ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಾವ್ಯಾ ಮಾರನ್ ಮಾಲೀಕತ್ವದ ಎಸ್‌ಆರ್‌ಎಚ್ ದಾಖಲೆಯ ಗೆಲುವು
SRH Vs MI IPL 2026: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ (ಏಪ್ರಿಲ್ 29) ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಾವ್ಯಾ ಮಾರನ್ ಮಾಲೀಕತ್ವದ ಸನ್‌ರೈಸರ್ಸ್ ಹೈದರಾಬಾದ್ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಎಂಐನ ರಿಯಾನ್ ರಿಕಲ್ಟನ್ ಅವರ ಭರ್ಜರಿ ಶತಕದ ಹೋರಾಟ ವ್ಯರ್ಥವಾಯಿತು.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಎಂಐ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿಯನ್ನು ಸನ್‌ರೈಸರ್ಸ್ ಹೈದರಾಬಾದ್ 18.4 ಓವರ್‌ಗಲ್ಲಿ ತಲುಪಿ ಭರ್ಜರಿ ಗೆಲುವು ಸಾಧಿಸಿತು.

ಬ್ಯಾಟರ್ ರಿಯಾನ್ ಹೋರಾಟ ವ್ಯರ್ಥ
ಎಡಗೈ ಬ್ಯಾಟರ್ ರಿಯಾನ್ ರಿಕಲ್ಟನ್ ಸಿಡಿಲ್ಲಬ್ಬರದ ಬ್ಯಾಟಿಂಗ್ ಮಾಡಿ ಕೇವಲ 44 ಎಸೆತಗಳಲ್ಲಿ ತಮ್ಮ ಚೊಚ್ಚಲ ಐಪಿಎಲ್ ಶತಕ ಪೂರೈಸಿದರು. ಇದು ಮುಂಬೈ ಇಂಡಿಯನ್ಸ್ ಪರ ದಾಖಲಾದ ಅತ್ಯಂತ ವೇಗದ ಶತಕವಾಗಿದೆ. ಅವರು 55 ಎಸೆತಗಳಲ್ಲಿ 10 ಬೌಂಡರಿ, 8 ಸಿಕ್ಸರ್‌ಗಳ ಸಹಿತ ಅಜೇಯ 123 ರನ್ ಗಳಿಸಿದರು. ಇದು ಮುಂಬೈ ಇಂಡಿಯನ್ಸ್ ಬ್ಯಾಟರ್ ಒಬ್ಬರು ದಾಖಲಿಸಿದ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ.
ಮುಂಬೈ ಪರ ಯಾರು ಎಷ್ಟು ರನ್ ಕಲೆಹಾಕಿದರು?
ರಿಯಾನ್ ರಿಕಲ್ಟನ್ ಮತ್ತು ವಿಲ್ ಜಾಕ್ಸ್ ಮೊದಲ ವಿಕೆಟ್‌ಗೆ 43 ಎಸೆತಗಳಲ್ಲಿ 93 ರನ್ ಕಳೆಹಾಕಿದರು. ವಿಲ್ ಜಾಕ್ಸ್ 22 ಎಸೆತಗಳಲ್ಲಿ 46 ರನ್‌ಗಳ ಕೊಡುಗೆ ನೀಡಿ ವಿಕೆಟ್ ಒಪ್ಪಿಸಿದರು. ಉಳಿದಂತೆ ನಮನ್ ಧೀರ್ 22(17), ನಾಯಕ ಹಾರ್ದಿಕ್ ಪಾಂಡ್ಯ 31(15), ತಿಲಕ್ ವರ್ಮಾ 7(5) ರನ್‌ಗಳನ್ನು ಕಲೆಹಾಕಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 243 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಮುಂಬೈ ವಿರುದ್ಧ ಎಸ್‌ಆರ್‌ಎಚ್ ಭರ್ಜರಿ ಗೆಲುವು
ಮುಂಬೈ ಇಂಡಿಯನ್ಸ್ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ಸನ್ ರೈಸರ್ಸ್ ತಂಡ ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು. ಟ್ರಾವಿಸ್ ಹೇಡ್ ಕೇವಲ 30 ಎಸೆತಗಳಲ್ಲಿ 4 ಬೌಂಡರಿ, 8 ಸಕ್ಸರ್‌ಗಳೊಂದಿಗೆ 76 ರನ್ ಚಚ್ಚಿದರೆ, ಹೆನ್ರಿಚ್ ಕ್ಲಾಸೆನ್ 30 ಎಸೆತಗಳಲ್ಲಿ ಅಜೇಯ 65 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಉಳಿದಂತೆ ಅಭಿಷೇಕ್ ಶರ್ಮಾ 45(24), ನಿತೀಶ್ ಕುಮಾರ್ ರೆಡ್ಡಿ 21(17), ಸಲೀಲ್ ಅರೋರಾ ಅಜೇಯ 30(10) ರನ್‌ಗಳ ಕೊಡುಗೆ ನೀಡಿ ಇವರು ಕೂಡ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಮುಂಬೈ ಇಂಡಿಯನ್ಸ್ ಸೋಲಿಗೆ ಕಾರಣಗಳು
ಮುಂಬೈ ಇಂಡಿಯನ್ಸ್ ತಂಡವು ಬೃಹತ್ ಮೊತ್ತ ಗಳಿಸಿದರೂ ಸಹ ಸೋಲನುಭವಿಸಿತು. ಮೈದಾನದಲ್ಲಿ ಮುಂಬೈ ಆಟಗಾರರು ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದರು. ಜಸ್ಪ್ರೀತ್ ಬುಮ್ರಾ ಸೇರಿದಂತೆ ಉಳಿದ ಮುಂಬೈ ಬೌಲರ್‌ಗಳು ರನ್ ನಿಯಂತ್ರಿಸುವಲ್ಲಿ ವಿಫಲರಾದರು. ಮುಂಬೈ ಇಂಡಿಯನ್ಸ್ ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಮೊತ್ತ ಮತ್ತು ವೇಗದ ಶತಕದ ಹೊರತಾಗಿಯೂ ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗದ ವೈಫಲ್ಯದಿಂದಾಗಿ ತಂಡ ಹೀನಾಯ ಸೋಲು ಕಂಡಿತು.
ಮುಂಬೈ ಪರ ವಿಶ್ವ ಶ್ರೇಷ್ಠ ಬೌಲರ್ ಜಸ್ಪ್ರಿತ್ ಬುಮ್ರಾ ಅವರು 4 ಓವರ್ ಬೌಲಿಂಗ್ ಮಾಡಿ ಯಾವುದೇ ವಿಕೆಟ್ ಪಡೆಯದೆ 54 ರನ್ ನೀಡಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಬಳಿಕ ಅಲ್ಲಾ ಘಜನ್‌ಫರ್ 2 ವಿಕೆಟ್ ಪಡೆದರೂ ಸಹ 51 ರನ್ ನೀಡಿ ದುಬಾರಿಯಾದರು. ಮೂರನೇಯದಾಗಿ ಅಶ್ವಿನಿ ಕುಮಾರ್ ಕೇವಲ ಎರಡು ಓವರ್ ಎಸೆದು ಬರೋಬ್ಬರಿ 41 ರನ್‌ಗಳನ್ನು ಕೊಡುಗೆಯಾಗಿ ನೀಡಿ ಅತೀ ದುಬಾರಿ ಎನಿಸಿಕೊಂಡರು. ಟ್ರೆಂಟ್ ಬೌಲ್ಟ್ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆಯುವುದಲ್ಲದೆ, ಇದ್ದಿದ್ದರಲ್ಲಿ ಉತ್ತಮವಾಗಿ ಬೌಲಿಂಗ್ ಪ್ರದರ್ಶನ ಮಾಡಿರು. ಒಟ್ಟಿನಲ್ಲಿ ಹೇಳುವುದಾದರೆ ಮಿಸ್ ಫೀಲ್ಡಿಂಗ್ ಹಾಗೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದೇ ಮುಂಬೈ ಇಂಡಿಯನ್ಸ್ ಸೋಲಿಗೆ ಪ್ರಮುಖ ಕಾರಣವಾಗಿದೆ.












Click it and Unblock the Notifications