T20 World Cup: ಮೊದಲ ಪಂದ್ಯದಲ್ಲೇ ಭಾರತಕ್ಕೆ ಹೀನಾಯ ಸೋಲು
ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಶುಕ್ರವಾರ ಮೊದಲ ಪಂದ್ಯವನ್ನಾಡಿದ ಭಾರತಕ್ಕೆ ಸೋಲಿನ ಆಘಾತ ಸಿಕ್ಕಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 58 ರನ್‌ಗಳಿಂದ ಸೋಲನುಭವಿಸಿದೆ. ಭಾರಿ ನಿರೀಕ್ಷೆಗಳೊಂದಿಗೆ ಕಣಕ್ಕಿಳಿದ ಹರ್ಮನ್‌ಪ್ರೀತ್ ಕೌರ್ ಪಡೆ, ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ವಿಭಾಗದಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು.
ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ನಾಯಕಿ ಸೋಫಿ ಡಿವೈನ್ ಅಮೋಘ ಅರ್ಧಶತಕ ಸಿಡಿಸುವ ಮೂಲಕ ಮಿಂಚಿದರು. ಸುಜಿ ಬೇಟ್ಸ್ 27 ರನ್ ಗಳಿಸಿದರೆ, ಜಾರ್ಜಿಯಾ ಪ್ಲಿಮ್ಮರ್ 34 ರನ್ ಗಳಿಸಿದರು, ಸೋಫಿ ಡಿವೈನ್ 36 ಎಸೆತಗಳಲ್ಲಿ ಅಜೇಯ 57 ರನ್ ಗಳಿಸಿ ಮಿಂಚಿದರು. ಅಂತಿಮವಾಗಿ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು.

ರೇಣುಕಾಸಿಂಗ್ ಠಾಕೂರ್ 2 ವಿಕೆಟ್ ಪಡೆದರೆ, ಅರುಂಧತಿ ರಾಯ್ ಮತ್ತು ಆಶಾ ಶೋಭನಾ ತಲಾ 1 ವಿಕೆಟ್ ಪಡೆದರು. ಭಾರತ ತಂಡವು ನಿರೀಕ್ಷೆಗೆ ತಕ್ಕಂತೆ ಫೀಲ್ಡಿಂಗ್ ಮಾಡದೇ ಇರುವುದು ದೊಡ್ಡ ಹೊಡೆತ ಕೊಟ್ಟಿತು. ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು, ಸುಲಭವಾಗಿ ರನ್ ಗಳಿಸಲು ಅವಕಾಶ ಮಾಡಿಕೊಟ್ಟಿದ್ದು, ದುಬಾರಿಯಾಗಿ ಪರಿಣಮಿಸಿತು.
ಬ್ಯಾಟಿಂಗ್‌ನಲ್ಲೂ ವೈಫಲ್ಯ
161 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತ 19 ಓವರ್ ಗಳಲ್ಲಿ 102 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ 15 ರನ್ ಗಳಿಸಿದ್ದೇ ಭಾರತ ಬ್ಯಾಟರ್ ಗಳಲ್ಲಿ ಗಳಿಸಿದ ಹೆಚ್ಚು ಸ್ಕೋರ್ ಆಗಿದೆ. ಸ್ಮೃತಿ ಮಂಧಾನ 12 ರನ್, ಶಫಾಲಿ ವರ್ಮಾ 2 ರನ್, ಜೆಮಿಮಾ ರೋಡ್ರಿಗಸ್ 13 ರನ್, ರಿಚಾ ಘೋಷ್ 12 ರನ್, ದೀಪ್ತಿ ಶರ್ಮಾ 13 ರನ್ ಗಳಿಸಿದರು.
ನ್ಯೂಜಿಲೆಂಡ್ ಪರವಾಗಿ ರೋಸ್‌ಮ್ಯಾರಿ ಮಾಯರ್ 4 ಓವರ್ ಗಳಲ್ಲಿ 19 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದರು. ಲೀ ತಹುಹು 4 ಓವರ್ ಗಳಲ್ಲಿ 13 ರನ್ ನೀಡಿ 3 ವಿಕೆಟ್ ಪಡೆದುಕೊಂಡರು, ಎಡೆನ್ ಕಾರ್ಸನ್ 2 ವಿಕೆಟ್ ಪಡೆದರೆ, ಅಮೆಲಿಯಾ ಕೆರ್ 1 ವಿಕೆಟ್ ಪಡೆದರು.
ಮೊದಲ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಸೋತ ಬಳಿಕ ಭಾರತಕ್ಕೆ ಸೆಮಿಫೈನಲ್ ತಲುಪಲು ಮುಂದಿನ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ. ಮುಂದಿನ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಅಕ್ಟೋಬರ್ 6 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.












Click it and Unblock the Notifications