Punjab Kings: ಮುಖ್ಯ ಕೋಚ್ ಮತ್ತು ಕ್ರಿಕೆಟ್ ನಿರ್ದೇಶಕರಿಗೆ ಗೇಟ್ ಪಾಸ್; ಪಾಂಟಿಂಗ್ ಯುಗಾರಂಭ!
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೂ ಕಪ್ ಗೆಲ್ಲದ ಫ್ರಾಂಚೈಸಿಗಳಲ್ಲಿ ಪಂಜಾಬ್ ಕಿಂಗ್ಸ್ ಕೂಡ ಒಂದು, ಒಂದೆರಡು ಆವೃತ್ತಿ ಬಿಟ್ಟರೆ ಪಂಜಾಬ್ ಕಿಂಗ್ಸ್ ತಂಡದ್ದು ಪ್ರತಿ ವರ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಹ ಪರಿಸ್ಥಿತಿ. 10 ವರ್ಷಗಳಲ್ಲಿ 7 ಮುಖ್ಯಕೋಚ್‌ಗಳನ್ನು ಬದಲಾವಣೆ ಮಾಡಿರುವ ಫ್ರಾಂಚೈಸಿ ಮೆಗಾ ಹರಾಜಿಗೆ ಮುನ್ನ ಮತ್ತೆ ಮುಖ್ಯ ಕೋಚ್ ಮತ್ತು ತಂಡದ ನಿರ್ದೇಶಕರಿಗೆ ಗೇಟ್ ಪಾಸ್ ಕೊಟ್ಟಿದೆ.
ತಂಡದ ಕ್ರಿಕೆಟ್ ನಿರ್ದೇಶಕ ಸಂಜಯ್ ಬಂಗಾರ್ ಮತ್ತು ಮುಖ್ಯ ಕೋಚ್ ಟ್ರೆವರ್ ಬೇಲಿಸ್ ಇಬ್ಬರನ್ನು ಕೂಡ ಫ್ರಾಂಚೈಸಿ ಬಿಡುಗಡೆ ಮಾಡಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡವನ್ನು ಕಟ್ಟುವ ನಿರೀಕ್ಷೆಯಲ್ಲಿರುವ ಪಂಜಾಜ್ ಕಿಂಗ್ಸ್ ಪ್ರಮುಖ ಬದಲಾವಣೆಗೆ ನಾಂದಿ ಹಾಡಿದೆ.

ಡಿಸೆಂಬರ್ 2023ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಕ್ರಿಕೆಟ್ ನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡ ಸಂಜಯ್ ಬಂಗಾರ್ ಒಂದು ವರ್ಷ ತುಂಬುವ ಮುನ್ನವೇ ಪ್ರಾಂಚೈಸಿಯಿಂದ ಕೈಬಿಡಲಾಗಿದೆ. ಸಂಜಯ್ ಬಂಗಾರ್ 2014-16 ರ ಅವಧಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದರು. 2014ರಲ್ಲಿ ಮಾತ್ರ ಪಂಜಾಬ್ ಕಿಂಗ್ಸ್ ಫೈನಲ್ ತಲುಪಿತ್ತು, ಆದರೆ ಫೈನಲ್‌ನಲ್ಲಿ ಕೆಕೆಆರ್ ವಿರುದ್ಧ ಸೋತಿದ್ದ ಪಂಜಾಬ್ ಪ್ರಶಸ್ತಿ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು.
2022ರ ಆವೃತ್ತಿಯಿಂದ ಟ್ರೆವರ್ ಬೇಲಿಸ್ ತಂಡದ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದರು. ಅನಿಲ್ ಕುಂಬ್ಳೆ ಬದಲಾಗಿ ಬೇಲಿಸ್ ಮುಖ್ಯ ಕೋಚ್ ಆಗಿ ನೇಮಕವಾಗಿದ್ದರು. 2023 ಮತ್ತು 2024ರ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಎಂಟು ಮತ್ತು ಒಂಬತ್ತನೇ ಸ್ಥಾನಕ್ಕೆ ತೃಪ್ತಿಪಂಡುಕೊಂಡಿತು. ಟ್ರೆವರ್ ಬೇಲಿಸ್ ಕೋಚಿಂಗ್ ಅವಧಿಯಲ್ಲಿ ತಂಡ ವೈಫಲ್ಯ ಅನುಭವಿಸಿದ ಕಾರಣ ಮೆಗಾ ಹರಾಜಿಗೆ ಮುನ್ನ ಅವರನ್ನು ಕೈಬಿಟ್ಟಿದೆ.
ರಿಕಿ ಪಾಂಟಿಂಗ್ ಯುಗಾರಂಭ?
ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಪಂಜಾಬ್ ಕಿಂಗ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ. 2025 ರಿಂದ 2028ರವರೆಗೆ ನಾಲ್ಕು ವರ್ಷಗಳ ಕಾಲ ಅವರು ಪಂಜಾಬ್ ಕಿಂಗ್ಸ್ ಜೊತೆ ಕೆಲಸ ಮಾಡಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಕೆಲಸ ಮಾಡಿರುವ ರಿಕಿ ಪಾಂಟಿಂಗ್ 2025ರ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
ಪಂಜಾಬ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಅನಿಶ್ಚಿತತೆಯನ್ನು ನೋಡಿರುವ ತಂಡವಾಗಿದೆ. 2014ರಿಂದ ಈವರೆಗೆ ಸಂಜಯ್ ಬಂಗಾರ್, ವೀರೇಂದ್ರ ಸೆಹ್ವಾಗ್, ಬ್ರಾಡ್ ಹಾಡ್ಜ್, ಮೈಕ್ ಹೆಸ್ಸನ್, ಅನಿಲ್ ಕುಂಬ್ಳೆ ಮತ್ತು ಟ್ರೆವರ್ ಬೇಲಿಸ್ ಕೋಚ್‌ಗಳಾಗಿ ಬಂದು ಹೋಗಿದ್ದಾರೆ. ಘಟಾನುಘಟಿ ಆಟಗಾರರು, ಕೋಚ್, ಸಿಬ್ಬಂದಿ ಇದ್ದಾಗಲೂ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿರುವುದು ಫ್ರಾಂಚೈಸಿಯ ತಲೆಬಿಸಿಗೆ ಕಾರಣವಾಗಿದೆ.












Click it and Unblock the Notifications