
ಕುಲದೀಪ್ ಸೇನ್- ಶೇಷ ಭಾರತಕ್ಕೆ ಸ್ಟಾರ್; ವಿಶ್ವಕಪ್ ಟೀಮ್‌ಗೆ ನೆಟ್ ಬೌಲರ್
ರಾಜಕೋಟ್, ಅ. 4: ರಣಜಿ ಚಾಂಪಿಯನ್ ಸೌರಾಷ್ಟ್ರ ವಿರುದ್ಧ ಶೇಷ ಭಾರತ ತಂಡ ಗೆಲುವು ಸಾಧಿಸಿ ಇರಾನಿ ಕಪ್ ಎತ್ತಿಹಿಡಿಯಿತು. 105 ರನ್ ಸಾಧಾರಣ ಗುರಿಯನ್ನು ಬೆನ್ನತ್ತಿದ ರೆಸ್ಟ್ ಆಫ್ ಇಂಡಿಯಾ 8 ವಿಕೆಟ್‌ಗಳಿಂದ ಜಯಭೇರಿ ಭಾರಿಸಿತು.
ಶೇಷ ಭಾರತದ ಗೆಲುವಿನಲ್ಲಿ ವೇಗದ ಬೌಲರ್‌ಗಳಾದ ಮುಕೇಶ್ ಕುಮಾರ್ ಮತ್ತು ಕುಲದೀಪ್ ಸೇನ್ ಪ್ರಮುಖ ಪಾತ್ರ ವಹಿಸಿದರು. ಬ್ಯಾಟರ್ ಸರ್ಫರಾಜ್ ಖಾನ್ ಅಮೋಘ ಶತಕವೂ ರೆಸ್ಟ್ ಆಫ್ ಇಂಡಿಯಾ ತಂಡಕ್ಕೆ ಸಹಾಯವಾಯಿತು.
ಪಂದ್ಯದ ಮೊದಲ ಇನ್ನಿಂಗ್ಸೇ ಫಲಿತಾಂಶಕ್ಕೆ ನಿರ್ಣಾಯಕವಾಗಿತ್ತು. ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ ಕೇವಲ 98 ರನ್‌ಗೆ ಸರ್ವಪತನಗೊಂಡಿತ್ತು. ಏಳು ಮಂದಿ ಆಟಗಾರರು ಎರಡಂಕಿ ಸ್ಕೋರ್ ಗಳಿಸಲು ವಿಫಲರಾದರು. ವೇಗದ ಬೌಲರ್‌ಗಳಾದ ಮುಕೇಶ್ ಕುಮಾರ್, ಕುಲದೀಪ್ ಸೇನ್ ಮತ್ತು ಉಮ್ರಾನ್ ಮಲಿಕ್ ಎಲ್ಲಾ ವಿಕೆಟ್‌ಗಳನ್ನು ಹಂಚಿಕೊಂಡರು.
ಇದಕ್ಕೆ ಪ್ರತಿಯಾಗಿ ರೆಸ್ಟ್ ಆಫ್ ಇಂಡಿಯಾದ ಮೊದಲ ಇನ್ನಿಂಗ್ಸ್ 374 ರನ್‌ವರೆಗೆ ಬೆಳೆಯಿತು. ಸರ್ಫರಾಜ್ ಖಾನ್ 138 ರನ್ ಗಳಿಸಿದರು. ಸೌರಭ್ ಕುಮಾರ್, ನಾಯಕ ಗಗನ ಹನುಮ ವಿಹಾರಿ ಅರ್ಧಶತಕಗಳನ್ನು ಗಳಿಸಿದರು. ಸೌರಾಷ್ಟ್ರದ ಚೇತನ್ ಸಕಾರಿಯಾ 5 ವಿಕೆಟ್ ಪಡೆದು ಗಮನ ಸೆಳೆದರು.
ಈ ವೇಳೆ ಶೇಷ ಭಾರತ ತಂಡಕ್ಕೆ ಸುಲಭ ಗೆಲುವಿನ ಸಾಧ್ಯತೆ ತೋರಿತ್ತು. ಆದರೆ, ಸೌರಾಷ್ಟ್ರ ತಂಡ ಎರಡನೇ ಇನ್ನಿಂಗ್ಸಲ್ಲಿ ತಿರುಗೇಟು ನೀಡುತು. ಶೆಲ್ಡನ್ ಜಾಕ್ಸನ್, ಅರ್ಪಿತ್ ವಸವಾಡ, ಪ್ರೇರಕ್ ಮಂಕಡ್ ಮತ್ತು ಜಯದೇವ್ ಉನಾದ್ಕತ್ ಅಮೋಘ ಅರ್ಧಶತಕ ಭಾರಿಸಿದರು. ಉನಾದ್ಕತ್ 11 ರನ್‌ಗಳಿಂದ ಶತಕ ವಂಚಿತರಾದರು. ಸೌರಾಷ್ಟ್ರದ ಎರಡನೇ ಇನ್ನಿಂಗ್ಸ್ 380 ರನ್‌ಗೆ ಅಂತ್ಯಗೊಂಡಿತು. ಅದು ಇನ್ನೂ 100 ರನ್ ಹೆಚ್ಚುವರಿಯಾಗಿ ಬಂದಿದ್ದರೆ ಶೇಷ ಭಾರತಕ್ಕೆ ತುಸು ಕಠಿಣ ಸವಾಲು ಒಡ್ಡಬಹುದಿತ್ತು.
