Rachin Ravindra: ರಾಹುಲ್, ಸಚಿನ್ ಸ್ಪೂರ್ತಿಯಿಂದ ರಚಿನ್ ಹೆಸರು ಇಟ್ಟಿಲ್ಲ: ರವೀಂದ್ರ ತಂದೆ ಹೇಳಿದ್ದೇನು?
ರಚಿನ್ ರವೀಂದ್ರ, 2023ರ ಏಕದಿನ ವಿಶ್ವಕಪ್‌ನಲ್ಲಿ ಸಾಕಷ್ಟು ಹೆಸರು ಮಾಡಿರುವ ನ್ಯೂಜಿಲೆಂಡ್ ಕ್ರಿಕೆಟಿಗ. ಭಾರತೀಯ ಮೂಲದವರಾದ ರಚಿನ್ ರವೀಂದ್ರ ಈ ಬಾರಿ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಪರವಾಗಿ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟರ್.
ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 565 ರನ್‌ಗಳೊಂದಿಗೆ, ರಚಿನ್ ರವೀಂದ್ರ ಅವರು 2023 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಮೂರನೇ ಅತಿ ಹೆಚ್ಚು ಸ್ಕೋರರ್ ಆಗಿದ್ದಾರೆ. ಅವರು ಮೂರು ಶತಕಗಳು ಮತ್ತು ಎರಡು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರ ಪ್ರಸ್ತುತ ಸರಾಸರಿ 70.62 ಆಗಿದೆ.
ಬುಧವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ರಚಿನ್ ರವೀಂದ್ರ ಪ್ರಮುಖ ಅಸ್ತ್ರವಾಗಿದ್ದಾರೆ, ವೇಗಿಗಳು ಮತ್ತು ಸ್ಪಿನ್ನರ್ ವಿರುದ್ಧ ರಚಿನ್ ರವೀಂದ್ರ ಅತ್ಯುತ್ತಮವಾಗಿ ಆಡುತ್ತಾರೆ.

ರಚಿನ್ ರವೀಂದ್ರ ಭಾರತೀಯ ಮೂಲದ ಆಟಗಾರ. ಅವರ ಅಜ್ಜಿಯರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಅವರು ಕ್ರಿಕೆಟ್ ವಿಶ್ವಕಪ್ 2023 ರ ಸಮಯದಲ್ಲಿ ಅಜ್ಜಿ ಮನೆಗೆ ಭೇಟಿ ಕೂಡ ನೀಡಿದ್ದರು. 'ರಚಿನ್' ಎಂಬ ಹೆಸರು ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಹೆಸರುಗಳಿಂದ ಸ್ಫೂರ್ತಿ ಪಡೆಯಲಾಗಿತ್ತು ಎಂದು ಹೇಳಲಾಗುತ್ತದೆ.
ಹೆಸರಿನ ಬಗ್ಗೆ ರಚಿನ್ ತಂದೆ ಹೇಳಿದ್ದೇನು?
ಇನ್ನು ರಚಿನ್ ರವೀಂದ್ರ ಹೆಸರನ್ನು ಉದ್ದೇಶಪೂರ್ವಕವಾಗಿ ಇಟ್ಟಿರಲಿಲ್ಲ ಎಂದು ಅವರ ತಂದೆ ಇದೀಗ ಸ್ಪಷ್ಟಪಡಿಸಿದ್ದಾರೆ. "ರಚಿನ್ ಜನಿಸಿದಾಗ, ನನ್ನ ಹೆಂಡತಿ ಹೆಸರನ್ನು ಸೂಚಿಸಿದರು, ಮತ್ತು ನಾವು ಅದರ ಬಗ್ಗೆ ಹೆಚ್ಚಾಗಿ ಚರ್ಚೆ ಮಾಡಲಿಲ್ಲ" ಎಂದು ರವೀಂದ್ರ ಅವರ ತಂದೆ ರವಿ ಕೃಷ್ಣಮೂರ್ತಿ ಹೇಳಿರುವುದಾಗಿ ದಿ ಪ್ರಿಂಟ್ ವರದಿ ಮಾಡಿದೆ.
ಹೆಸರು ಚೆನ್ನಾಗಿದೆ, ಉಚ್ಚರಿಸಲು ಸುಲಭ ಮತ್ತು ಚಿಕ್ಕದಾಗಿದೆ, ಆದ್ದರಿಂದ ನಾವು ಆ ಹೆಸರು ಇಡಲು ನಿರ್ಧರಿಸಿದೆವು, ಕೆಲವು ವರ್ಷಗಳ ನಂತರ ಈ ಹೆಸರು ರಾಹುಲ್ ಮತ್ತು ಸಚಿನ್ ಅವರ ಹೆಸರುಗಳ ಮಿಶ್ರಣವಾಗಿದೆ ಎಂದು ನಾವು ಅರಿತುಕೊಂಡೆವು. ಉದ್ದೇಶದಿಂದ ಆ ರೀತಿ ಹೆಸರು ಇಟ್ಟಿಲ್ಲ, ನಮ್ಮ ಮಗುವನ್ನು ಕ್ರಿಕೆಟಿಗನನ್ನಾಗಿ ಮಾಡಬೇಕು ಎಂದು ಮೊದಲೇ ಅಂದುಕೊಂಡಿರಲಿಲ್ಲ ಎಂದು ಹೇಳಿದರು.
ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಆರಂಭಿಸಿದ ನಂತರ ರಚಿನ್ ರವೀಂದ್ರ ಹೆಸರಿನ ಬಗ್ಗೆ ಸಾಕಷ್ಟು ಕತೆಗಳು ವರದಿಯಾಗಿದ್ದವು, ಈಗ ಅವರ ತಂದೆ ಎಲ್ಲದಕ್ಕೂ ತೆರೆ ಎಳೆದಿದ್ದು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications