ಮಾತೃಭೂಮಿಯ ಒಡನಾಟ, ಕರ್ಮಭೂಮಿಗೆ ನಿಯತ್ತು: ವಿದೇಶಿ ಕ್ರಿಕೆಟ್ ತಂಡಗಳಲ್ಲಿರುವ ಭಾರತೀಯರಿಗೆ ಪ್ರಧಾನಿ ಮೋದಿ ಮೆಚ್ಚುಗೆ
Indian-origin cricketers in foreign: ಟಿ20 ವಿಶ್ವಕಪ್ 2026 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಮೂಲದ ಹಲವು ಆಟಗಾರರು ಬೇರೆ ದೇಶಗಳನ್ನು ಪ್ರತಿನಿಧಿಸಿ ಅವರ ಜೆರ್ಸಿಯಲ್ಲಿ ಕಣಕ್ಕಿಳಿದು ಅದ್ಭುತ ಪ್ರದರ್ಶನ ತೋರುತ್ತಿರುವುದು ಗಮನ ಸೆಳೆದಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿ, ಅವರ ಆಟವನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ಯಾವೆಲ್ಲಾ ವಿದೇಶಿ ತಂಡಗಳಲ್ಲಿ ಭಾರತೀಯರಿದ್ದಾರೆ ಅಂತಲೂ ವಿವರಿಸಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಫೆಬ್ರವರಿ 22ರ ಭಾನುವಾರ ಪ್ರಸಾರವಾದ ತಮ್ಮ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 131ನೇ ಸಂಚಿಕೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದೇಶಿ ತಂಡಗಳನ್ನು ಪ್ರತಿನಿಧಿಸುತ್ತಿರುವ ಭಾರತೀಯ ಮೂಲದ ಕ್ರಿಕೆಟಿಗರನ್ನು ಶ್ಲಾಘಿಸಿದರು. ವಿಶ್ವದ ವಿವಿಧ ದೇಶಗಳಲ್ಲಿ ಭಾರತೀಯ ಮೂಲದ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇದು ಪ್ರಪಂಚದಾದ್ಯಂತ 'ಭಾರತೀಯತೆ'ಯ ಮನೋಭಾವವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.

ಕ್ರೀಡೆ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಭಾರತೀಯ ಸಂಸ್ಕೃತಿ, ಮೌಲ್ಯಗಳು ಹಾಗೂ ಪರಿಶ್ರಮದ ಮನೋಭಾವ ಎಲ್ಲೆಡೆ ಗುರುತಿಸಿಕೊಂಡಿರುವುದನ್ನು ಈ ಆಟಗಾರರು ಸಾಬೀತುಪಡಿಸುತ್ತಿದ್ದಾರೆ. ಕ್ರೀಡೆ ಕೇವಲ ಸ್ಪರ್ಧೆಯಷ್ಟೇ ಅಲ್ಲ, ಅದು ದೇಶಗಳನ್ನು ಸಂಪರ್ಕಿಸುವ ಸೇತುವೆಯೂ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಭಾರತೀಯರು ವಿಶ್ವದ ಯಾವ ಭಾಗಕ್ಕೂ ಹೋದರೂ, ತಮ್ಮ ಮಾತೃಭೂಮಿಯೊಂದಿಗೆ ಇರುವ ಆಳವಾದ ಬಂಧವನ್ನು ಕಾಪಾಡಿಕೊಂಡೇ, ತಮ್ಮ ಕರ್ಮಭೂಮಿಯ ಅಭಿವೃದ್ಧಿಗೆ ಸಂಪೂರ್ಣ ಹೃದಯದಿಂದ ಕೊಡುಗೆ ನೀಡುತ್ತಾರೆ ಎಂದು ಹೇಳಿದರು.
ಬೇರೆ ದೇಶದ ಪರ ನಿಯತ್ತಾಗಿ ಆಡುತ್ತಿರುವ ಭಾರತೀಯರು
ವಿದೇಶಗಳಲ್ಲಿ ಸಾಧನೆ ಮಾಡುತ್ತಿರುವ ಭಾರತೀಯ ಮೂಲದ ಆಟಗಾರರ ಯಶಸ್ಸು ಅವರ ವೃತ್ತಿಪರ ನಿಷ್ಠೆಯನ್ನು ಮಾತ್ರವಲ್ಲ, ತಮ್ಮ ಸಂಸ್ಕೃತಿ ಮತ್ತು ಮೂಲಗಳೊಂದಿಗೆ ಹೊಂದಿರುವ ಗಾಢವಾದ ನಂಟನ್ನೂ ಪ್ರತಿಬಿಂಬಿಸುತ್ತದೆ. ಟಿ20 ವಿಶ್ವಕಪ್ ಪಂದ್ಯ ನೋಡುತ್ತಿರುವಾಗ ನಿಮಗೆ ಒಬ್ಬ ಆಟಗಾರ ವಿಶೇಷವಾಗಿ ಗಮನ ಸೆಳೆಯಬಹುದು. ಅವರು ಧರಿಸಿರುವ ಜೆರ್ಸಿ ಬೇರೆ ದೇಶದ್ದಾಗಿರಬಹುದು. ಆದರೆ, ಅವರ ಹೆಸರನ್ನು ಕೇಳುತ್ತಿದ್ದಂತೆಯೇ, ಇವರು ನಮ್ಮ ದೇಶದವರೇ ಎಂಬ ಭಾವನೆ ಮೂಡುತ್ತದೆ. ಆ ಕ್ಷಣದಲ್ಲಿ ಒಂದು ಮನಸಿಗೆ ತುಂವಾ ಸಂತೋಷವಾಗುತ್ತದೆ. ಏಕೆಂದರೆ ಆ ಆಟಗಾರ ಭಾರತೀಯ ಮೂಲದವನಾಗಿದ್ದು, ಅವನ ಕುಟುಂಬ ನೆಲೆಸಿರುವ ದೇಶದ ಪರ ನಿಯತ್ತಾಗಿ ಆಡುತ್ತಿದ್ದಾನೆ ಅಂತಾ ಹೇಳಿದರು.
