SRH vs LSG: ನಿಕೋಲಸ್ ಪೂರನ್ ಅಬ್ಬರಕ್ಕೆ ತತ್ತರಿಸಿದ ಸನ್‌ರೈಸರ್ಸ್ ಹೈದರಾಬಾದ್
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ 7ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 2024ರ ಆವೃತ್ತಿಯಲ್ಲಿ ಇದೇ ಅಂಗಳದಲ್ಲಿ ಸನ್‌ರೈಸರ್ಸ್ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಸನ್‌ರೈಸರ್ಸ್ ಹೈದರಾಬಾದ್ ಬಲಿಷ್ಠ ಬ್ಯಾಟಿಂಗ್ ಹೊಂದಿದ್ದರೂ ಅವರು ಎಷ್ಟೇ ರನ್ ಹೊಡೆದರೂ ನಾವು ಚೇಸ್ ಮಾಡುತ್ತೇವೆ ಎಂದು ಟಾಸ್ ಬಳಿಕ ನಾಯಕ ರಿಷಬ್ ಪಂತ್ ಹೇಳಿದ್ದರು.

ಸ್ಪೋಟಕ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದರೂ ಸನ್‌ರೈಸರ್ಸ್ ಹೈದರಾಬಾದ್ ಲಕ್ನೋ ಬೌಲರ್ ಗಳ ಶಿಸ್ತಿನ ಬೌಲಿಂಗ್ ದಾಳಿ ಎದುರು ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಅಭಿಷೇಕ್ ಶರ್ಮಾ 6 ರನ್ ಗಳಿಸಿ ಔಟಾದರೆ, ಇಶಾನ್ ಕಿಶನ್ ರನ್ ಗಳಿಸುವ ಮುನ್ನವೇ ವಿಕೆಟ್ ಒಪ್ಪಿಸಿದರು. ಟ್ರಾವಿಸ್ ಹೆಡ್ 28 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ಸಹಿತ 47 ರನ್ ಗಳಿಸಿದರು.
ನಿತೀಶ್ ಕುಮಾರ್ ರೆಡ್ಡಿ 32 ರನ್ ಗಳಿಸಿದರೆ, ಹೆನ್ರಿಚ್ ಕ್ಲಾಸೆನ್ 26 ರನ್ ಗಳಿಸಿದರು. ಅನಿಕೇತ್ ವರ್ಮಾ 13 ಎಸೆತಗಳಲ್ಲಿ 5 ಸಿಕ್ಸರ್ ಸಹಿತ 36 ರನ್ ಗಳಿಸುವ ಮೂಲಕ ಅಬ್ಬರಿಸಿದರು. ನಾಯಕ ಪಾಟ್ ಕಮ್ಮಿನ್ಸ್ ಕೂಡ 4 ಎಸೆತಗಳಲ್ಲಿ 18 ರನ್ ಗಳಿಸುವ ಮೂಲಕ ಮಿಂಚಿದರು. ಅಂತಿಮವಾಗಿ ಸನ್‌ರೈಸರ್ಸ್ ಹೈದರಾಬಾದ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 190 ರನ್ ಗಳಿಸಿತು.
ಶಾರ್ದೂಲ್ ಠಾಕೂರ್ ಮಿಂಚು
ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಶಾರ್ದೂಲ್ ಠಾಕೂರ್ ಬದಲಿ ಆಟಗಾರನಾಗಿ ಲಕ್ನೋ ಸೂಪರ್ ಜೈಂಟ್ಸ್ ಸೇರಿಕೊಂಡರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಎರಡು ವಿಕೆಟ್ ಪಡೆದಿದ್ದ ಅವರು, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೂಡ ಅಮೋಘ ಪ್ರದರ್ಶನ ನೀಡಿದರು. 4 ಓವರ್ ಗಳಲ್ಲಿ 34 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಕೂಡ ತಮ್ಮದಾಗಿಸಿಕೊಂಡರು. ಆವೇಶ್ ಖಾನ್, ದಿಗ್ವೇಶ್ ರಾಥಿ, ರವಿ ಬಿಷ್ಣೋಯ್ ಮತ್ತು ಪ್ರಿನ್ಸ್ ಯಾದವ್ ತಲಾ 1 ವಿಕೆಟ್ ಪಡೆದುಕೊಂಡರು.
ನಿಕೋಲಸ್ ಪೂರನ್, ಮಾರ್ಷ್ ಅಬ್ಬರ
191 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ 4 ರನ್ ಗಳಿಸುವಷ್ಟರಲ್ಲೇ ಏಡೆನ್ ಮಾರ್ಕ್ರಾಮ್ ಅವರ ವಿಕೆಟ್ ಕಳೆದುಕೊಂಡಿತು. ಆದರೆ ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ಸನ್‌ರೈಸರ್ಸ್ ಹೈದರಾಬಾದ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಇಬ್ಬರೂ ಈ ಪಂದ್ಯದಲ್ಲಿ ಅಬ್ಬರದ ಅರ್ಧಶತಕ ಗಳಿಸಿದರು.
ನಿಕೋಲಸ್ ಪೂರನ್ 26 ಎಸೆತಗಳಲ್ಲಿ 6 ಬೌಂಡರಿ 6 ಸಿಕ್ಸರ್ ಸಹಿತ 70 ರನ್ ಗಳಿಸಿದರು. ಮಿಚೆಲ್ ಮಾರ್ಷ್ 31 ಎಸೆತಗಳಲ್ಲಿ 52 ರನ್ ಗಳಿಸಿದರು. ನಾಯಕ ರಿಷಬ್ ಪಂತ್ 15 ರನ್ ಗಳಿಸಿದರೆ, ಡೇವಿಡ್ ಮಿಲ್ಲರ್ ಅಜೇಯ 13 ರನ್ ಹಾಗೂ ಅಬ್ದುಲ್ ಸಮದ್ 8 ಎಸೆತಗಳಲ್ಲಿ ಅಜೇಯ 22 ರನ್ ಗಳಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್‌ಗೆ ಅಮೋಘ ಗೆಲುವು ತಂದುಕೊಟ್ಟರು.












Click it and Unblock the Notifications