Shashank Singh: ಗೊಂದಲದಲ್ಲಿ ಶಶಾಂಕ್ ಸಿಂಗ್‌ರನ್ನು ಖರೀದಿ ಮಾಡಿತ್ತಾ ಪಂಜಾಬ್ ಕಿಂಗ್ಸ್? ಇಲ್ಲಿದೆ ಉತ್ತರ
ಶಶಾಂಕ್ ಸಿಂಗ್, ಪಂಜಾಬ್ ಕಿಂಗ್ಸ್ ತಂಡದ ಹೀರೋ ಆಗಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ ಮೂರು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.
200 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 8.4 ಓವರ್ ಗಳಲ್ಲಿ 70 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಪಂಜಾಬ್ ಗೆಲುವಿನ ಭರವಸೆಯನ್ನೇ ಬಿಟ್ಟಿತ್ತು.

ಶಿಖರ್ ಧವನ್, ಜಾನಿ ಬೈರ್ ಸ್ಟೋ, ಪ್ರಭ್‌ಸಿಮ್ರಾನ್ ಸಿಂಗ್ ಮತ್ತು ಸ್ಯಾಮ್ ಕರನ್ ಔಟಾಗಿದ್ದರು. ಅತ್ಯುತ್ತಮ ಬೌಲಿಂಗ್ ಪಡೆಯನ್ನು ಹೊಂದಿದ್ದ ಗುಜರಾತ್ ಟೈಟಾನ್ಸ್ ಈ ಹಂತದಲ್ಲಿ ಸುಲಭವಾಗಿ ಗೆಲ್ಲುವ ವಿಶ್ವಾಸದಲ್ಲಿತ್ತು.
ಹೀರೋ ಆದ ಶಶಾಂಕ್
ಪಂಜಾಬ್ ಗೆಲುವಿನ ಆಸೆಯನ್ನೇ ಕೈಬಿಟ್ಟಾಗ ಮೈದಾನಕ್ಕಿಳಿದ ಶಶಾಂಕ್ ಸಿಂಗ್, ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಕೇವಲ 29 ಎಸೆತಗಳಲ್ಲಿ 61* ರನ್ ಗಳಿಸಿ ತಂಡವನ್ನು 19.5 ಓವರ್‌ಗಳಲ್ಲಿ ಗೆಲುವಿನತ್ತ ಕೊಂಡೊಯ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಹರಾಜಿನ ಅಂತ್ಯದ ವೇಳೆಗೆ, ಶಶಾಂಕ್ ಸಿಂಗ್ ಅವರನ್ನು ಪಂಜಾಬ್ ಕಿಂಗ್ಸ್ ಹರಾಜಿನಲ್ಲಿ 20 ಲಕ್ಷ ರೂ. ಮೂಲ ಬೆಲೆಗೆ ಆಯ್ಕೆ ಮಾಡಿತ್ತು. ಪಂಜಾಬ್ ಕಿಂಗ್ಸ್ ಸಹ-ಮಾಲೀಕರಾದ ನೆಸ್ ವಾಡಿಯಾ ಮತ್ತು ಪ್ರೀತಿ ಜಿಂಟಾ ಅವರು ಈ ಸಂದರ್ಭದಲ್ಲಿ ಗೊಂದಲಕ್ಕೀಡಾದರು.
ಹರಾಜು ಪ್ರಕ್ರಿಯೆ ನಡೆಸುತ್ತಿದ್ದ ಮಲ್ಲಿಕಾ ಸಾಗರ್, "ತಪ್ಪಾದ ಆಟಗಾರರನ್ನು ಆಯ್ಕೆ ಮಾಡಿದ್ದೀರಾ? ನಿಮಗೆ ಆಟಗಾರನು ಬೇಡವೇ?" ಎಂದು ಕೇಳಿದರು. ಶಶಾಂಕ್ ಸಿಂಗ್ ಎನ್ನುವ ಇಬ್ಬರು ಆಟಗಾರರು ಇದ್ದದ್ದು ಗೊಂದಲಕ್ಕೆ ಕಾರಣವಾಗಿತ್ತು.
ಹರಾಜು ಪ್ರಕ್ರಿಯೆ ಬಳಿಕ ಈ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿದ್ದ ಪಂಜಾಬ್ ಸಿಂಗ್ಸ್, "ಇದೇ ಶಶಾಂಕ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ನಮ್ಮ ಗುರಿಯಾಗಿತ್ತು. ಅದೇ ಹೆಸರಿನ 2 ಆಟಗಾರರು ಪಟ್ಟಿಯಲ್ಲಿದ್ದ ಕಾರಣ ಗೊಂದಲ ಉಂಟಾಗಿದೆ. ಅವರನ್ನು ಆನ್‌ಬೋರ್ಡ್‌ಗೆ ಸೇರಿಸಲು ನಾವು ಸಂತೋಷಪಡುತ್ತೇವೆ. ಮತ್ತು ಅವರು ನಮ್ಮ ಯಶಸ್ಸಿಗೆ ಕೊಡುಗೆ ನೀಡುತ್ತಾರೆ." ಎಂದು ಹೇಳಿದ್ದರು.
When you accidentally buy Shashank Singh in auction and he turns out to be a match winner pic.twitter.com/VfJeheyD5f
— Sagar (@sagarcasm) April 4, 2024
ಮತ್ತೊಮ್ಮೆ ಸ್ಪಷ್ಟನೆ ನೀಡಿದ ಪಂಜಾಬ್ ಕಿಂಗ್ಸ್
ಗುಜರಾತ್ ವಿರುದ್ದ ತಂಡವನ್ನು ಗೆಲ್ಲಿಸಿದ ಬಳಿಕ, ಅಭಿಮಾನಿಗಳು ಮೀಮ್ಸ್ ಮೂಲಕ ಶಶಾಂಕ್ ಸಿಂಗ್ ಅವರ ಹರಾಜು ಪ್ರಕ್ರಿಯೆಲ್ಲಿ ಆದ ಗೊಂದಲವನ್ನು ನೆನಪಿಸಿಕೊಂಡರು. ಗೊಂದಲದ ನಡುವೆಯೂ ಸರಿಯಾದ ಆಟಗಾರನನ್ನೇ ತಂಡಕ್ಕೆ ಆಯ್ಕೆ ಮಾಡಿದೆ, ನಿಜಕ್ಕೂ ಪಂಜಾಬ್ ಕಿಂಗ್ಸ್ ಲಕ್ಕಿ ಎಂದು ಹೇಳಿದ್ದಾರೆ.
For all of you who said Shashank Singh was a mistake from Punjab Kings to buy him at the auction! This one is for you 🙏🙏🙏#SaddaPunjab #PunjabKings #JazbaHaiPunjabi #TATAIPL2024 #GTvPBKS pic.twitter.com/cp37lCOXEH
— Punjab Kings (@PunjabKingsIPL) April 4, 2024
ಮತ್ತೊಮ್ಮೆ ಈ ಬಗ್ಗೆ ಸ್ಪಷ್ಟನೆ ನೀಡಿದ ಪಂಜಾಬ್ ಸಿಂಗ್ಸ್, ತಮಾಷೆಯ ವಿಡಿಯೋ ಮೂಲಕ ತಾವು ಇದೇ ಶಶಾಂಕ್ ಸಿಂಗ್‌ರನ್ನು ಆಯ್ಕೆ ಮಾಡಿದ್ದು ಎಂದು ಹೇಳಿದೆ.












Click it and Unblock the Notifications