Rahul Dravid: ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ಕೋಚ್ ಸ್ಥಾನಕ್ಕೆ ಕನ್ನಡಿಗ ರಾಹುಲ್ ದ್ರಾವಿಡ್ ಹೆಸರು..
Rahul Dravid: ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಸ್ಥಾನದಿಂದ ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ ಅವರನ್ನು ಕೆಳಗಿಳಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಆ ಸ್ಥಾನಕ್ಕೆ ಭಾರತೀಯ ದಿಗ್ಗಜ, ಕನ್ನಡಿಗ ರಾಹುಲ್ ದ್ರಾವಿಡ್ ಅವರ ಹೆಸರು ಕೇಳಿಬರುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನಿಡಲಾಗಿದೆ ತಿಳಿಯಿರಿ.
ಡೈಲಿ ಟೆಲಿಗ್ರಾಫ್ ವರದಿಯ ಪ್ರಕಾರ, ಇಂಗ್ಲೆಂಡ್‌ನ ಮುಂದಿನ ಟೆಸ್ಟ್ ಕೋಚ್ ರೇಸ್‌ನಲ್ಲಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ಜೊತೆಗೆ ಇಂಗ್ಲೆಂಡ್‌ನ ಮಾಜಿ ಕೋಚ್ ಆಂಡಿ ಫ್ಲವರ್ ಮತ್ತು ಮಾಜಿ ಸ್ಪಿನ್ನರ್ ರಿಚರ್ಡ್ ಡಾಸನ್ ಅವರ ಹೆಸರುಗಳಿವೆ.

ಟೆಸ್ಟ್ ಕೋಚ್ ಹುದ್ದೆಯಿಂದ ಕೆಳಗಿಳಿದ ಮೆಕಲಮ್
ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 1-2 ಅಂತರದ ಸೋಲನುಭವಿಸಿದ್ದು, ಇದರ ಬೆನ್ನಲ್ಲೇ ಮೆಕಲಮ್ ಅವರ ನಾಲ್ಕು ವರ್ಷಗಳ ಅವಧಿ ಮುಕ್ತಾಯಗೊಂಡಿದೆ. ಮುಂದಿನ ವರ್ಷ ನಡೆಯಲಿರುವ ಪ್ರತಿಷ್ಠಿತ ಆಶಸ್ ಸರಣಿಗೂ ಮುನ್ನ 'ತಂಡದಲ್ಲಿ ಬದಲಾವಣೆ ಮಾಡಲು ಇದು ಸೂಕ್ತ ಸಮಯ" ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ. ಆದರೆ ಅವರು ಏಕದಿನ ಮತ್ತು ಟಿ20 ತಂಡಗಳ ಮುಖ್ಯ ತರಬೇತುದಾರರಾಗಿ ಮುಂದುವರೆಯಲಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡಿಗ ರಾಹುಲ್ ದ್ರಾವಿಡ್ ಹೆಸರು..
ಇನ್ನೂ ಭಾರತ ತಂಡವನ್ನು 2024ರ ಟಿ20 ವಿಶ್ವಕಪ್ ಪ್ರಶಸ್ತಿ ಹಾಗೂ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುನ್ನಡೆಸಿದ್ದ 53 ವರ್ಷದ ದ್ರಾವಿಡ್ ಅವರ ಕಾರ್ಯವೈಖರಿಯನ್ನು ಇಸಿಬಿ ಸೂಕ್ಷ್ಮವಾಗಿ ಗಮನಿಸಿದೆ. ಜೊತೆಗೆ ಕ್ರಿಕೆಟ್ ಮೇಲಿನ ಅವರ ಆಸಕ್ತಿ, ಹೆಚ್ಚಿನ ತಿಳುವಳಿಕೆಯಿಂದಾಗಿ ಈ ಹುದ್ದೆಯ ಅಭರ್ಥಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೂ ದ್ರಾವಿಡ್‌ಗೆ ಫುಲ್ ಟೈಮ್ ಕೋಚ್ ಆಗಿ ಕಾರ್ಯನಿರ್ವಹಿಸಲು ಯಾವುದೇ ಆಸಕ್ತಿ ಇಲ್ಲ ಅಂತಲೂ ವರದಿಯಾಗಿದೆ.
ದ್ರಾವಿಡ್ ಕೋಚ್ ಹುದ್ದೆ ಬಗ್ಗೆ ವರದಿ ಹೇಳೋದೇನು?
