Ravichandran Ashwin: ಅವಮಾನ ಮಾಡಿದ್ದರಿಂದಲೇ ನಿವೃತ್ತಿ; ರವಿಚಂದ್ರನ್ ಅಶ್ವಿನ್ ತಂದೆ ಆರೋಪ
ಬ್ರಿಸ್ಬೇನ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯವಾದ ಬಳಿಕ, ಭಾರತ ತಂಡದ ದಿಗ್ಗಜ ಆಟಗಾರ ರವಿಚಂದ್ರನ್ ಅಶ್ವಿನ್ ದಿಢೀರ್ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದರು. ಸರಣಿಯನ್ನಾದರೂ ಆಡಿ ಕೊನೆಯ ಪಂದ್ಯದಲ್ಲಿ ವಿದಾಯ ಹೇಳುವ ಅವಕಾಶವಿದ್ದರೂ ಅಶ್ವಿನ್ ದಿಢೀರ್ ನಿವೃತ್ತಿ ಘೋಷಿಸಿ ತವರಿಗೆ ಮರಳಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದೀಗ ರವಿಚಂದ್ರನ್ ಅಶ್ವಿನ್‌ರ ತಂದೆ ಮಗನ ನಿವೃತ್ತಿ ಬಗ್ಗೆ ಹಲವು ಆರೋಪಗಳನ್ನು ಮಾಡಿದ್ದಾರೆ.
ಸಿಎನ್‌ಎನ್ ನ್ಯೂಸ್ 18 ವಾಹಿನಿ ಜೊತೆ ಮಾತನಾಡಿರುವ ಅಶ್ವಿನ್‌ರ ತಂದೆ ರವಿಚಂದ್ರನ್, ಮಗನಿಗೆ ನಿರಂತರವಾಗಿ ಅವಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ. ಆತ ನಿವೃತ್ತಿ ಘೋಷಿಸುವ ವಿಷಯ ನನಗೂ ಕೊನೆಯ ಕ್ಷಣದಲ್ಲಿ ಗೊತ್ತಾಯಿತು, ಅವನ ಮನಸ್ಸಿನಲ್ಲಿ ಏನಿದೆ ಗೊತ್ತಿಲ್ಲ, ಆದರೆ ನಾನು ತುಂಬಾ ಖುಷಿಯಿಂದಲೇ ಒಪ್ಪಿಕೊಂಡೆ. ಅದರ ಬಗ್ಗೆ ನನಗೆ ಯಾವ ಭಾವನೆಯೂ ಇರಲಿಲ್ಲ. ಅಶ್ವಿನ್ ನಿವೃತ್ತಿ ಘೋಷಣೆ ಮಾಡಿದ ರೀತಿಗೆ ಖುಷಿಯಾದರೂ, ಆತ ಇನ್ನಷ್ಟು ದಿನ ಆಡಬೇಕಿತ್ತು ಎನ್ನುವ ಬೇಜಾರೂ ಇದೆ ಎಂದರು.

ನಿವೃತ್ತಿಯಾಗುವುದು ಅವನ ನಿರ್ಧಾರ ನಾನು ಅದರಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಅಲ್ಲಿ ಆತನಿಗೆ ಅವಮಾನವಾಗಿರಬಹುದು ಎನ್ನುವುದು ಅವನಿಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ. "14-15 ವರ್ಷಗಳ ಕಾಲ ಮೈದಾನದಲ್ಲಿದ್ದರು, ಈ ನಿವೃತ್ತಿ ಒಂದು ರೀತಿಯ ಆಘಾತವನ್ನು ನೀಡಿದೆ. ಅವನಿಗೆ ಅವಮಾನ ಆಗಿರುವುದರಿಂದ ನಾವು ಇದನ್ನು ನಿರೀಕ್ಷೆ ಮಾಡಿದ್ದೆವು. ಅವನು ತಾನೇ ಎಷ್ಟು ದಿನ ಎಲ್ಲವನ್ನೂ ಸಹಿಸಿಕೊಳ್ಳುತ್ತಾನೆ? ಎಂದು ಅಶ್ವಿನ್ ತಂದೆ ರವಿಚಂದ್ರನ್ ಹೇಳಿದ್ದಾರೆ.
ಮಗನ ಸಾಧನೆ ಬಗ್ಗೆ ಹೆಮ್ಮೆಯಿದೆ
"ನಾನು ಆತನನ್ನು ಬೈಕಿನಲ್ಲಿ ಕರೆದುಕೊಂಡು ಹೋಗಿ ಅಭ್ಯಾಸಕ್ಕೆ ಬಿಟ್ಟು ಬರುತ್ತಿದೆ. ಆತನ ಕ್ರಿಕೆಟ್‌ನಲ್ಲಿ ನಾನು ಹೆಚ್ಚು ತೊಡಗಿಸಿಕೊಂಡಿಲ್ಲ. ಕ್ರಿಕೆಟ್ ಮತ್ತು ಓದು ಎರಡರ ಕಡೆಗೂ ಗಮನ ಹರಿಸುವಂತೆ ಹೇಳುತ್ತಿದೆ. ಮನೆಯಲ್ಲಿ ಅವನ ಜೊತೆ ಮಾತನಾಡುತ್ತಿದ್ದೆ ಅಷ್ಟೆ. ಆತನ ಕ್ರಿಕೆಟ್ ಸಾಧನೆಯಲ್ಲಿ ನಾನು ಹೆಚ್ಚೇನೂ ಮಾಡಿಲ್ಲ ಎಲ್ಲವೂ ಆತನ ಪರಿಶ್ರಮ" ಎಂದು ಹೇಳಿದರು.
ಅಶ್ವಿನ್ ನಿವೃತ್ತಿಗೆ ಗಂಭೀರ್ ಕಾರಣ?
ರವಿಚಂದ್ರನ್ ಅಶ್ವಿನ್ ನಿವೃತ್ತಿಯ ಹಿಂದೆ ಕೋಚ್ ಗೌತಮ್ ಗಂಭೀರ್ ಕೈವಾಡ ಇದೆ ಎನ್ನುವ ವದಂತಿಗಳು ಕೂಡ ಹರಡುತ್ತಿವೆ. ತಂಡದಲ್ಲಿ ಎಲ್ಲವೂ ಸರಿಯಿಲ್ಲ ಏನೋ ಸಮಸ್ಯೆಯಾಗಿರುವ ಕಾರಣದಿಂದಲೇ ಅಶ್ವಿನ್ ದಿಢೀರ್ ನಿವೃತ್ತಿ ಘೋಷಣೆ ಮಾಡಿ ತವರಿಗೆ ಬಂದಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications