CSK vs KKR: ಧೋನಿ ನಾಯಕತ್ವದಲ್ಲಿ ಕೆಟ್ಟ ದಾಖಲೆ ಬರೆದ ಸಿಎಸ್‌ಕೆ
ಐಪಿಎಲ್ 2025ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಗ್ರಹಚಾರವೇ ಸರಿಯಿಲ್ಲದಂತಾಗಿದೆ. ಆಡಿದ 5 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದು 4 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ಬಳಿಕ ನಾಯಕ ರುತುರಾಜ್ ಗಾಯಕ್ವಾಡ್ ಗಾಯದ ಸಮಸ್ಯೆಯಿಂದ ಪಂದ್ಯಾವಳಿಯಿಂದಲೇ ಹೊರಬಿದ್ದಿದ್ದು ಎಂಎಸ್ ಧೋನಿ ಮತ್ತೆ ನಾಯಕತ್ವ ವಹಿಸಿಕೊಂಡಿದ್ದಾರೆ.
ಎಂಎಸ್ ಧೋನಿ ನಾಯಕರಾಗಿ ವಾಪಸಾದ ಬಳಿಕ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿತ್ತು. ಇನ್ನಾದರೂ ತಂಡವು ಸೋಲಿನ ಸರಣಿಯನ್ನು ಮುರಿದು ಗೆಲುವಿನ ಹಳಿಗೆ ಮರಳುತ್ತದೆ ಎಂದು ನಿರೀಕ್ಷೆ ಮಾಡಿದ್ದರು. ಆದರೆ ಶುಕ್ರವಾರ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ ತಂಡ ಈ ಆವೃತ್ತಿಯಲ್ಲಿ ಮತ್ತಷ್ಟು ಹೀನಾಯ ಪ್ರದರ್ಶನ ನೀಡಿದೆ.

ಸಿಎಸ್‌ಕೆ ನಾಯಕನಾಗಿ ಧೋನಿ ಅವರ ಪುನರಾಗಮನ ಪಂದ್ಯದಲ್ಲೇ ಐದು ಬಾರಿಯ ಚಾಂಪಿಯನ್ ತಂಡ ಹಲವು ಕೆಟ್ಟ ದಾಖಲೆಗಳನ್ನು ಬರೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 103 ಕಲೆಹಾಕಿದೆ. ಇದು ಅವರ ಮೂರನೇ ಕಡಿಮೆ ಮೊತ್ತವಾಗಿದೆ.
ಕಳೆದ ನಾಲ್ಕು ಪಂದ್ಯಗಳಲ್ಲಿ ಸಿಎಸ್‌ಕೆ ಚೇಸಿಂಗ್ ಮಾಡುವಾಗ ಸೋಲು ಕಂಡಿತ್ತು. ಈಗ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕ ಕಾರಣ ಬೃಹತ್ ಮೊತ್ತ ಕಲೆಹಾಕಿ ಅದನ್ನು ಡಿಫೆಂಡ್ ಮಾಡಿಕೊಳ್ಳುವ ಉತ್ಸಾಹದಲ್ಲಿತ್ತು. ಆದರೆ ಕೆಕೆಆರ್ ತಂಡದ ಬೌಲಿಂಗ್ ದಾಳಿ ಎದುರು ಸಿಎಸ್‌ಕೆ ಬ್ಯಾಟರ್ ಗಳು ಥರಗುಟ್ಟಿದರು.
16 ರನ್ ಗಳಿಸಿದ್ದಾಗಲೇ ಡಿವೊನ್ ಕಾನ್ವೆ ಮತ್ತು ರಚಿನ್ ರವೀಂದ್ರ ಔಟಾದರು. ಬಳಿಕ ಬಂದ ವಿಜಯ್ ಶಂಕರ್ ಎರಡು ಬಾರಿ ಜೀವದಾನ ಪಡೆದರೂ ದೊಡ್ಡ ಮೊತ್ತ ಕಲೆಹಾಕಲಿಲ್ಲ 21 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ವಿಜಯ್ ಶಂಕರ್ ಔಟಾಗುತ್ತಿದ್ದಂತೆ ಸಿಎಸ್‌ಕೆ ತಂಡದ ಪತನ ಆರಂಭವಾಯಿತು.
59/2 ವಿಕೆಟ್ ಕಳೆದುಕೊಂಡಿದ್ದ ಸಿಎಸ್‌ಕೆ ಬಳಿಕ 79 ರನ್ ಗಳಿಸುವಷ್ಟರಲ್ಲಿ 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಶಿವಂ ದುಬೆ 29 ಎಸೆತಗಳಲ್ಲಿ 31 ರನ್ ಗಳಿಸಿ ಸಿಎಸ್‌ಕೆ ಮೊತ್ತ 100 ರ ಗಡಿ ದಾಟುವಂತೆ ನೋಡಿಕೊಂಡರು. ರವಿಚಂದ್ರನ್ ಅಶ್ವಿನ್ ಅವರನ್ನು 5ನೇ ಕ್ರಮಾಂಕದಲ್ಲಿ ಕಳುಹಿಸುವ ನಿರ್ಧಾರ ಅಚ್ಚರಿ ಮೂಡಿಸಿತ್ತು, ಸ್ಪಿನ್ನರ್‌ಗಳನ್ನು ಎದುರಿಸಲು ರಣತಂತ್ರ ರೂಪಿಸಿದರು ಅದು ಫಲ ಕೊಡಲಿಲ್ಲ.
ನಾಯಕನಾಗಿ ಬ್ಯಾಟಿಂಗ್‌ಗೆ ಬಂದ ಎಂಎಸ್ ಧೋನಿ ಕೇವಲ 1 ರನ್ ಗಳಿಸಿ ಔಟಾದರು. ಜಡೇಜಾ ಮತ್ತು ದೀಪಕ್ ಹೂಡಾ ರನ್ ಗಳಿಸುವ ಮುನ್ನವೇ ವಿಕೆಟ್ ಒಪ್ಪಿಸಿದರು. ಸಿಎಸ್‌ಕೆ ತಂಡ ಆರು ಬ್ಯಾಟರ್ ಗಳು ಸ್ಪಿನ್ ಬೌಲರ್ ಗಳಿಗೆ ವಿಕೆಟ್ ಒಪ್ಪಿಸಿದರು. ಸುನಿಲ್ ನರೈನ್ 4 ಓವರ್ ಗಳಲ್ಲಿ 13 ರನ್ ಮಾತ್ರ ಬಿಟ್ಟುಕೊಟ್ಟು 3 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ 2 ವಿಕೆಟ್ ಪಡೆದರು.
ಇದು ಚೆಪಾಕ್‌ನಲ್ಲಿ ಸಿಎಸ್‌ಕೆ ತಂಡದ ಅತಿ ಕಡಿಮೆ ಮೊತ್ತವಾಗಿದೆ. ಒಟ್ಟಾರೆ ಇದು ಅವರ ಮೂರನೇ ಕಡಿಮೆ ಮೊತ್ತವಾಗಿದೆ. 2013ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 79 ರನ್‌ಗಳಿಗೆ ಆಲೌಟ್ ಆಗಿದ್ದು ಕಡಿಮೆ ಮೊತ್ತವಾಗಿದೆ ಇದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯವಾಗಿತ್ತು.












Click it and Unblock the Notifications