India vs Bangladesh: ಟೀಂ ಇಂಡಿಯಾ ಅಬ್ಬರಕ್ಕೆ ನಲುಗಿದ ಬಾಂಗ್ಲಾದೇಶ; ಹೊಸ ದಾಖಲೆ ಬರೆದ ಭಾರತ
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ಬ್ಯಾಟರ್ ಗಳ ಅಬ್ಬರಕ್ಕೆ ಬಾಂಗ್ಲಾದೇಶ ನಲುಗಿ ಹೋಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 297 ರನ್ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಸಂಜು ಸ್ಯಾಮ್ಸನ್ ಅಮೋಘ ಶತಕ ಗಳಿಸಿ ಮಿಂಚಿದರೆ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್ ಅಬ್ಬರಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಅಭಿಷೇಕ್ ಶರ್ಮಾ ಕೇವಲ 4 ರನ್ ಗಳಿಸಿ ಔಟಾದರು. ಬಳಿಕ ಜೊತೆಯಾದ ಸಂಜು ಸ್ಯಾಮ್ಸನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಬಾಂಗ್ಲಾದೇಶದ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದರು. ಪ್ರತಿ ಓವರ್ ನಲ್ಲಿ ಬೌಂಡರಿ, ಸಿಕ್ಸರ್ ಬಾರಿಸುವ ಮೂಲಕ ಬಾಂಗ್ಲಾ ಬೌಲರ್ ಗಳ ಮೇಲೆ ಒತ್ತಡ ಹಾಕಿದರು.

ಮೊದಲ ಎರಡು ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಗಿದ್ದ ಸಂಜು ಸ್ಯಾಮ್ಸನ್ ಮೂರನೇ ಪಂದ್ಯದಲ್ಲಿ ಅಬ್ಬರಿಸಿದರು. 47 ಎಸೆತಗಳಲ್ಲಿ 11 ಬೌಂಡರಿ 8 ಸಿಕ್ಸರ್ ಸಹಿತ 111 ರನ್ ಗಳಿಸಿದರು. ಇದು ಸಂಜು ಸ್ಯಾಮ್ಸನ್ ಅವರ ಮೊದಲ ಅಂತಾರಾಷ್ಟ್ರೀಯ ಟಿ20 ಶತಕವಾಗಿದೆ. ರೋಹಿತ್ ಶರ್ಮಾ ಬಳಿಕ ವೇಗವಾಗಿ ಟಿ20 ಶತಕ ಗಳಿಸಿದ ಎರಡನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡರು. ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಅವರಿಗೆ ಇಂತಹ ಇನ್ನಿಂಗ್ಸ್ ಅಗತ್ಯವಾಗಿತ್ತು. ಕೊನೆಗೂ ತಮ್ಮ ವಿರುದ್ಧದ ಟೀಕೆಗಳಿಗೆ ಮೈದಾನದಲ್ಲೇ ಉತ್ತರ ಕೊಟ್ಟರು.
ಭಾರತದ ದಾಖಲೆಯ ಮೊತ್ತ
ಸಂಜು ಸ್ಯಾಮ್ಸನ್ ಔಟಾದ ಬಳಿಕ ನಾಯಕ ಸೂರ್ಯಕುಮಾರ್ ಯಾದವ್ ಅಬ್ಬರಿಸಿದರು. 35 ಎಸೆತಗಳಲ್ಲಿ 8 ಬೌಂಡರಿ 5 ಸಿಕ್ಸರ್ ಸಹಿತ 75 ರನ್ ಗಳಿಸಿ ಔಟಾದರು. ಬಳಿಕ ಬಂದ ರಿಯಾನ್ ಪರಾಗ್ ಕೇವಲ 13 ಎಸೆತಗಳಲ್ಲಿ 1 ಬೌಂಡರಿ 4 ಸಿಕ್ಸರ್ ಸಹಿತ 34 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 18 ಎಸೆತಗಳಲ್ಲಿ 4 ಬೌಂಡರಿ 4 ಸಿಕ್ಸರ್ ಸಹಿತ 47 ರನ್ ಗಳಿಸಿದರು.
ಇದು ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡ ಗಳಿಸಿದ ಅತಿ ಹೆಚ್ಚು ಮೊತ್ತವಾಗಿದೆ. 2017ರಲ್ಲಿ ಇಂದೋರ್ ನಲ್ಲಿ ಶ್ರೀಲಂಕಾ ವಿರುದ್ಧ 260 ರನ್ ಗಳಿಸಿದ್ದು, ಭಾರತ ಟಿ20 ಕ್ರಿಕೆಟ್‌ನಲ್ಲಿ ಈವರೆಗೆ ಗಳಿಸಿದ ದೊಡ್ಡ ಮೊತ್ತವಾಗಿದೆ. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇದು ಎರಡನೇ ಅತಿ ದೊಡ್ಡ ಮೊತ್ತವಾಗಿದೆ. ನೇಪಾಳ ಮಂಗೋಲಿಯಾ ವಿರುದ್ಧ 314 ರನ್ ಗಳಿಸಿದ್ದು ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ತಂಡವೊಂದು ಕಲೆಹಾಕಿದ ಅತ್ಯಧಿಕ ಸ್ಕೋರ್ ಆಗಿದೆ.












Click it and Unblock the Notifications