Paris Olympics: ಕಂಚು ಗೆಲ್ಲುವಲ್ಲಿ ವಿಫಲವಾದ ಲಕ್ಷ್ಯ ಸೇನ್; ರೋಚಕ ಪಂದ್ಯದಲ್ಲಿ ಗೆದ್ದ ಲೀ ಝಿ ಜಿಯಾ
ಪ್ಯಾರಿಸ್ ಒಲಿಂಪಿಕ್ಸ್ ಸೆಮಿಫೈನಲ್‌ನಲ್ಲಿ ಸೋತರು ಭಾರತಕ್ಕೆ ಕಂಚಿನ ಪದಕದ ಭರವಸೆ ಮೂಡಿಸಿದ್ದ ಲಕ್ಷ್ಯ ಸೇನ್ ಆಘಾತ ಅನುಭವಿಸಿದ್ದಾರೆ. ಸೋಮವಾರ ನಡೆದ ರೋಚಕ ಪಂದ್ಯದಲ್ಲಿ ಮಲೇಷ್ಯಾದ ಲೀ ಝೀ ಜಿಯಾ ವಿರುದ್ಧ ಸೋತ ಲಕ್ಷ್ಯ ಸೇನ್ ಪದಕ ಗೆಲ್ಲದೆ ಒಲಿಂಪಿಕ್ಸ್‌ನಿಂದ ಹೊರನಡೆದಿದ್ದಾರೆ. ಈ ಮೂಲಕ ಈ ಬಾರಿ ಒಲಿಂಪಿಕ್‌ನಲ್ಲಿ ಭಾರತ ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆಲ್ಲುವ ಕನಸು ಭಗ್ನವಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಪುರುಷರ ಬ್ಯಾಡ್ಮಿಂಟನ್ ಕಂಚಿನ ಪದಕದ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಮಲೇಷ್ಯಾದ ಲೀ ಝೀ ಜಿಯಾ ವಿರುದ್ಧ ಸೋಲು ಅನುಭವಿಸಿದರು. ಅತ್ಯುತ್ತಮವಾಗಿ ಆಡಿದ ಲಕ್ಷ್ಯ ಸೇನ್ ಮೊದಲನೇ ಗೇಮ್ ಅನ್ನು 21-13 ರಲ್ಲಿ ಗೆಲ್ಲುವ ಮೂಲಕ ಭರವಸೆ ಮೂಡಿಸಿದ್ದರು.

ಆದರೆ ಪಂದ್ಯದ ನಡುವೆ ಅವರು ಬಲಗೈನಲ್ಲಿ ಸಮಸ್ಯೆ ಉಂಟಾಯಿತು. ವೈದ್ಯಕೀಯ ಉಪಚಾರಕ್ಕೆ ಕೆಲ ಸಮಯ ತೆಗೆದುಕೊಂಡರೂ ಮೊದಲ ಗೇಮ್‌ನಲ್ಲಿ ಆಡಿದಂತೆ ಅವರು ಆಕ್ರಮಣಕಾರಿಯಾಗಿ ಆಡಲು ಸಾಧ್ಯವಾಗಲಿಲ್ಲ. ಅವರ ಆಟದಲ್ಲಿ ವ್ಯತ್ಯಾಸವನ್ನು ಸ್ಪಷ್ಟವಾಗಿ ಗಮನಿಸಬಹುದಾಗಿತ್ತು.
ಎರಡು ಮತ್ತು ಮೂರನೇ ಗೇಮ್‌ನಲ್ಲಿ ಲಕ್ಷ್ಯ ಸೇನ್‌ರ ಬಲಗೈ ಸಮಸ್ಯೆಯ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಂಡ ಲೀ ಝೀ ಜಿಯಾ ಅತ್ಯುತ್ತಮ ಪ್ರದರ್ಶನ ನೀಡಿದರು. ಆಕ್ರಮಣಕಾರಿ ಆಟವಾಡಿದ ಅವರು ಎರಡು ಮತ್ತು ಮೂರನೇ ಗೇಮ್‌ನಲ್ಲಿ ಪ್ರಾಬಲ್ಯ ಸಾಧಿಸಿದರು.
ಎರಡನೇ ಗೇಮ್‌ನಲ್ಲಿ ಲಕ್ಷ್ಯ ಸೇನ್ 8-3 ಮುನ್ನಡೆ ಸಾಧಿಸಿದ್ದರೂ ಬಳಿಕ 21-16 ರಿಂದ ಕಳೆದುಕೊಂಡರು. ಮೂರನೇ ಗೇಮ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಲೀ ಝೀ ಜಿಯಾ 21-11 ರಲ್ಲಿ ಗೆಲ್ಲುವ ಮೂಲಕ ಕಂಚಿನ ಪದಕ ಗೆದ್ದುಕೊಂಡರು. ಇದರಿಂದಾಗಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಪುರುಷ ಷಟ್ಲರ್ ಎನ್ನುವ ದಾಖಲೆ ಬರೆಯುವಲ್ಲಿ ಲಕ್ಷ್ಯ ಸೇನ್ ವಿಫಲವಾದರು.












Click it and Unblock the Notifications