Virat Kohli: ಆರ್‌ಸಿಬಿ ಅಭಿಮಾನಿಗಳಿಗೆ ಜೊತೆಯಾದ ಬಿಳಿ ಪಾರಿವಾಳಗಳು! ವಿರಾಟ್ ಕೊಹ್ಲಿಗೆ ವಿಶೇಷ ಗೌರವ
ಭಾರತ ಟೆಸ್ಟ್ ತಂಡದ ಯಶಸ್ವೀ ನಾಯಕ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ವಿದಾಯ ಹೇಳಿದ ಬಳಿಕ ಶುಕ್ರವಾರ ಮೊದಲ ಬಾರಿಗೆ ಐಪಿಎಲ್ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದರೂ ಮಳೆ ಅದಕ್ಕೆ ಅವಕಾಶ ನೀಡಲಿಲ್ಲ. ಆದರೂ ಆರ್ ಸಿಬಿ ಅಭಿಮಾನಿಗಳ ಉತ್ಸಾಹವೇನೂ ಕಡಿಮೆ ಇರಲಿಲ್ಲ.
ವಿರಾಟ್ ಕೊಹ್ಲಿಗೆ ವಿದಾಯ ಟೆಸ್ಟ್ ಕೂಡ ಸಿಗದ ಕಾರಣ ಐಪಿಎಲ್ ಪಂದ್ಯದಲ್ಲೇ ಅವರಿಗೆ ವಿಶೇಷ ಗೌರವ ಸಲ್ಲಿಸಲು ಅಭಿಮಾನಿಗಳು ನಿರ್ಧರಿಸಿದ್ದರು. ವಿರಾಟ್ ಕೊಹ್ಲಿ ಟೆಸ್ಟ್ ಜೆರ್ಸಿಯನ್ನು ತೊಟ್ಟು ಮೈದಾನಕ್ಕೆ ಆಗಮಿಸಿದ್ದ ಸಾವಿರಾರು ಅಭಿಮಾನಿಗಳು ಪಂದ್ಯ ಆರಂಭವಾಗುತ್ತದೆ ಎಂದು ತಾಳ್ಮೆಯಿಂದ ಕಾದರು. ಆದರೂ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪಂದ್ಯ ಆರಂಭವಾಗಲು ಅವಕಾಶವನ್ನೇ ನೀಡಲಿಲ್ಲ.

ಪಾರಿವಾಳಗಳಿಗಂದಲೂ ಗೌರವ!
ಇನ್ನು ಅಭಿಮಾನಿಗಳು ಬಿಳಿ ಜೆರ್ಸಿಯಲ್ಲಿ ಕೊಹ್ಲಿಗೆ ಗೌರವ ಸಲ್ಲಿಸಲು ಬಂದಿದ್ದರೆ. ಇದೇ ಸಂದರ್ಭದಲ್ಲಿ ವಿಶೇಷ ಎನ್ನುವಂತೆ ಎರಡು ಗುಂಪುಗಳಲ್ಲಿ ಬಿಳಿ ಪಾರಿವಾಗಳು ಸಾಕಷ್ಟು ಹೊತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಮೇಲೆ ಹಾರಾಡಿದವು. ಇದನ್ನು ನೋಡಿದ ಅಭಿಮಾನಿಗಳು ಪ್ರಕೃತಿ ಕೂಡ ವಿರಾಟ್ ಕೊಹ್ಲಿಗೆ ಗೌರವ ಸಲ್ಲಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪಾರಿವಾಳಗಳು ಹಾರುತ್ತಿರುವ ವಿಡಿಯೋವನ್ನು ಹಲವು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇದು ಆಕಸ್ಮಿಕ ಘಟನೆಯೇ ಆಗಿದ್ದರೂ ಅಭಿಮಾನಿಗಳಿಗೆ ಪಾಲಿಗೆ ಇದೊಂದು ವಿಶೇಷ ಸಂದರ್ಭ ಎಂದೇ ಹೇಳಬಹುದು.
ಮಳೆಯಿಂದಾಗಿ ಪಂದ್ಯ ರದ್ದು
ಭಾರಿ ಮಳೆಯಿಂದಾಗಿ ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಆರ್ ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ ರದ್ದಾಗಿದೆ. ರಾತ್ರಿ 10 ಗಂಟೆಯಾದರೂ ಮಳೆ ನಿಲ್ಲದ ಕಾರಣ ಪಂದ್ಯವನ್ನು ರದ್ದುಗೊಳಿಸಿದ್ದು ಎರಡೂ ತಂಡಗಳಿಗೆ ಒಂದೊಂದು ಪಾಯಿಂಟ್ ಹಂಚಿಕೆ ಮಾಡಲಾಗಿದೆ.
ಪಂದ್ಯ ರದ್ದುಗೊಂಡಿದ್ದರಿಂದ ಹಾಲಿ ಚಾಂಪಿಯನ್ ಕೆಕೆಆರ್ ಐಪಿಎಲ್ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ. ಆರ್ ಸಿಬಿ 17 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಆರ್ ಸಿಬಿ ತಾನು ಆಡಲಿರುವ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದರೂ ಪ್ಲೇಆಫ್ ಸ್ಥಾನ ಖಚಿತವಾಗಲಿದೆ.
ವಿರಾಟ್ ಕೊಹ್ಲಿಗೆ ವಿಶೇಷ ಗೌರವ ನೀಡಲು ಬಂದಿದ್ದ ಅಭಿಮಾನಿಗಳಿಗೆ ಅವರ ಬ್ಯಾಟಿಂಗ್ ನೋಡಲು ಅವಕಾಶ ಸಿಗದೇ ಇರುವುದು ಬೇಸರಕ್ಕೆ ಕಾರಣವಾಗಿದೆ. ಆದರೂ ಮೇ 23ರಂದು ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಮಳೆ ಅಡ್ಡಿಯಾಗದಿರಲಿ, ಆರ್ ಸಿಬಿ ಈ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿ ಪ್ಲೇಆಫ್ ತಲುಪಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.












Click it and Unblock the Notifications