ಆದರೆ, ರೆಸ್ಟ್ ಆಫ್ ಇಂಡಿಯಾದ ಕುಲದೀಪ್ ಸೇನ್ 5 ವಿಕೆಟ್ ಪಡೆದು ಸೌರಾಷ್ಟ್ರದ ರನ್ ಗತಿಗೆ ಕಡಿವಾಣ ಹಾಕಿದರು. ಕುಲದೀಪ್ ಸೇನ್ ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ಸೇರಿ 8 ವಿಕೆಟ್ ಪಡೆದರು.
ಗೆಲ್ಲಲು 105 ರನ್ ಪಡೆದ ರೆಸ್ಟ್ ಆಫ್ ಇಂಡಿಯಾ ಆರಂಭದಲ್ಲಿ ಡಬಲ್ ಆಘಾತ ಅನುಭವಿಸಿದರೂ ಅಭಿಮನ್ಯು ಈಶ್ವರನ್ ಮತ್ತು ಎಸ್ ಭರತ್ ಇಬ್ಬರೂ 3ನೇ ವಿಕೆಟ್‌ಗೆ 81 ರನ್‌ಗಳ ಮುರಿಯದ ಜೊತೆಯಾಟ ನೀಡಿ ಗೆಲುವನ್ನು ಸುಗಮಗೊಳಿಸಿದರು.
ನೆಟ್ ಬೌಲರ್ ಕುಲದೀಪ್ ಸೇನ್
ಕುಲದೀಪ್ ಸೇನ್ ಕಳೆದ ಒಂದೆರಡು ವರ್ಷಗಳಿಂದ ಬಹಳ ಗಮನ ಸೆಳೆಯುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಎಂಆರ್‌ಎಫ್ ಪೇಸ್ ಅಕಾಡೆಮಿಯಲ್ಲಿ ಕಲಿತಿರುವ ಕುಲದೀಪ್ ಸೇನ್ ಮತ್ತು ಉಮ್ರಾನ್ ಮಲಿಕ್ ಇಬ್ಬರೂ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲುರು.

ಕುಲದೀಪ್ ಸೇನ್, ಚೇತನ್ ಸಕಾರಿಯಾ ಮತ್ತು ಮುಕೇಶ್ ಚೌಧರಿ ಈ ಮೂವರು ವೇಗದ ಬೌಲರ್‌ಗಳು ಅಕ್ಟೋಬರ್ 6ರಂದು ಆಸ್ಟ್ರೇಲಿಯಾಗೆ ಹೋಗಲಿದ್ದು, ಅಲ್ಲಿ ಟಿ20 ವಿಶ್ವಕಪ್‌ನಲ್ಲಿ ಆಡುವ ಟೀಮ್ ಇಂಡಿಯಾಗೆ ನೆಟ್ ಬೌಲರ್ ಆಗಿ ಕೆಲಸ ಮಾಡಲಿದ್ದಾರೆ.
ಈ ಮೂವರ ಪೈಕಿ ಕುಲದೀಪ್ ಸೇನ್ ಮತ್ತು ಚೇತನ್ ಸಕಾರಿಯಾ ಇರಾನಿ ಕಪ್‌ನಲ್ಲಿ ಆಡಿದ್ದಾರೆ. ಇಬ್ಬರೂ ಗಮನ ಸೆಳೆಯುವ ಪ್ರದರ್ಶನ ನೀಡಿದ್ದಾರೆ. ಸೌರಾಷ್ಟ್ರದ ಚೇತನ್ ಸಕಾರಿಯಾ ಕಳೆದ ಕೆಲ ವರ್ಷಗಳಿಂದ ಐಪಿಎಲ್‌ನಲ್ಲೂ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದಾರೆ. ಇನ್ನು, ಇರಾನಿ ಕಪ್‌ನಲ್ಲಿ ಪಂದ್ಯ ಶ್ರೇಷ್ಠ ಗೌರವಕ್ಕೆ ಬಾಜನರಾಗಿರುವ ವೇಗದ ಬೌಲರ್ ಮುಕೇಶ್ ಕುಮಾರ್ ಅವರು ಸೌತ್ ಆಫ್ರಿಕಾ ವಿರುದ್ಧದ ಓಡಿಐ ಸರಣಿಗೆ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ.
(ಒನ್ಇಂಡಿಯಾ ಸುದ್ದಿ)