MI vs RR: ರಾಜಸ್ಥಾನದ ಪ್ಲೇಆಫ್ ಕನಸು ಅಂತ್ಯ; ಅಗ್ರಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
ಐಪಿಎಲ್ 2025ರ ಆವೃತ್ತಿಯಲ್ಲಿ ಮೊದಲ 5 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಮಾತ್ರ ಗೆದ್ದಿದ್ದ ಮುಂಬೈ ಇಂಡಿಯನ್ಸ್ ಬಳಿಕ ಸತತವಾಗಿ 6 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಪ್ಲೇಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ಗುರುವಾರ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 100 ರನ್‌ಗಳ ಭಾರಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಅಮೋಘ ಗೆಲುವು ಸಾಧಿಸಿದ್ದ ರಾಜಸ್ಥಾನ ರಾಯಲ್ಸ್ ಮುಂಬೈ ಇಂಡಿಯನ್ಸ್ ಅಬ್ಬರದ ಎದುರು ಶರಣಾಯಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ವೈಭವ್ ಸೂರ್ಯವಂಶಿ ಮುಂಬೈ ಇಂಡಿಯನ್ಸ್ ವಿರುದ್ಧ ಸೊನ್ನೆಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

ಬೃಹತ್ ಮೊತ್ತ ಕಲೆಹಾಕಿದ ಮುಂಬೈ ಇಂಡಿಯನ್ಸ್
ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 217 ರನ್ ಕಲೆಹಾಕಿತು. ರೋಹಿತ್ ಶರ್ಮಾ ಮತ್ತು ರಿಯಾನ್ ರಿಕಲ್ಟನ್ ಇಬ್ಬರೂ ಅರ್ಧಶತಕ ಬಾರಿಸುವ ಮೂಲಕ ಮುಂಬೈ ಇಂಡಿಯನ್ಸ್‌ಗೆ ಭರ್ಜರಿ ಆರಂಭ ಒದಗಿಸಿದರು.
ರಿಕಲ್ಟನ್ 38 ಎಸೆತಗಳಲ್ಲಿ 61 ರನ್ ಗಳಿಸಿದರೆ, ರೋಹಿತ್ ಶರ್ಮಾ 36 ಎಸೆತಗಳಲ್ಲಿ 53 ರನ್ ಗಳಿಸಿದರು. ಬಳಿಕ ಬಂದ ಸೂರ್ಯಕುಮಾರ್ ಯಾದವ್ 23 ಎಸೆತಗಳಲ್ಲಿ ಅಜೇಯ 48 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ ಕೂಡ 23 ಎಸೆತಗಳಲ್ಲಿ 48 ರನ್ ಗಳಿಸಿ ಮಿಂಚಿದರು.
ಮುಂಬೈ ಬೌಲಿಂಗ್ ದಾಳಿಗೆ ಹೆದರಿದ ರಾಜಸ್ಥಾನ
ಕಳೆದ ಪಂದ್ಯದಲ್ಲಿ 15.5 ಓವರ್ ಗಳಲ್ಲೇ 210 ರನ್‌ಗಳನ್ನು ಚೇಸ್ ಮಾಡಿದ್ದ ರಾಜಸ್ಥಾನ ರಾಯಲ್ಸ್ ಇಂದೂ ಅದನ್ನೇ ಮರುಕಳಿಸುವ ವಿಶ್ವಾಸದಲ್ಲಿ ಕಣಕ್ಕಿಳಿಯಿತು. ಆದರೆ ಮುಂಬೈ ಇಂಡಿಯನ್ಸ್ ಮಾರಕ ಬೌಲಿಂಗ್ ಮುಂದೆ ರಾಜಸ್ಥಾನ ರಾಯಲ್ಸ್ ಬ್ಯಾಟರ್ ಗಳು ಹೆಚ್ಚು ಹೊತ್ತು ನಿಲ್ಲಲು ಆಗಲಿಲ್ಲ. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ವೈಭವ್ ಸೂರ್ಯವಂಶಿ ಸೊನ್ನೆಗೆ ಔಟಾದರೆ, ಯಶಸ್ವಿ ಜೈಸ್ವಾಲ್ 13 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.
ಜೋಫ್ರಾ ಆರ್ಚರ್ 30 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ 20 ರನ್ ಕೂಡ ಗಳಿಸಲಿಲ್ಲ. 16.1 ಓವರ್ ಗಳಲ್ಲಿ 117 ರನ್ ಗಳಿಸುವಲ್ಲಿ ರಾಜಸ್ಥಾನ ರಾಯಲ್ಸ್ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. 100 ರನ್‌ಗಳ ಭಾರಿ ಗೆಲುವಿನ ಮೂಲಕ ಮುಂಬೈ ಇಂಡಿಯನ್ಸ್ ರನ್‌ರೇಟ್ ಭರ್ಜರಿಯಾಗಿ ಏರಿಕೆಯಾಗಿದ್ದು, ಸದ್ಯ ಅಂಕಪಟ್ಟಿಯಲ್ಲಿ ಆರ್ ಸಿಬಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದರು.












Click it and Unblock the Notifications