ಆರ್‌ಸಿಬಿ ವಿರುದ್ಧ ಶತಕ ಸಿಡಿಸಿದ ಬೆನ್ನಲ್ಲೇ ನ್ಯಾಟ್ ಸಿವರ್-ಬ್ರಂಟ್ ಆಸಕ್ತಿದಾಯಕ ವೈಯಕ್ತಿಕ ವಿಚಾರ ಭಾರೀ ವೈರಲ್
Nat Sciver-Brunt Life: ಮುಂಬೈ ಇಂಡಿಯನ್ಸ್ ಸ್ಟಾರ್ ಆಲ್‌ರೌಂಡರ್ ನ್ಯಾಟ್ ಸಿವರ್-ಬ್ರಂಟ್ ಅವರು ಡಬ್ಲ್ಯೂಪಿಎಲ್ ಇತಿಹಾಸದಲ್ಲೇ ಚೊಚ್ಚಲ ಶತಕ ಸಿಡಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಈ ವಿಶಿಷ್ಟ ದಾಖಲೆಯನ್ನು ಮಾಡಿದ್ದಾರೆ. ಇದರ ಬೆನ್ನಲ್ಲೇ ಬ್ರಂಟ್ ವೈಯಕ್ತಿಯ ಜೀವನ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ನ್ಯಾಟ್ ಸಿವರ್-ಬ್ರಂಟ್ ಅವರು ಆರ್‌ಸಿಬಿ ವಿರುದ್ಧ ಶತಕ ಸಿಡಿಸುವ ಮೂಲಕ, ಡಬ್ಲುಪಿಎಲ್‌ನಲ್ಲಿ ಶತಕ ಬಾರಿಸಿದ ಮೊದಲ ಮಹಿಳಾ ಬ್ಯಾಟರ್ ಎಂಬ ಅಪರೂಪದ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಅವರ ಈ ಸ್ಫೋಟಕ ಇನಿಂಗ್ಸ್ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ಅವರ ವೈಯಕ್ತಿಯ ಜೀವನದ ಬಗ್ಗೆ ಕುತೂಹಲಕಾರಿ ವಿಚಾರವೊಂಡು ಸಖತ್ ಸೌಂಡ್ ಮಾಡುತ್ತಿದೆ.

ಕ್ರಿಕೆಟ್ ಸಾಧನೆಗಳ ಜೊತೆಗೆ ನ್ಯಾಟ್ ಸಿವರ್-ಬ್ರಂಟ್ ಅವರ ವೈಯಕ್ತಿಕ ಜೀವನವೂ ಕೂಡ ಗಮನ ಸೆಳೆಯುತ್ತಿದೆ. ಇಂಗ್ಲೆಂಡ್‌ನ ಸ್ಟಾರ್ ಆಟಗಾರ್ತಿಯಾದ ಅವರು 1992ರ ಆಗಸ್ಟ್ 20ರಂದು ಜಪಾನ್‌ನ ಟೋಕಿಯೋದಲ್ಲಿ ಜನಿಸಿದರು. ಅವರ ತಂದೆ ಉದ್ಯಮಿ ಆಗಿದ್ದು, ಬಾಲ್ಯದ ಕೆಲ ವರ್ಷಗಳನ್ನು ಅವರು ಪೊಲ್ಯಾಂಡ್‌ನಲ್ಲಿ ಕಳೆದಿದ್ದಾರೆ. ನಂತರ ನೆದರ್‌ಲ್ಯಾಂಡ್‌ನಲ್ಲಿ ವಾಸಿಸುವ ವೇಳೆ ಫುಟ್‌ಬಾಲ್ ಮತ್ತು ಬಾಸ್ಕೆಟ್‌ಬಾಲ್ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿದ್ದರು.
ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು ಯಾವಾಗ?: ಇಂಗ್ಲೆಂಡ್‌ನ ಸರ್ರೆ ರಾಜ್ಯದ ಎಪ್ಸಮ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದಾಗಲೇ ಕ್ರಿಕೆಟ್‌ನತ್ತ ಗಮನಹರಿಸಿದರು. 2007ರಿಂದ 2011ರ ವರೆಗೆ ಇದೇ ಕಾಲೇಜಿನಲ್ಲಿ ಓದುತ್ತಿದ್ದ ಸಮಯದಲ್ಲೇ ಅವರು, ಕ್ರಿಕೆಟ್‌ನಲ್ಲಿ ತಮ್ಮ ಕೌಶಲ್ಯವನ್ನು ಬೆಳೆಸಿದರು. 2013ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.