ಯಾವೆಲ್ಲಾ ತಂಡಗಳಲ್ಲಿ ಭಾರತೀಯ ಆಟಗಾರರಿದ್ದಾರೆ?
ಅವರು ತಮ್ಮ ದೇಶದ ಜೆರ್ಸಿಯನ್ನು ಧರಿಸಿ ಮೈದಾನಕ್ಕಿಳಿದು, ಆ ರಾಷ್ಟ್ರವನ್ನು ಸಂಪೂರ್ಣ ನಿಷ್ಠೆಯಿಂದ ಪ್ರತಿನಿಧಿಸುತ್ತಾರೆ. ಭಾರತೀಯ ಮೂಲದ ಆಟಗಾರರು ನ್ಯೂಜಿಲೆಂಡ್, ಯುಎಇ ಹಾಗೂ ಇಟಲಿ ತಂಡಗಳಲ್ಲಿ ಇದ್ದು, ಅಲ್ಲಿ ಅವರು ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಇಂತಹ ಅನೇಕ ಭಾರತೀಯ ಮೂಲದ ಆಟಗಾರರು ತಮ್ಮ ತಮ್ಮ ದೇಶಗಳಿಗೆ ಹೆಮ್ಮೆ ತಂದುಕೊಡುತ್ತಿದ್ದು, ಅಲ್ಲಿನ ಯುವಜನತೆಗೆ ಪ್ರೇರಣೆಯಾಗುತ್ತಿದ್ದಾರೆ ಎಂದು ಅವರು ಹೇಳಿದರು.
ಕ್ರೀಡೆಯ ಮಹತ್ವವನ್ನು ಒತ್ತಿಹೇಳಿದ ಪ್ರಧಾನಿ ಮೋದಿ ಅವರು, ಅದು ವ್ಯಕ್ತಿಯನ್ನೂ ಸಮಾಜವನ್ನೂ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. "ಆಡುವವನು ಅರಳುತ್ತಾನೆ" ಎಂದು ಹೇಳಿ, ಕ್ರೀಡೆ ಗಡಿ-ಸೀಮೆಗಳನ್ನೂ ಮೀರಿ ಜನರನ್ನು ಒಂದಾಗಿಸುವ ಶಕ್ತಿಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು.
ಕ್ರೀಡಾ ಸಾಧನೆಗಳು ಕೇವಲ ಯುವ ಕ್ರೀಡಾಪಟುಗಳಿಗೆ ಪ್ರೇರಣೆ ನೀಡುವುದಲ್ಲ, ರಾಷ್ಟ್ರಗಳ ನಡುವಿನ ಭಾವನಾತ್ಮಕ ಬಂಧಗಳನ್ನು ಮತ್ತಷ್ಟು ಬಲಪಡಿಸುತ್ತವೆ. ಸಾಮಾನ್ಯ ಆಸಕ್ತಿ ಮತ್ತು ಉತ್ಸಾಹದ ಮೂಲಕ ಏಕತೆಯನ್ನು ಬಲಪಡಿಸುವಲ್ಲಿ ಕ್ರೀಡೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.
ಮಾತೃಭೂಮಿಯೊಂದ ಸಂಪರ್ಕ, ಕರ್ಮಭೂಮಿಗೆ ಉತ್ತಮ ಕೊಡುಗೆ
ಭಾರತೀಯರು ಯಾವ ದೇಶಕ್ಕೂ ತೆರಳಿದರೂ ತಮ್ಮ ಮಾತೃಭೂಮಿಯೊಂದಿಗೆ ಉತ್ತಮ ಸಂಪರ್ಕವನ್ನು ಉಳಿಸಿಕೊಂಡೇ ಇರುತ್ತಾರೆ. ಜೊತೆಗೆ, ತಮ್ಮ ಕರ್ಮಭೂಮಿಯ ಅಭಿವೃದ್ಧಿಗೆ ಸಹ ಉತ್ತಮ ಕೊಡುಗೆ ನೀಡುತ್ತಾರೆ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.












Click it and Unblock the Notifications