'ದ್ರಾವಿಡ್ ಅವರಿಗೆ ಪೂರ್ಣ ಸಮಯದ ಕೋಚ್ ಆಗಿ ಕೆಲಸ ಮಾಡಲು ಆಸಕ್ತಿಯಿಲ್ಲ ನಿಜ, ಆದರೆ ಇಂಗ್ಲೆಂಡ್ ಟೆಸ್ಟ್ ಕೋಚ್ ಹುದ್ದೆಯು ಅವರು ಹೆಚ್ಚಿನ ಸಮಯವನ್ನು ಮನೆಯಲ್ಲಿ ಕಳೆಯಲು ಅವಕಾಶ ಮಾಡಿಕೊಡುತ್ತದೆ. ಜೊತೆಗೆ, ತಮಗೆ ಅತ್ಯಂತ ಪ್ರಿಯವಾದ ಟೆಸ್ಟ್ ಕ್ರಿಕೆಟ್ ಮಾದರಿಯನ್ನು ಜೀವಂತವಾಗಿಡಲು ಸಹಾಯ ಮಾಡುವ ಅವಕಾಶವೂ ಅವರಿಗೆ ಸಿಗುತ್ತದೆ. ಹೀಗಾಗಿ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಕನಿಷ್ಠ ಪಕ್ಷ ಅವರ ಆಸಕ್ತಿಯನ್ನಾದರೂ ತಿಳಿದುಕೊಳ್ಳಲು ಪ್ರಯತ್ನಿಸಬೇಕು,' ಎಂದು ವರದಿಯಾಗಿದೆ.
ಯಾರೆಲ್ಲಾ ರೇಸ್‌ನಲ್ಲಿದ್ದಾರೆ?
ಈ ಪಟ್ಟಿಯಲ್ಲಿ ಜಿಂಬಾಬ್ವೆಯ ಹಾಗೂ ಐಪಿಎಲ್‌ನ ರಾಯಲ್ ಚಾಲೆಂಜರ್ಟ್ ಬೆಂಗಳೂರು ತಂಡದ ಕೋಚ್ ಆಂಡಿ ಫ್ಲವರ್ ಅವರ ಹೆಸರು ಕೂಡ ಇದೆ. ಇವರು ಇಂಗ್ಲೆಂಡ್ ತಂಡವನ್ನು ಮೂರು ಆಶಸ್ ಸರಣಿ ಗೆಲುವುಗಳತ್ತ ಮುನ್ನಡೆಸಿ, ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ 1 ಪಟ್ಟಕೇರಿಸಿದ ಅತ್ಯಂತ ಯಶಸ್ವಿ ಕೋಚ್ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಅಷ್ಟೇ ಅಲ್ಲದೆ, ಅವರು ಐಪಿಎಲ್‌ನಲ್ಲಿ ಸತತ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡದ ಯಶಸ್ವಿ ಕೋಚ್ ಆಗಿ ಗುರಿತಿಸಿಕೊಂಡಿದ್ದಾರೆ.
ಪ್ರಸ್ತುತ ಗ್ಲಾಮೋರ್ಗನ್ ತಂಡದ ಮುಖ್ಯ ಕೋಚ್ ಆಗಿರುವ ಡಾಸನ್ ಅವರ ಹೆಸರು ಕೂಡ ಇದೆ. ಕೌಂಟಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಟ್ಟದಲ್ಲಿ ಅವರು ತೋರಿರುವ ಅದ್ಭುತ ಕೋಚಿಂಗ್ ಸಾಮರ್ಥ್ಯದಿಂದಾಗಿ ಅವರ ಹೆಸರು ಮುಂಚೂಣಿಗೆ ಬಂದಿದೆ. ಶ್ರೀಲಂಕಾದ ದಂತಕಥೆ ಕುಮಾರ್ ಸಂಗಕ್ಕಾರ, ಇಂಗ್ಲೆಂಡ್ ಲಯನ್ಸ್ ಕೋಚ್ ಆಂಡ್ರ್ಯೂ ಫ್ಲಿಂಟಾಫ್, ಪಾಕಿಸ್ತಾನ ತಂಡದ ಮುಖ್ಯ ಕೋಚ್ ಮೈಕ್ ಹೆಸ್ಸನ್ ಮತ್ತು ಆಸ್ಟ್ರೇಲಿಯಾದ ಮಾಜಿ ಕೋಚ್ ಜಸ್ಟಿನ್ ಲ್ಯಾಂಗರ್ ಅವರ ಹೆಸರು ಕೂಡ ಈ ಪಟ್ಟಿಯಲ್ಲಿದೆ.
ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಹೆದ್ದೆ ರೇಸ್‌ನಲ್ಲಿರುವವರು
* ಆಂಡಿ ಫ್ಲವರ್
* ರಿಚರ್ಡ್ ಡಾಸನ್
* ಕುಮಾರ್ ಸಂಗಕ್ಕಾರ
* ಆಂಡ್ರ್ಯೂ ಫ್ಲಿಂಟಾಫ್
* ಮೈಕ್ ಹೆಸ್ಸನ್
* ಜಸ್ಟಿನ್ ಲ್ಯಾಂಗರ್












Click it and Unblock the Notifications