ನ್ಯಾಟ್ ಸಿವರ್-ಬ್ರಂಟ್ ತಮ್ಮ ವೃತ್ತಿಜೀವನದಲ್ಲಿ ಹಲವು ವಿಶೇಷ ದಾಖಲೆಗಳನ್ನು ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ-20 ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಇಂಗ್ಲಿಷ್ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಸದ್ಯ 33 ವರ್ಷ ವಯಸ್ಸಿನಲ್ಲಿರುವ ಅವರು ವಿಶ್ವ ಕ್ರಿಕೆಟ್‌ನ ಪ್ರಮುಖ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಸಹ ಆಟಗಾರ್ತಿಯೊಂದಿಗೆ ವಿವಾಹ: ವೈಯಕ್ತಿಕ ಜೀವನದ ವಿಚಾರಕ್ಕೆ ಬಂದರೆ, ಇಂಗ್ಲೆಂಡ್ ತಂಡದಲ್ಲೇ ಸಹ ಆಟಗಾರ್ತಿ ಆಗಿದ್ದ ಕ್ಯಾಥರಿನ್ ಬ್ರಂಟ್ ಅವರೊಂದಿಗೆ ನ್ಯಾಟ್ ಸಿವರ್ ಬ್ರಂಟ್ ಅವರ ಸ್ನೇಹ ಪ್ರೀತಿಗೆ ತಿರುಗಿತು. 2019ರ ಅಕ್ಟೋಬರ್‌ನಲ್ಲಿ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಘೋಷಿಸಿದ ಅವರು, ಅದೇ ವರ್ಷ ನಿಶ್ಚಿತಾರ್ಥ ಮಾಡಿಕೊಂಡರು. 2020ರಲ್ಲಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದರೂ, ಕೊರೊನಾ ಮಹಾಮಾರಿ ಕಾರಣದಿಂದ ವಿವಾಹವನ್ನು ಮುಂದೂಡಬೇಕಾಯಿತು.
ಬಳಿಕ 2022ರ ಮೇ ತಿಂಗಳಲ್ಲಿ ನ್ಯಾಟ್ ಸಿವರ್ ಮತ್ತು ಕ್ಯಾಥರಿನ್ ಬ್ರಂಟ್ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ಒಂದು ಮಗುವನ್ನೂ ಕೂಡ ಹೊಂದಿದ್ದಾರೆ. ಮದುವೆಯ ಬಳಿಕ ಇಬ್ಬರೂ ತಮ್ಮ ಹೆಸರಿನ ಕೊನೆಯಲ್ಲಿ "ಸಿವರ್ ಬ್ರಂಟ್" ಎಂಬ ಸರ್ ನೇಮ್ ಅನ್ನು ಬಳಸಲು ಆರಂಭಿಸಿದರು. ಈ ನಡುವೆ ಕ್ಯಾಥರಿನ್ ಬ್ರಂಟ್ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದರು.
ಮದುವೆ ಆದ ಬಳಿಕವೂ ಈ ಜೋಡಿ ಸಾಮಾಜಿಕವಾಗಿ ಸಾಕಷ್ಟು ಗಮನ ಸೆಳೆದಿದೆ. 2024ರ ಸೆಪ್ಟೆಂಬರ್ 20ರಂದು ಕ್ಯಾಥರಿನ್ ಗರ್ಭಿಣಿ ಆಗಿರುವ ವಿಷಯವನ್ನು ದಂಪತಿ ಅಧಿಕೃತವಾಗಿ ಹಂಚಿಕೊಂಡಿದ್ದರು. ನಂತರ 2025ರ ಮಾರ್ಚ್‌ನಲ್ಲಿ ಅವರಿಗೆ ಸುಂದರವಾದ ಗಂಡು ಮಗು ಜನಿಸಿದೆ. ಸದ್ಯ ನ್ಯಾಟ್ ಸಿವರ್-ಬ್ರಂಟ್ ಮತ್ತು ಕ್ಯಾಥರಿನ್ ಬ್ರಂಟ್ ಕುಟುಂಬ ಜೀವನವನ್ನು ಸಂತೋಷದಿಂದ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಒಟ್ಟಿನಲ್ಲಿ ಆರ್‌ಸಿಬಿ ವಿರುದ್ಧ ಶತಕ ಸಿಡಿಸುವ ಮೂಲಕ ಡಬ್ಲ್ಯೂಪಿಎಲ್ ಇತಿಹಾಸದಲ್ಲೇ ಮೊದಲ ಶತಕ ಸಾಧನೆ ಮಾಡಿದ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.












Click it and Unblock the Notifications