Nepal: 20 ಓವರ್ 314 ರನ್, 9 ಎಸೆತ 50 ರನ್ : ಯುವರಾಜ್, ರೋಹಿತ್ ದಾಖಲೆ ಮುರಿದ ನೇಪಾಳ ಆಟಗಾರರು
ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಪುರುಷರ ಮೊದಲ ಕ್ರಿಕೆಟ್ ಪಂದ್ಯದಲ್ಲಿ ನೇಪಾಳ ತಂಡ ಹಲವು ವಿಶ್ವ ದಾಖಲೆಗಳನ್ನು ಬರೆದಿದೆ. ಈ ಮೂಲಕ ರೋಹಿತ್ ಶರ್ಮಾ, ಯುವರಾಜ್ ಸಿಂಗ್ ಅವರ ಹಳೆಯ ದಾಖಲೆಗಳನ್ನು ಕೂಡ ನೇಪಾಳ ಬ್ಯಾಟರ್ ಗಳು ಮುರಿದುಹಾಕಿದ್ದಾರೆ.
ಚೀನಾದ ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮಂಗೋಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಮಂಗೋಲಿಯಾದ ಟಾಸ್ ಗೆದ್ದ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. ಆರಂಭಿಕರಾದ ಕುಶಾಲ್ ಭುರ್ತೆಲ್ 19 ರನ್, ಆಸಿಫ್ ಶೇಕ್ 16 ರನ್ ಗಳಿಸಿ ಔಟಾದರು.

ನಂತರ ಬಂದ ಕುಶಾಲ್ ಮಲ್ಲ ಮತ್ತು ನಾಯಕ ರೋಹಿತ್ ಪೌದೆಲ್ ಮಂಗೋಲಿಯಾ ಬೌಲರ್ ಗಳಿಗೆ ಸಿಂಹಸ್ವಪ್ನವಾದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಇಬ್ಬರೂ ಬ್ಯಾಟರ್ ಗಳು ಬೃಹತ್ ಮೊತ್ತದತ್ತ ತಂಡವನ್ನು ಕರೆದೊಯ್ದರು. ರೋಹಿತ್ 27 ಎಸೆತಗಳಲ್ಲಿ 2 ಬೌಂಡರಿ 6 ಸಿಕ್ಸರ್ ಸಹಿತ 61 ರನ್ ಗಳಿಸಿ ಔಟಾದರು.
ರೋಹಿತ್ ಶರ್ಮಾ ದಾಖಲೆ ಮುರಿದ ಕುಶಾಲ್
ನೇಪಾಳ ತಂಡ ಪ್ರಮುಖ ಬ್ಯಾಟರ್ ಕುಶಾಲ್ ಮಲ್ಲ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಕೇವಲ 34 ಎಸೆತಗಳಲ್ಲಿ ಶತಕವನ್ನು ಬಾರಿಸುವ ಮೂಲಕ ಭಾರತದ ರೋಹಿತ್ ಶರ್ಮಾ ಅವರ ದಾಖಲೆಯನ್ನು ಮುರಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ ಬಾರಿಸಿದ ಆಟಗಾರ ಎನ್ನುವ ಖ್ಯಾತಿಗೆ ಕುಶಾಲ್ ಮಲ್ಲ ಪಾತ್ರರಾದರು. ರೋಹಿತ್ ಶರ್ಮಾ 35 ಎಸೆತಗಳಲ್ಲಿ ಶತಕ ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು. 50 ಎಸೆತಗಳಲ್ಲಿ 8 ಬೌಂಡರಿ 12 ಸಿಕ್ಸರ್ ಸಹಿತ ಅಜೇಯ 137 ರನ್ ಗಳಿಸಿ ತಂಡ ಬೃಹತ್ ಮೊತ್ತ ಗಳಿಸಲು ಕಾರಣವಾದರು.
ಯುವರಾಜ್ ಸಿಂಗ್ ದಾಖಲೆ ಮುರಿದ ದೀಪೇಂದ್ರ ಸಿಂಗ್
ರೋಹಿತ್ ಪೌದೆಲ್ ಔಟಾದ ನಂತರ ಕಣಕ್ಕಿಳಿದ ದೀಪೇಂದ್ರ ಸಿಂಗ್ ಹೊಸ ದಾಖಲೆಗಳನ್ನು ಬರೆದರು. ಕೇವಲ 9 ಎಸೆತಗಳಲ್ಲಿ ತಮ್ಮ ಅರ್ಧಶತಕ ಗಳಿಸುವ ಮೂಲಕ 2007ರಲ್ಲಿ ಯುವರಾಜ್ ಸಿಂಗ್ ಬರೆದಿದ್ದ ದಾಖಲೆಯನ್ನು ಮುರಿದರು. 2007ರ ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದು ಈವರೆಗಿನ ವೇಗದ ಅರ್ಧಶತಕ ಎನ್ನುವ ದಾಖಲೆ ಹೊಂದಿತ್ತು. ದೀಪೇಂದ್ರ ಸಿಂಗ್ ಕೇವಲ 10 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿ ಮಿಂಚಿದರು. ಒಂದೂ ಬೌಂಡರಿಯನ್ನು ಬಾರಿಸದೆ, 8 ಸಿಕ್ಸರ್ ಗಳನ್ನು ಬಾರಿಸುವ ಮೂಲಕ ಮತ್ತೊಂದು ಅಪರೂಪದ ದಾಖಲೆ ನಿರ್ಮಿಸಿದರು.
ವಿಶ್ವದಾಖಲೆಯ ಮೊತ್ತ
ನೇಪಾಳ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 314 ರನ್ ಕಲೆಹಾಕಿತು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 300 ಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ತಂಡ ಎನ್ನುವ ದಾಖಲೆ ಬರೆಯಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಮಂಗೋಲಿಯಾ ಕೇವಲ 41 ರನ್‌ಗಳಿಗೆ ಆಲೌಟ್ ಆಯಿತು. ನೇಪಾಳ 273 ರನ್‌ಗಳ ಅಂತರದಲ್ಲಿ ಜಯ ಸಾಧಿಸಿದ್ದು, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇದು ದೊಡ್ಡ ಗೆಲುವು ಎನ್ನುವ ದಾಖಲೆ ನಿರ್ಮಾಣವಾಯಿತು.












Click it and Unblock the Notifications