MS Dhoni: ಎಂಎಸ್ ಧೋನಿಗೆ ಶುರುವಾಯ್ತು ಸಂಕಷ್ಟ!
2025ರ ಐಪಿಎಲ್‌ನಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿರುವ ಎಂಎಸ್ ಧೋನಿಗೆ ಹೊಸ ಸಂಕಷ್ಟ ಎದುರಾಗಿದೆ. ರಾಂಚಿಯಲ್ಲಿರುವ ಅವರ ಮನೆಯನ್ನು ಅಧಿಕಾರಿಗಳು ಖಾಲಿ ಮಾಡಿಸುವ ಆತಂಕ ಎದುರಾಗಿದೆ. ಧೋನಿ ತಿಳಿಯದೇ ಮಾಡಿರುವ ಎಡವಟ್ಟಿನಿಂದ ಈಗ ಮನೆ ಖಾಲಿ ಮಾಡುವ ಭೀತಿ ಎದುರಿಸುತ್ತಿದ್ದಾರೆ. ಜಾರ್ಖಂಡ್‌ನ ರಾಂಚಿಯ ಹರ್ಮು ಹೌಸಿಂಗ್ ಕಾಲೋನಿಯಲ್ಲಿರುವ ಮನೆಯನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಬಂದಿದ್ದು ತನಿಖೆ ಆರಂಭಿಸಲಾಗಿದೆ.
ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಆಟಗಾರನಾಗಿ ಅಮೋಘ ಸಾಧನೆ ಮಾಡಿದ ಎಂಎಸ್ ಧೋನಿಗೆ ಜಾರ್ಖಂಡ್ ಸರ್ಕಾರವು ಹರ್ಮು ಹೌಸಿಂಗ್ ಕಾಲೋನಿಯಲ್ಲಿ 6806 ಚದರ ಅಡಿ ವಿಸ್ತೀರ್ಣದ ಭೂಮಿಯನ್ನು ಉಡುಗೊರೆಯಾಗಿ ನೀಡಿತ್ತು. ಎಂಎಸ್ ಧೋನಿ ಹಲವು ದಿನ ಇಲ್ಲಿ ನಿರ್ಮಿಸಿದ್ದ ಮನೆಯಲ್ಲಿ ವಾಸಿಸುತ್ತಿದ್ದರು.

ಆದರೆ ಸಾರ್ವಜನಿಕ ಜೀವನದಿಂದ ದೂರ ಉಳಿಯಲು ನಿರ್ಧರಿಸಿದ್ದ ಅವರು ಅಂತಿಮವಾಗಿ ನಗರದ ಹೊರವಲಯದ ಸಿಮಾಲಿಯಾದಲ್ಲಿ ಸ್ಥಳಾಂತರವಾಗಲು ನಿರ್ಧರಿಸಿದರು. 2017ರಲ್ಲಿ ರಾಂಚಿಯ ಹೊರ ವಲಯದಲ್ಲಿ ತಮ್ಮ ಸ್ವಂತ ತೋಟದ ಮನೆ ನಿರ್ಮಿಸಿಕೊಂಡು ಅಲ್ಲೇ ವಾಸಿಸಲು ಆರಂಭಿಸಿದರು.
ಒಡಿಶಾ ಟಿವಿ ವರದಿ ಮಾಡಿರುವ ಪ್ರಕಾರ, ಧೋನಿ ತಮ್ಮ ತೋಟದ ಮನೆಗೆ ಸ್ಥಳಾಂತರವಾದ ಬಳಿಕ ಹರ್ಮು ಹೌಸಿಂಗ್ ಕಾಲೋನಿಯಲ್ಲಿರುವ ತಮ್ಮ ಆಸ್ತಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು ಅವರ ವಿರುದ್ಧ ತನಿಖೆ ಆರಂಭಿಸಲಾಗಿದೆ.
