು ಎನ್ನುವ ಕನಸಿತ್ತು. ಆ ಕನಸು ಈಗ ನನಸಾಗಿದೆ. ಈ ಜನ್ಮಕ್ಕೆ ಇಷ್ಟೇ ಸಾಕು. ಅವರ ಪಾದಗಳನ್ನು ಮುಟ್ಟಿರುವುದು ನನಗೆ ದೇವರೇ ವರ ಕೊಟ್ಟಂತೆ ಆಯ್ತು. ನನ್ನ ಬಾಸ್ ಮುಂದೆ ಕಂಡಾಗ ನನಗೆ ಭದ್ರತಾ ಸಿಬ್ಬಂದಿ ಯಾರೂ ಕಾಣಲಿಲ್ಲ. ಅವರನೆಲ್ಲಾ ದಾಟಿ ಹೋದೆ ನಾನು. ಆಗಿದ್ದಾಗಲೀ ಅಂತಾ ಭೇಟಿ ಮಾಡಲು ಹೋದೆ."
"ವಿರಾಟ್ ಕೊಹ್ಲಿ ನನ್ನ ಸ್ಪೂರ್ತಿ. ಅವರ ಆಶೀರ್ವಾದ ನನಗೆ ಸಿಕ್ಕಿದೆ. ಹೀಗಾಗಿ ನನಗೆ ಬಹಳ ಖುಷಿ ಇದೆ. ಈ ವೇಳೆ ನಾನು ನಿಮ್ಮ ಬಿಗ್ ಫ್ಯಾನ್ ಸರ್ ಎಂದೆ, ಕೊಹ್ಲಿ ಥ್ಯಾಂಕ್ಸ್ ಎಂದರು. ಅಲ್ಲದೇ ಭದ್ರತಾ ಸಿಬ್ಬಂದಿ ಬಳಿಕ ಹೊಡೆಯಬೇಡಿ ಸುಮ್ಮನೆ ಕರೆದುಕೊಂಢು ಹೋಗಿ ಎಂದು ಹೇಳಿದರು. ಭಯದಲ್ಲೇ ಕೊಹ್ಲಿಯನ್ನ ಹಗ್ ಮಾಡಿದೆ. ಭೇಟಿಯಾದ ಎರಡು ದಿನದಿಂದ ನಾನು ಕೊಹ್ಲಿ ಗುಂಗಲ್ಲೇ ಇದ್ದೆ" ಅಂತಾ ಚಿನ್ನಾ ಕಿಂಗ್ ವಿರಾಟ್ ಕೊಯ್ಲಿ ಭೇಟಿಯಾದ ಕ್ಷಣವನ್ನು ಹಂಚಿಕೊಂಡಿದ್ದಾರೆ.
ಆ ದಿನ ನಡೆದಿದ್ದೇನು..?
ಮಾರ್ಚ್ 25 ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಮತ್ತು ಪಂಬಾಬ್ ಕಿಂಗ್ಸ್ ಪಂದ್ಯ ನಡೆದಿತ್ತು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ಅಭಿಮಾನಿ ಚಿನ್ನಾ ಗ್ರಿಲ್ ಹಾರಿ ಮೈದಾನಕ್ಕೆ ನುಗ್ಗಿ ಹೈಡ್ರಾಮಾ ಸೃಷ್ಟಿಸಿದ್ದ. ಈ ಬಗ್ಗೆ ಪೊಲೀಸ್ ಪ್ರಕರಣ ಕೂಡ ದಾಖಲಾಗಿತ್ತು.

ಮೈದಾನದಲ್ಲಿ ಕೊಹ್ಲಿಯ ಕಾಲಿಗೆ ಬಿದ್ದ ಅಭಿಮಾನಿಯನ್ನು ಭದ್ರತಾ ಸಿಬ್ಬಂದಿ ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋಗಿದ್ದರು. ಬಳಿಕ ಆತನಿಗೆ ಹೊಡೆದಿದ್ದಾರೆ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications