LSG Vs DC: ಲಕ್ನೋ ವಿರುದ್ಧ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್; 10ನೇ ಸ್ಥಾನಕ್ಕೆ ಕುಸಿದ ಆರ್‌ಸಿಬಿ
ಐಪಿಎಲ್ 2024ರ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಗೆಲುವಿನ ಓಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಬ್ರೇಕ್ ಹಾಕಿದೆ. ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಅದಕ್ಕೆ ತಕ್ಕಂತೆ ಉತ್ತಮ ಆರಂಭ ಸಿಗಲಿಲ್ಲ, 2.5 ಓವರ್ ಗಳಲ್ಲಿ 28 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಕ್ವಿಂಟನ್ ಡಿ ಕಾಕ್ 19 ರನ್ ಗಳಿಸಿ ಔಟಾದರು.

ಬಳಿಕ ಬಂದ ದೇವದತ್ ಪಡಿಕ್ಕಲ್ ನೀರಸ ಪ್ರದರ್ಶನ ಮುಂದುವರೆಸಿದರು. 6 ಎಸೆತಗಳಲ್ಲಿ ಮೂರು ರನ್ ಗಳಿಸಿ ಔಟಾದರು. ಮಾರ್ಕಸ್ ಸ್ಟೊಯಿನಿಸ್ 8 ರನ್ ಮತ್ತು ನಿಕೋಲಸ್ ಪೂರನ್ (0) ಇಬ್ಬರೂ ಕೂಡ ಕುಲದೀಪ್ ಯಾದವ್ ಅವರ ಒಂದೇ ಓವರ್ ನಲ್ಲಿ ಔಟಾದರು.
ನಾಯಕ ಕೆಎಲ್ ರಾಹುಲ್ ಕೂಡ 22 ಎಸೆತಗಳಲ್ಲಿ 39 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ದೀಪಕ್ ಹೂಡಾ 10 ರನ್ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಆಯುಷ್ ಬದೋನಿ 35 ಎಸೆತಗಳಲ್ಲಿ ಅಜೇಯ 55 ರನ್ ಮತ್ತು ಅರ್ಷದ್ ಖಾನ್ 16 ಎಸೆತಗಳಲ್ಲಿ 20 ರನ್ ಗಳಿಸುವ ಮೂಲಕ ಎಲ್‌ಎಸ್‌ಜಿ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿತು.
ಕುಲದೀಪ್ ಯಾದವ್ 4 ಓವರ್ ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರು. ಖಲೀಲ್ ಅಹ್ಮದ್ 2 ವಿಕೆಟ್ ಪಡೆದು ಮಿಂಚಿದರು.
ಸುಲಭ ಗೆಲುವು ಸಾಧಿಸಿದ ಡೆಲ್ಲಿ
ಈ ಸವಾಲಿನ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಆರಂಭದಲ್ಲೇ ಆಘಾತ ಅನುಭವಿಸಿತು. ಡೇವಿಡ್ ವಾರ್ನರ್ ಕೇವಲ 8 ರನ್ ಗಳಿಸಿ ಔಟಾದರು. ಆದರೆ, ಪೃಥ್ವಿ ಶಾ ಮತ್ತು ಜೇಕ್ ಫ್ರೇಸರ್ ಮೆಕ್‌ಗುರ್ಕ್ ತಂಡಕ್ಕೆ ಆಸರೆಯಾದರೆ, ಪೃಥ್ವಿ ಶಾ 32 ರನ್ ಗಳಿಸಿ ಔಟಾದರೆ, ಜೇಕ್ ಮೊದಲ ಪಂದ್ಯದಲ್ಲೇ ಅರ್ಧಶತಕ ಗಳಿಸಿದರು.
ಜೇಕ್ ಫ್ರೇಸರ್ 35 ಎಸೆತಗಳಲ್ಲಿ 55 ರನ್ ಗಳಿಸಿ ಔಟಾದರು. ರಿಷಬ್ ಪಂತ್ 24 ಎಸೆತಗಳಲ್ಲಿ 41 ರನ್ ಗಳಿಸಿದರು. ಟ್ರಿಸ್ಟನ್ ಸಬ್ಸ್ ಅಜೇಯ 15 ಮತ್ತು ಶಾಯ್‌ಹೋಪ್ ಅಜೇಯ 11 ರನ್ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸುಲಭ ಗೆಲುವು ತಂದುಕೊಟ್ಟರು.
ಐಪಿಎಲ್ 2024ರಲ್ಲಿ ಎರಡನೇ ಗೆಲುವಿನ ಮೂಲಕ 4 ಅಂಕಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ 4 ಅಂಕಗಳೊಂದಿಗೆ 9ನೇ ಸ್ಥಾನಕ್ಕೆ ಏರಿಕೆ ಕಂಡರೆ, ಆರ್ ಸಿಬಿ 10ನೇ ಸ್ಥಾನಕ್ಕೆ ಕುಸಿಯಿತು.












Click it and Unblock the Notifications