ಮುನ್ನೂರು ಜನರಿಗೆ ನೋಟಿಸ್
ಹರ್ಮು ಕಾಲೋನಿಯಲ್ಲಿ ಇದೇ ಆರೋಪದ ಮೇಲೆ 300 ಜನರಿಗೆ ನೋಟಿಸ್ ನೀಡಲಾಗಿದ್ದು ಇದರಲ್ಲಿ ಧೋನಿ ಕೂಡ ಒಬ್ಬರಾಗಿದ್ದಾರೆ. ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಾರ್ಖಂಡ್ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಸಂಜಯ್ ಲಾಲ್ ಪಾಸ್ವಾನ್ "ದೂರುಗಳನ್ನು ಸ್ವೀಕರಿಸಿದ್ದು ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆರೋಪ ಸಾಬೀತಾದರೆ ಎಂಎಸ್ ಧೋನಿಗೆ ನೋಟಿಸ್ ನೀಡಲಾಗುವುದು" ಎಂದು ಹೇಳಿದ್ದಾರೆ.
ಜಾರ್ಖಂಡ್ ರಾಜ್ಯ ಹೌಸಿಂಗ್ ಬೋರ್ಡ್ ಎರಡನೇ ಬಾರಿಗೆ ಎಂಎಸ್ ಧೋನಿಗೆ ನೋಟಿಸ್ ಜಾರಿ ಮಾಡಿದೆ. 2015ರಲ್ಲಿ ಹರ್ಮು ಹೌಸಿಂಗ್ ಕಾಲೋನಿಯಲ್ಲಿ ತಮ್ಮ ಮೂಲ ಆಸ್ತಿಗೆ ಹೊಂದಿಕೊಂಡಂತೆ ಅಕ್ರಮವಾಗಿ ನಿವೇಶನ ಮಂಜೂರು ಮಾಡಿರುವ ಬಗ್ಗೆ ಕೂಡ ಅವರು ನೋಟಿಸ್ ಪಡೆದಿದ್ದರು.
ಐಪಿಎಲ್‌ನಲ್ಲಿ ಕಣಕ್ಕಿಳಿಯಲು ಸಿದ್ಧತೆ
2024ರ ಐಪಿಎಲ್ ಬಳಿಕ ಎಂಎಸ್ ಧೋನಿ ನಿವೃತ್ತಿ ಘೋಷಣೆ ಮಾಡುತ್ತಾರೆ ಎನ್ನಲಾಗಿತ್ತಾದರೂ, ಧೋನಿ ಅಭಿಮಾನಿಗಳಿಗಾಗಿ ಇನ್ನೊಂದು ಆವೃತ್ತಿಯಲ್ಲಿ ಆಡಲು ನಿರ್ಧರಿಸಿದ್ದಾರೆ. 2025ರ ಐಪಿಎಲ್‌ನಲ್ಲಿ ಧೋನಿ ಆಡುವುದು ಖಚಿತವಾಗಿದೆ. ಅನ್‌ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ಧೋನಿಯನ್ನು ಸಿಎಸ್‌ಕೆ ರಿಟೇನ್ ಮಾಡಿದೆ.
43 ವರ್ಷದ ಎಂಎಸ್ ಧೋನಿ ಸದ್ಯ ಐಪಿಎಲ್‌ಗಾಗಿ ಫಿಟ್ ಆಗುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ತೋಟದಲ್ಲಿ ಕಾಲ ಕಳೆಯುವ ಧೋನಿ ಹಲವು ಬೆಳೆಗಳನ್ನು ಕೂಡ ಬೆಳೆಯುತ್ತಾರೆ. ಕೋವಿಡ್ ಸಮಯದಲ್ಲಿ ಅವರು ತಮ್ಮ ಫಾರ್ಮ್‌ನಲ್ಲಿ ಸ್ಟ್ರಾಬೆರಿ ಬೆಳೆಯುವಲ್ಲಿ ಯಶಸ್ವಿಯಾಗಿದ್ದರು. ಐಪಿಎಲ್‌ನಲ್ಲಿ ಮಾತ್ರ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಅವರು, ಬಳಿಕ ಸಾರ್ವಜನಿಕ ಜೀವನದಿಂದ ದೂರವೇ ಉಳಿಯುತ್ತಾರೆ.












Click it and Unblock the Notifications